

ಉಡುಪಿ: ನೂತನ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ-2020) ವಿಶ್ವದಲ್ಲೇ ಅತ್ಯುತ್ತಮ ಶಿಕ್ಷಣ ನೀತಿಯಾಗಿದೆ ಎಂದು ಮಣಿಪಾಲ ಆಕಾಡೆಮಿ ಆಫ್ ಹೈಯರ್ ಎಜುಕೇಶನ್ ಸಹ ಕುಲಾಧಿಪತಿ, ಲೆಫ್ಟಿನೆಂಟ್ ಜನರಲ್ ಡಾ.ಎಂ.ಡಿ ವೆಂಕಟೇಶ್ ಅಭಿಪ್ರಾಯಪಟ್ಟರು.
ಶನಿವಾರ ಎಂಜಿಎಂ ಕಾಲೇಜಿನಲ್ಲಿ ನೂತನ ಶಿಕ್ಷಣ ನೀತಿ-2020 ಅಳವಡಿಕೆ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು. ನೂತನ ನೀತಿ ದೇಶದ ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ಆರೋಗ್ಯಕರ ಬದಲಾವಣೆ ತರಲಿದ್ದು, ಇದರ ಅನುಷ್ಠಾನ ಕಾರ್ಯದಲ್ಲಿ ಅನೇಕ ಸವಾಲುಗಳಿವೆ ಎಂದು ಅಭಿಪ್ರಾಯಪಟ್ಟರು. ಎನ್‌ಇಪಿಯಲ್ಲಿ ಭಾರತೀಯ ಮೌಲ್ಯಗಳು, ವೈಜ್ಞಾನಿಕ ಮನೋಭಾವ ಮತ್ತು ಸಂವಹನ ಕೌಶಲಗಳಿಗೆ ಮಹತ್ವ ನೀಡಲಾಗಿದೆ ಎಂದರು.
ನೂತನ ಶಿಕ್ಷಣ ನೀತಿಯಲ್ಲಿ ಪ್ರಾದೇಶಿಕ ಭಾಷೆ, ಸಾಂಸ್ಕೃತಿಕ, ಕ್ರೀಡೆ ಸೇರಿದಂತೆ ಕೌಶಲ ಶಿಕ್ಷಣಕ್ಕೆ ಒತ್ತು ನೀಡಲಾಗಿದೆ ಎಂದು ಕರ್ನಾಟಕ ವಿಶ್ವವಿದ್ಯಾಲಯ ವಿಶ್ರಾಂತ ಉಪ ಕುಲಪತಿ ಡಾ.ಶ್ರೀನಿವಾಸ್ ಸೈದಾಪುರ್ ಹೇಳಿದರು. ಇಲ್ಲಿವರೆಗೆ ಡಾ.ರಾಧಾಕೃಷ್ಣನ್, ಯಶಪಾಲ್, ಕಸ್ತೂರಿ ರಂಗನ್ ಸೇರಿದಂತೆ 20ಕ್ಕೂ ಅಧಿಕ ಸಮಿತಿ, ಆಯೋಗಗಳು ರಚನೆಯಾಗಿದ್ದು, ಶಿಕ್ಷಣ ನೀತಿಗೆ ತಯಾರಿಸಿದ ವರದಿಗಳು ಸಮರ್ಪಕವಾಗಿ ಅನುಷ್ಠಾನವಾಗಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ಎಂಜಿಎಂ ಕಾಲೇಜು ಪ್ರಾಂಶುಪಾಲ ಡಾ.ಶ್ರೀನಿವಾಸ್ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಪದವಿಪೂರ್ವ ಕಾಲೇಜು ಪ್ರಾಂಶುಪಾಲೆ ಮಾಲತಿ ದೇವಿ, ಮೂಡುಬಿದಿರೆ ಆಳ್ವಾಸ್ ಎಜುಕೇಶನ್ ಫೌಂಡೇಶನ್ ಚೇರ್ಮನ್ ಡಾ.ಮೋಹನ್ ಆಳ್ವ, ಮೂಡುಬಿದಿರೆ ಮಹಾವಿರ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಅಭಯಚಂದ್ರ ಜೈನ್, ಮಂಗಳೂರು ಜೆಸ್ಯುಟ್ ಎಜುಕೇಶನಲ್ ಟ್ರಸ್ಟ್ ರೆಕ್ಟರ್ ಮೆಲ್ವಿನ್ ಪಿಂಟೊ, ಎಸ್‌ಡಿಎಂ ಎಜುಕೇಶನ್ ಟ್ರಸ್ಟ್ ಕಾರ್ಯದರ್ಶಿ ಡಾ.ಬಿ.ಯಶೋವರ್ಮ, ಕುಮಟ ಕೊಂಕಣ್ ಎಜುಕೇಶನ್ ಟ್ರಸ್ಟ್ ಕಾರ್ಯದರ್ಶಿ ಮುರಳಿಧರ ಪ್ರಭು, ಮಂಗಳೂರು ಯೆನೆಪೋಯ ಇನ್‌ಸ್ಟ್ಟಿಟ್ಯೂಶನ್ ಉಪ ನಿರ್ದೇಶಕ ಡಾ.ಅರುಣ್ ಭಾಗವತ್, ದಾಂಡೇಲಿ ಎಜುಕೇಶನ್ ಟ್ರಸ್ಟ್‌ನ ಮಾಜಿ ಸಲಹೆಗಾರ ಡಾ.ಆರ್.ಜಿ ಹೆಗ್ಡೆ ಭಾಗವಹಿಸಿದ್ದರು.
