

ಬಸವಾಪಟ್ಟಣ: ಪ್ರಸಕ್ತ ಸಮಾಜದಲ್ಲಿ ಶಾಂತಿ ಕಾಪಾಡಲು ವಿವಿಧ ಜಾತಿ, ಧರ್ಮಗಳ ನಡುವೆ ಸಾಮರಸ್ಯ ಮೂಡಿಸಬೇಕಿದೆ ಎಂದು ಗವಿಮಠದ ಶಿವಕುಮಾರ ಹಾಲಸ್ವಾಮೀಜಿ ಅಭಿಪ್ರಾಯಪಟ್ಟರು.
ಗವಿಮಠದಲ್ಲಿ ಈಚೆಗೆ ಏರ್ಪಡಿಸಿದ್ದ ಅಮಾವಾಸ್ಯೆ ಸಭೆಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಎಲ್ಲೆಡೆ ಜಾತೀಯತೆ, ಮತೀಯ ಕಲಹ ಹೆಚ್ಚಾಗುತ್ತಿದೆ. ಅಶಾಂತಿ, ಅಧರ್ಮ, ಅನ್ಯಾಯ ತಾಂಡವವಾಡುತ್ತಿದೆ. ಮಾನವೀಯ ಮೌಲ್ಯಗಳು ಮರೆಯಾಗುತ್ತಿದೆ. ದುರಾಸೆಗೆ ಪರಿಹಾರ ಇಲ್ಲವಾಗಿದೆ. ಮನುಷ್ಯನ ಮನಸ್ಸಿನ ಮೇಲೆ ಹತೋಟಿ ಅಗತ್ಯ. ಇಲ್ಲವಾದರೆ ಕೇಡು ನಿಶ್ಚಿತ ಎಂದರು.
ಎಲ್ಲರೂ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಎನ್ನುವ ದಾಸರ ಪದವು ಇಂದು ಎಲ್ಲರೂ ಮಾಡುವುದು ಓಟಿಗಾಗಿ, ನೋಟಿಗಾಗಿ ಎಂಬಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರವಚನಕಾರ ಎಂ.ಬಿ. ರಾಜಪ್ಪ ಮಾತನಾಡಿ, ಸಮಾಜದಲ್ಲಿ ಅರಿವು ಮೂಡಿಸಬೇಕಾದ ಕೆಲ ಧರ್ಮಗುರುಗಳು ಇಂದು ಚಂಚಲತೆಯಿಂದ ದುಡ್ಡಿನ ದಾಸರಾಗುತ್ತಿದ್ದಾರೆ. ಇದರಿಂದ ಯಾರನ್ನು ನಂಬಬೇಕು ಎಂಬುದು ತಿಳಿಯದಂತಾಗಿದೆ ಎಂದರು.
ಶ್ರೀಮಠದ ಕಲಾ ಬಳಗದವರಿಂದ ಸಂಗೀತ ಸೇವೆ ನಡೆಯಿತು. ಆಡಳಿತ ಸಮಿತಿ ಮುಖ್ಯಸ್ಥ ಕೆ.ಎಂ. ವೀರಯ್ಯ, ಕಲಾ ಬಳಗದ ಅಧ್ಯಕ್ಷ ಎಸ್.ಆರ್. ಸುರೇಶ್, ಸಂಗಾಹಳ್ಳಿ ಕುಮಾರಸ್ವಾಮಿ, ಕ್ಯಾಸಿನಕೆರೆ ಹಾಲೇಶಚಾರ್, ಸಿ.ಎಂ. ಕರಿಸಿದ್ದಯ್ಯ, ಎಂ.ಸಿ. ರುದ್ರೇಶ್ ಇದ್ದರು.