ಇಂಡಸ್ಟ್ರೀಯಲ್ ಎಸ್ಟೇಟ್​ಗೆ ಹೊಸ ಲುಕ್

j12-Industrial Estate 3
Published on

ಹುಬ್ಬಳ್ಳಿ: ದಶಕಗಳಿಂದ ಅಭಿವೃದ್ಧಿಯ ಸವಿ ಕಾಣದ ಇಲ್ಲಿಯ ಕೈಗಾರಿಕೆ ವಸಾಹತುಗಳಲ್ಲಿಯೂ ಇದೀಗ ಸುಧಾರಣೆ ಪರ್ವ ಆರಂಭವಾಗಿದೆ.

ನಗರದ ಗೋಕುಲ ರಸ್ತೆ ಕೈಗಾರಿಕಾ ವಸಾಹತು (ಇಂಡಸ್ಟ್ರಿಯಲ್ ಎಸ್ಟೇಟ್) ಅತ್ಯಂತ ಹಳೆಯ ಉದ್ಯಮ ಪ್ರದೇಶವಾಗಿದೆ. ಇಲ್ಲಿ ಕಳೆದ ಹಲವು ದಶಕಗಳಿಂದ ಯಾವುದೇ ಸೌಲಭ್ಯಗಳಿಲ್ಲದೆ ಉದ್ಯಮಪತಿಗಳು ಸಮಸ್ಯೆಗಳ ಮಧ್ಯೆ ಉದ್ಯಮ ನಡೆಸುತ್ತಿದ್ದರು.

ಇದೀಗ ರಸ್ತೆ, ಚರಂಡಿ, ಫುಟ್​ಪಾತ್ ಸೇರಿ ಹಲವು ನಾಗರಿಕ ಸೌಲಭ್ಯಗಳು ಕಾಲಿಟ್ಟಿದ್ದು, ಈ ವರ್ಷದ ದೀಪಾವಳಿ ಸಂಭ್ರಮ ಹೆಚ್ಚಿಸಲಿದೆ.

ಗೋಕುಲ ರಸ್ತೆಯ ಎಂ.ಟಿ. ಸಾಗರ ಪ್ರದೇಶದಲ್ಲಿ ಸುಮಾರು 124 ಎಕರೆ ಜಾಗದಲ್ಲಿ ಹಬ್ಬಿಕೊಂಡಿರುವ ಇಂಡಸ್ಟ್ರೀಯಲ್ ಎಸ್ಟೇಟ್​ಗೆ ಈಗ ಹೊಸ ಲುಕ್ ನೀಡುವ ಕಾರ್ಯ ಭರದಿಂದ ನಡೆದಿದೆ. ವಿಶ್ವ ದರ್ಜೆಯ ರಸ್ತೆ, ಫುಟ್​ಪಾತ್, ಅಂಡರ್ ಗ್ರೌಂಡ್ ಕೇಬಲಿಂಗ್ ಇತ್ಯಾದಿ ಕೆಲಸಗಳಿಂದ ಎಸ್ಟೇಟ್​ನ ಸೌಂದರ್ಯ ಮುಂದಿನ ದಿನಗಳಲ್ಲಿ ಹೆಚ್ಚಾಗಲಿದೆ. ದೇಶ- ವಿದೇಶಗಳಿಂದ ಪ್ರತಿನಿಧಿಗಳು ಬಂದು ಹೋಗುವ ಈ ಎಸ್ಟೇಟ್​ನಲ್ಲಿ ಮಳೆಗಾಲದಲ್ಲಿ ಕಾಲಿಡುವ ಹಾಗಿರಲಿಲ್ಲ, ರಾಡಿಮಯ ರಸ್ತೆಗಳಲ್ಲಿ ಎದ್ದು ಬಿದ್ದು ಸಾಗಬೇಕಿತ್ತು. ಇನ್ನು ಬೇಸಿಗೆಯಲ್ಲಿ ಧೂಳೆಬ್ಬಿಸುವ ರಸ್ತೆಯಲ್ಲೇ ಬಟ್ಟೆ, ಮೈ ಮುಖಗಳ ಬಣ್ಣ ಬದಲಿಸಿಕೊಂಡು ಓಡಾಡಬೇಕಿತ್ತು.

ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ (ಕೆಎಸ್​ಎಸ್​ಐಡಿಸಿ) ಅಭಿವೃದ್ಧಿಪಡಿಸಿರುವ ಎಸ್ಟೇಟ್​ನಲ್ಲಿ ಅಂದಾಜು ಸಾವಿರ ಉದ್ಯಮ ಘಟಕಗಳು ಕಾರ್ಯ ನಿರ್ವಹಿಸುತ್ತಿವೆ. ಇಲ್ಲಿ ಹುಬ್ಬಳ್ಳಿಯ ಹೆಸರಾಂತ ವಾಲ್ವ್, ಎಲೆಕ್ಟ್ರಿಕಲ್ ಸೇರಿ ವೈವಿಧ್ಯಮಯ ವಸ್ತುಗಳನ್ನು ಉತ್ಪಾದನೆ ಮಾಡಲಾಗುತ್ತದೆ. ಇಷ್ಟಿದ್ದರೂ ಸರ್ಕಾರಗಳ ನಿರ್ಲಕ್ಷ್ಯ ಹಾಗೂ ಆಡಳಿತ ವ್ಯವಸ್ಥೆ ಅನಾದರದಿಂದಾಗಿ ಯಾವುದೇ ಸೌಲಭ್ಯಗಳು ಸಿಕ್ಕಿರಲಿಲ್ಲ. ಇದೀಗ ಸರ್ಕಾರ ಹಾಗೂ ಜನಪ್ರತಿನಿಧಿಗಳು ಕಣ್ಣು ಬಿಟ್ಟಿದ್ದು, ಅಭಿವೃದ್ಧಿಯ ಯುಗ ಆರಂಭವಾದಂತಾಗಿದೆ ಎಂದು ಉದ್ಯಮಪತಿಗಳು ಅಭಿಪ್ರಾಯಪಡುತ್ತಾರೆ.

ಅಷ್ಟೇ ಅಲ್ಲ ಕೇಂದ್ರ ಸರ್ಕಾರ ಕೂಡ ಸಣ್ಣ- ಮಧ್ಯಮ ಕೈಗಾರಿಕೆಗಳ ಉತ್ತೇಜನಕ್ಕೆ ಹಲವು ಯೋಜನೆಗಳನ್ನು ಘೋಷಿಸಿರುವುದು ಹೆಚ್ಚು ಪ್ರೋತ್ಸಾಹ ಸಿಗುತ್ತಿದೆ. ಕರೊನಾ ಸಂದರ್ಭದಲ್ಲಿ ಆರ್ಥಿಕ ಕುಸಿತದಿಂದ ಉಂಟಾದ ಸಮಸ್ಯೆಯಿಂದ ಒಂದಿಷ್ಟು ಉದ್ಯಮಗಳಿಗೆ ಹೊಡೆತು ಬಿದ್ದಿತ್ತು. ಲಾಕ್​ಡೌನ್ ನಂತರದ ದಿನಗಳಲ್ಲಿ ಈಗ ಸುಧಾರಣೆ ಕಂಡು ಬರುತ್ತಿದೆ. ಒಟ್ಟಾರೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಉತ್ತೇಜನಕಾರಿ ಕ್ರಮಗಳಿಂದ ಹುಬ್ಬಳ್ಳಿಯ ಅತ್ಯಂತ ಹಳೆಯ ಕೈಗಾರಿಕೆ ವಸಾಹತುವಿನ ಚಹರೆ ಬದಲಾಗುತ್ತಿದೆ.

ವಾಲ್ವ್ ರಫ್ತು: ಗೋಕುಲ ಇಂಡಸ್ಟ್ರೀಯಲ್ ಎಸ್ಟೇಟ್ ಎಂದರೆ ದೇಶ- ವಿದೇಶಗಳಲ್ಲಿಯೂ ಚಿರಪರಿಚಿತ. ಇಲ್ಲಿನ ವಾಲ್ವ್ ಗಳೆಂದರೆ ಜಗತ್ತಿನೆಲ್ಲೆಡೆ ಹೆಸರು ಗಳಿಸಿವೆ. ಇದೇ ರೀತಿ ಹಲವು ವಸ್ತುಗಳು ಇಲ್ಲಿಂದ ರಫ್ತಾಗುತ್ತವೆ. ಇಲ್ಲಿಗೆ ಬೇರೆಬೇರೆ ಕಡೆಗಳಿಂದ ಜನ ಬರುತ್ತಾರೆ. ಹಾಗಾಗಿ ಎಸ್ಟೇಟ್ ಸುಂದರಗೊಳಿಸುವುದು ಅಗತ್ಯವಾಗಿತ್ತು. ಇದೀಗ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ವಿಶೇಷ ಕಾಳಜಿಯಿಂದ ಅಭಿವೃದ್ಧಿ ಕಾರ್ಯಗಳು ಶುರುವಾಗಿವೆ ಎಂದು ಉತ್ತರ ಕರ್ನಾಟಕ ಸಣ್ಣ ಕೈಗಾರಿಕೆ ಸಂಘದ ಪದಾಧಿಕಾರಿಗಳು ಹೇಳುತ್ತಾರೆ.

