ಹಾವೇರಿ ನಗರಸಭೆಯಲ್ಲಿ ಧೂಳು ಹಿಡಿಯುತ್ತಿವೆ ಹೊಸ ಯಂತ್ರಗಳು

vacuum cleaner
Published on

ಕೇಶವಮೂರ್ತಿ ವಿ.ಬಿ. ಹಾವೇರಿ

ಹತ್ತಾರು ಲಕ್ಷ ರೂ. ಕೊಟ್ಟು ಖರೀದಿಸಿದ ಯಂತ್ರೋಪಕರಣ, ವಾಹನಗಳು ಐದಾರು ತಿಂಗಳಿಂದ ಧೂಳು ತಿನ್ನುತ್ತಿದ್ದರೂ ಹಾವೇರಿ ನಗರ ಸಭೆ ಅಧಿಕಾರಿಗಳು ಇತ್ತ ತಿರುಗಿಯೂ ನೋಡುತ್ತಿಲ್ಲ.

ರಸ್ತೆ, ಬಡಾವಣೆಗಳನ್ನು ಸ್ವಚ್ಛಗೊಳಿಸುವ ಅತ್ಯಾಧುನಿಕ ತಂತ್ರಜ್ಞಾನವುಳ್ಳ 21 ಲಕ್ಷ ರೂ. ವೆಚ್ಚದ ವ್ಯಾಕ್ಯೂಮ್ ಕ್ಲೀನರ್ ಮಷಿನ್​ವುಳ್ಳ ವಾಹನ, 5 ಲಕ್ಷ ರೂ. ಮೌಲ್ಯದ ಸ್ವೀಪಿಂಗ್ ಮಷಿನ್ ಹಾಗೂ 2.7 ಲಕ್ಷ ರೂ. ಮೌಲ್ಯದ ಪ್ಲಾಸ್ಟಿಕ್ ಬಾಟಲ್ ಕ್ರಶಿಂಗ್ ಮಷಿನ್ ಖರೀದಿಸಿ, ನಗರಸಭೆ ಆವರಣದಲ್ಲಿ ಇಡಲಾಗಿದೆ.

ಜಿಲ್ಲಾ ಕೇಂದ್ರದ ಸ್ವಚ್ಛತೆ ಸಮಸ್ಯೆಗೆ ನಾಂದಿ ಹಾಡಲೆಂದು ಹಾವೇರಿ ನಗರಸಭೆ ಹಲವು ವರ್ಷಗಳಿಂದ ಪ್ರಯತ್ನಿಸುತ್ತಲೇ ಇದೆ. ಕಸದ ಹೆಸರಲ್ಲಿ ಲಕ್ಷ ಲಕ್ಷ ರೂ. ವೆಚ್ಚ ಮಾಡುತ್ತಿದೆ. ಈಗ ಈ ಸಾಲಿಗೆ ಈ ಯಂತ್ರಗಳೂ ಸೇರಿವೆ. ಏಳೆಂಟು ತಿಂಗಳ ಹಿಂದೆಯೇ ಪರಿಸರ ವಿಭಾಗದ ವತಿಯಿಂದ ಲಕ್ಷಾಂತರ ರೂ. ಕೊಟ್ಟು ಖರೀದಿಸಿದ್ದ ವಾಹನ, ಯಂತ್ರಗಳು ಬಿಸಿಲು, ಮಳೆ, ಗಾಳಿಗೆ ಹಾಳಾಗುತ್ತಿವೆ. ಒಂದು ಕಡೆ ಅನುದಾನ ಇಲ್ಲ ಎಂದು ಹೇಳುವ ಅಧಿಕಾರಿಗಳು, ಲಕ್ಷಾಂತರ ರೂಪಾಯಿ ಅನುದಾನ ಬಂದು, ಯಂತ್ರೋಪಕರಣಗಳನ್ನು ಖರೀದಿಸಿದ ಬಳಿಕವೂ ಅವುಗಳನ್ನು ಸೂಕ್ತವಾಗಿ ಬಳಸಿಕೊಳ್ಳಲು ವಿಫಲರಾಗಿದ್ದಾರೆ.

ಪೌರ ಕಾರ್ವಿುಕರ ಕೊರತೆ ನಡುವೆಯೂ ನಗರದಲ್ಲಿ ಸ್ವಚ್ಛತಾ ಕಾರ್ಯ ನಡೆದಿದೆಯಾದರೂ ಹೇಳಿಕೊಳ್ಳುವ ಮಟ್ಟಿಗೆ ಸ್ವಚ್ಛತೆ ಕಾಣುತ್ತಿಲ್ಲ. ಗುತ್ತಿಗೆ ಆಧಾರದಲ್ಲಿಯಾದರೂ ಹೆಚ್ಚುವರಿ ಪೌರ ಕಾರ್ವಿುಕರನ್ನು ನೇಮಿಸಿಕೊಳ್ಳಬೇಕು. ಖರೀದಿಸಿರುವ ಹೊಸ ವಾಹನ ಹಾಗೂ ಯಂತ್ರಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂಬುದು ಹಾವೇರಿ ನಾಗರಿಕರ ಆಗ್ರಹವಾಗಿದೆ.

ಚುನಾವಣೆಗೂ ಮುಂಚೆ ವಾಹನ ಮತ್ತು ಯಂತ್ರಗಳನ್ನು ಖರೀದಿಸಲಾಗಿತ್ತು. ವ್ಯಾಕ್ಯೂಮ್ ಕ್ಲೀನರ್ ವಾಹನವನ್ನು ಆಗಾಗ ಬಳಸಲಾಗುತ್ತಿದೆ. ಶೀಘ್ರದಲ್ಲೇ ಎಲ್ಲ ಯಂತ್ರಗಳ ಬಳಕೆಗೆ ಕ್ರಮ ಕೈಗೊಳ್ಳಲಾಗುವುದು. | ಶಿವರಾಜ ಕನಕಪ್ಪನವರ, ಪರಿಸರ ಇಂಜಿನಿಯರ್, ಹಾವೇರಿ ನಗರಸಭೆ ನಗರದ ಸ್ವಚ್ಛತೆ ಹೆಸರಲ್ಲಿ ನಾಗರಿಕರ ತೆರಿಗೆ ಹಣದಲ್ಲಿ ಲಕ್ಷಾಂತರ ರೂ. ಖರ್ಚು ಮಾಡಿ ಖರೀದಿಸಿದ ವಾಹನ, ಯಂತ್ರಗಳನ್ನು ಮೂಲೆಗುಂಪು ಮಾಡಿರುವುದು ಸರಿಯಲ್ಲ. ಈ ಕೂಡಲೇ ಅವುಗಳನ್ನು ಸಮರ್ಪಕವಾಗಿ ಬಳಕೆ ಮಾಡಲು ಕ್ರಮ ಕೈಗೊಳ್ಳಬೇಕು. | ಶಂಭುಲಿಂಗ ಹೆಬ್ಬಳ್ಳಿ, ಸ್ಥಳೀಯ ನಾಗರಿಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net