ನೂತನ ಮಡಿಕೇರಿ ದಸರಾ ಸಮಿತಿ ರಚಿಸಿ

B.M.RAJESH
Published on

ಮಡಿಕೇರಿ: ಐತಿಹಾಸಿಕ ಮಡಿಕೇರಿ ದಸರಾ ಜನೋತ್ಸವಕ್ಕೆ ಇನ್ನು ಕೇವಲ ಎರಡೂವರೆ ತಿಂಗಳು ಮಾತ್ರ ಬಾಕಿ ಉಳಿದಿದ್ದು, ಶೀಘ್ರ ನೂತನ ಮಡಿಕೇರಿ ದಸರಾ ಸಮಿತಿಯನ್ನು ರಚಿಸಬೇಕೆಂದು ದಶಮಂಟಪ ಸಮಿತಿಯ ಮಾಜಿ ಅಧ್ಯಕ್ಷ ಬಿ.ಎಂ.ರಾಜೇಶ್ ಒತ್ತಾಯಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಪ್ರತಿವರ್ಷ ತರಾತುರಿಯಲ್ಲಿ ಸಮಿತಿ ರಚನೆ ಮಾಡುವುದರಿಂದ ಮತ್ತು ಸಭೆ ನಡೆಸುವುದರಿಂದ ಗೊಂದಲಗಳು ಏರ್ಪಡುತ್ತಿತ್ತು. ಈ ಬಾರಿ ದಸರಾ ಹಬ್ಬವನ್ನು ಸುಸೂತ್ರವಾಗಿ ಆಚರಿಸಲು ವಿಳಂಬವಿಲ್ಲದೆ ನೂತನ ಸಮಿತಿಯನ್ನು ರಚಿಸಬೇಕು. ಕಳೆದ ಬಾರಿಯ ಲೆಕ್ಕಪತ್ರವನ್ನು ಸಾರ್ವಜನಿಕವಾಗಿ ಮಂಡಿಸುವ ಮೂಲಕ ಪ್ರಸ್ತುತ ವರ್ಷ ಹೆಚ್ಚಿನ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಜಿಲ್ಲಾಡಳಿತವನ್ನು ಕೋರಿದ್ದಾರೆ.

ಮಡಿಕೇರಿ ದಸರಾ ಜನೋತ್ಸವಕ್ಕೆ ಸರ್ಕಾರದಿಂದ ರೂ.೫ ಕೋಟಿ ಬಿಡುಗಡೆ ಮಾಡಿಸುವ ಮೂಲಕ ಕ್ಷೇತ್ರದ ಶಾಸಕರು ಆರ್ಥಿಕ ಸಬಲೀಕರಣಕ್ಕೆ ಉತ್ತೇಜನ ನೀಡಬೇಕು. ಕಳೆದ ವರ್ಷ ಬಿಡುಗಡೆಯಾದ ದಸರಾ ಅನುದಾನದಲ್ಲಿ ಶೇ.೩೦ ರಷ್ಟನ್ನು ಮಾತ್ರ ಕರಗಗಳು ಹಾಗೂ ದಶಮಂಟಪಗಳಿಗೆ ಹಂಚಿಕೆ ಮಾಡಲಾಗಿದೆ. ಇಷ್ಟು ಕಡಿಮೆ ಮೊತ್ತದಲ್ಲಿ ದಶಮಂಟಪಗಳ ತಯಾರಿ ಸಾಧ್ಯವಾಗದೆ ಇರುವುದರಿಂದ ಈ ಬಾರಿಯ ಅನುದಾನದಲ್ಲಿ ಶೇ.೬೦ ರಷ್ಟನ್ನು ಕರಗಗಳು ಹಾಗೂ ದಶಮಂಟಪಗಳಿಗೆ ಮೀಸಲಿಡಬೇಕೆಂದು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net