ಏನೇನು ಕೆಲಸಗಳು ನಡೆಯುತ್ತಿವೆ? : 18.50 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾರ್ಯ ಆರಂಭವಾಗಿದೆ. ಸ್ಮಾರ್ಟ್​ಸಿಟಿ ಯೋಜನೆಯಡಿ ಎರಡು ರಸ್ತೆಗಳು, ಫುಟ್​ಪಾತ್, ಅಂಡರ್​ಗ್ರೌಂಡ್ ಎಲ್​ಟಿ ಕೇಬಲ್, ಚರಂಡಿ ಕೆಲಸಗಳು ನಡೆದಿವೆ. 10 ಲಕ್ಷ ರೂ. ಶಾಸಕರ ಅನುದಾನದಲ್ಲಿ ಉತ್ತರ ಕರ್ನಾಟಕ ಸಣ್ಣ ಕೈಗಾರಿಕೆ ಸಂಘದ ಸಭಾಭವನ ಉನ್ನತೀಕರಣ ಕಾಮಗಾರಿ ನಡೆದಿದೆ.

7.10 ಕೋಟಿ ರೂ. ವೆಚ್ಚದಲ್ಲಿ ಎಸ್ಟೇಟ್​ನ ಒಳಚರಂಡಿ ವ್ಯವಸ್ಥೆ ಸಂಪರ್ಕ ಜಾಲಕ್ಕೆ ಅಳವಡಿಕೆ ಕಾರ್ಯ, 6.50 ಕೋಟಿ ರೂ. ವೆಚ್ಚದಲ್ಲಿ ಮೋರಿ, ಗಟಾರುಗಳ ರಿಪೇರಿ ಹಾಗೂ ನಿರ್ಮಾಣ ಕಾಮಗಾರಿ, ಸಾರ್ವಜನಿಕ ಶೌಚಗೃಹ, ಶುದ್ಧ ಕುಡಿಯುವ ನೀರಿನ ಘಟಕ ಅಳವಡಿಕೆ ಮುಂತಾದ ಕೆಲಸಗಳು ಭರದಿಂದ ಸಾಗಿವೆ.

ಹಲವು ವರ್ಷಗಳಿಂದ ಬಾಕಿ ಉಳಿದಿದ್ದ 72 ಉದ್ಯಮಪತಿಗಳಿಗೆ ನಿವೇಶನ ಖರೀದಿ ಪತ್ರ ಹಂಚಿಕೆ ಪ್ರಕ್ರಿಯೆ ಕೆಲ ತಿಂಗಳ ಹಿಂದೆ ನಡೆದಿದೆ. ಇಂತಹ ಹತ್ತು ಹಲವು ಅಭಿವೃದ್ಧಿ ಕಾರ್ಯ ನಡೆದಿರುವುದು ಹಾಗೂ ನಮ್ಮ ಬೇಕು ಬೇಡಿಕೆಗಳನ್ನು ಕೇಳಿ ಈಡೇರಿಸಲು ಪ್ರಯತ್ನ ಪಡುವ ಸಚಿವರು ಸಿಕ್ಕಿರುವುದರಿಂದ ಈ ಬಾರಿಯ ದೀಪಾವಳಿಗೆ ಹೆಚ್ಚು ಖುಷಿ ಪಡುತ್ತೇವೆ ಎನ್ನುತ್ತಾರೆ ಉದ್ಯಮಿಗಳು.

ದಶಕಗಳ ನಂತರ ಗೋಕುಲ ರೋಡ ಎಸ್ಟೇಟ್​ನಲ್ಲಿ ರಸ್ತೆ, ಚರಂಡಿ ಕಾಮಗಾರಿಗಳು ನಡೆಯುತ್ತಿವೆ. ಈಗಾಗಲೇ ಶೇ. 40ರಷ್ಟು ಕೆಲಸ ಮುಗಿದಿದೆ. ಸರ್ಕಾರ, ಸ್ಮಾರ್ಟ್​ಸಿಟಿ, ಕೆಎಸ್​ಎಸ್​ಐಡಿಸಿಯಿಂದ ಈ ಕಾಮಗಾರಿಗಳು ನಡೆಯುತ್ತಿವೆ.| ನಿಂಗಣ್ಣ ಬಿರಾದಾರ, ಎನ್​ಕೆಎಸ್​ಎಸ್​ಐ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net