ಹೊಸ ಶಿಕ್ಷಣ ನೀತಿಯಲ್ಲಿದೆ ಭರವಸೆ
ಈವರೆಗೆ ಶಿಕ್ಷಣ ನೀತಿಯಲ್ಲಿ ಕ್ರೀಡೆ ಮತ್ತು ಸಾಂಸ್ಕೃತಿಕ ವಿಚಾರಗಳು ವೇದಿಕೆಗೆ ಮಾತ್ರ ಸೀಮಿತವಾಗಿದ್ದು, ಸಮರ್ಪಕ ರೀತಿಯಲ್ಲಿ ಜಾರಿಗೆ ಬಂದಿರಲಿಲ್ಲ. ಹೊಸ ಶಿಕ್ಷಣ ನೀತಿಯಲ್ಲಿ ಈ ಬಗ್ಗೆ ಭರವಸೆ ಹೊಂದಿದ್ದೇವೆ ಎಂದು ಆಳ್ವಾಸ್ ಫೌಂಡೇಶನ್ ಅಧ್ಯಕ್ಷ ಡಾ.ಮೋಹನ್ ಆಳ್ವ ಅಭಿಪ್ರಾಯಪಟ್ಟರು. ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಸ್ಥಳೀಯ ಸಂಸ್ಕೃತಿ ಮತ್ತು ಕ್ರೀಡೆ ಬಗ್ಗೆ ಅವರು ವಿಚಾರ ಮಂಡಿಸಿದರು. ಪ್ರಾಥಮಿಕ ಶಿಕ್ಷಣದ ಹಂತದಲ್ಲಿ ಪ್ರತೀ ಮಗುವಿಗೆ ಕಲೆ ಮತ್ತು ಸಾಂಸ್ಕೃತಿಕ ಅಭಿರುಚಿ ಮೂಡಿಸಬೇಕು. ಇದರಿಂದ ಸಾಮಾಜಿಕ ಸೌಹಾರ್ದ ಸಾಧ್ಯ. ಕಲೆ, ಸಾಂಸ್ಕೃತಿಕ, ಕ್ರೀಡೆಗೆ ಕೃಪಾಂಕ ನೀಡುವ ನಿಯಮ ಜಾರಿಗೆ ಬರಬೇಕು. ಇದು ನೂತನ ಶಿಕ್ಷಣ ನೀತಿಯಲ್ಲಿ ಅಗತ್ಯವಾಗಿ ಜಾರಿಯಾಗಬೇಕು ಎಂದು ಡಾ.ಆಳ್ವ ಹೇಳಿದರು.
ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿ ಈವರೆಗೆ ಶಿಕ್ಷಣದ ಹಕ್ಕಿನ ಬಗ್ಗೆ ಮಾತ್ರ ಚರ್ಚೆಯಾಗುತ್ತಿತ್ತು. ಆದರೆ ಸರಿಯಾದ ಶಿಕ್ಷಣ ರೂಪಿಸುವ ಬಗ್ಗೆ ಮಾತುಕತೆ ನಡೆದಿರಲಿಲ್ಲ. ನೂತನ ಶಿಕ್ಷಣ ನೀತಿಯೂ ಕಲಿಕೆ ಮತ್ತು ಬೋಧಿಸುವ ಕ್ರಮದ ಬಗ್ಗೆ ಗಂಭೀರ ಚಿಂತನೆ ಒಳಗೊಂಡಿದೆ. ಈ ಮೂಲಕ ಶಾಲೆ, ಕಾಲೇಜು, ವಿಶ್ವವಿದ್ಯಾನಿಲಯಗಳು ಬದಲಾವಣೆಗೆ ಒಳಪಡುವುದು ಅನಿವಾರ್ಯ.
ಡಾ.ಶ್ರೀನಿವಾಸ್ ಸೈದಾಪುರ್, ವಿಶ್ರಾಂತ ಉಪ ಕುಲಪತಿ, ಕರ್ನಾಟಕ ವಿಶ್ವವಿದ್ಯಾಲಯ