

ಬೆಂಗಳೂರು: ಮಹಾನಗರದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಸುರಕ್ಷಿತ ಪಾದಚಾರಿ ಮಾರ್ಗಗಳನ್ನು ನಿರ್ಮಾಣ ಮಾಡಲಾಗುವುದು ಎಂದು ಬಿಬಿಎಂಪಿ ಪ್ರಧಾನ ಅಭಿಯಂತರ ಬಿ.ಎಸ್. ಪ್ರಹ್ಲಾದ್ ಹೇಳಿದ್ದಾರೆ.
ಬ್ರ್ಯಾಂಡ್ ಬೆಂಗಳೂರು ಯೋಜನೆಯಡಿ ಸಂಚಾರಯುಕ್ತ/ಸಾರಿಗೆ ಬೆಂಗಳೂರು/ಮೊಬಿಲಿಟಿ ವಿಷಯಕ್ಕೆ ಸಂಬಂಧಿಸಿದಂತೆ ಭಾರತೀಯ ವಿಜ್ಞಾನ ಸಂಸ್ಥೆಯ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಸಭಾಂಗಣದಲ್ಲಿ ಮಂಗಳವಾರ ನಡೆದ ವಿಚಾರ ಸಂಕಿರಣದಲ್ಲಿ ಸಾರ್ವಜನಿಕರಿಂದ ಬಂದ ಸಲಹೆ ಅಭಿಪ್ರಾಯಗಳನ್ನು ಪ್ರಾತ್ಯಕ್ಷಿಕೆ ಮೂಲಕ ವೀಕ್ಷಿಸಿದ ಬಳಿಕ ಅವರು ಮಾತನಾಡಿದರು.
ಸಂಚಾರಯುಕ್ತ ಬೆಂಗಳೂರು ವಿಷಯಕ್ಕೆ ಸಂಬಂಧಿಸಿದಂತೆ ಒಟ್ಟು 10,479 ಸಲಹೆಗಳು ಬಂದಿವೆ. ಈ ಪೈಕಿ ಒಂದೇ ರೀತಿಯ ಸಲಹೆಗಳನ್ನು ತೆಗೆದ ಬಳಿಕ 8,412 ಸಲಹೆಗಳನ್ನು ಬೇರೆ ಬೇರೆ ವರ್ಗಗಳಾಗಿ ವಿಂಗಡಿಸಲಾಗಿದೆ. ರಾಮಯ್ಯ ಇನ್‌ಸ್ಟ್ಟಿಟ್ಯೂಟ್ ಆ್ ಮ್ಯಾನೇಜ್ಮೆಂಟ್‌ನ ಸುಸ್ಥಿರತೆಯ ಕೇಂದ್ರ ಹಾಗೂ ಐಐಎಸ್ಸಿಯ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಪಾಲುದಾರಿಕೆಯಲ್ಲಿ ಸಲಹೆ, ಅಭಿಪ್ರಾಯಗಳನ್ನು ಕ್ರೋಢೀಕರಿಸಿ ವರದಿಯನ್ನು ತಯಾರಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.
ಸಂಚಾರ ಸೂಚ್ಯಂಕ -2022ರ ಶ್ರೇಯಾಂಕ ಪ್ರಕಾರ ಬೆಂಗಳೂರನ್ನು ವಿಶ್ವದ ಎರಡನೇ ಅತಿ ಹೆಚ್ಚು ದಟ್ಟಣೆಯ ನಗರ ಎಂದು ಪರಿಗಣಿಸಲಾಗಿದೆ. 1985ರಲ್ಲಿ 1.7 ಲಕ್ಷ ಇದ್ದ ವಾಹನಗಳ ಸಂಖ್ಯೆ 2022ರ ಅಂತ್ಯದ ವೇಳೆಗೆ 1.09 ಕೋಟಿಗೆ ಏರಿಕೆ ಕಂಡಿದೆ. 2022ರಲ್ಲಿ ಬೆಂಗಳೂರಿನಲ್ಲಿ ರಸ್ತೆ ಅಪಘಾತದಿಂದಾಗಿ 247 ಪಾದಚಾರಿಗಳು ಪ್ರಾಣ ಕಳೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಸುರಕ್ಷಿತ ಪಾದಚಾರಿ ಮಾರ್ಗಗಳ ನಿರ್ಮಾಣ, ಜಂಕ್ಷನ್‌ಗಳಲ್ಲಿ ಸುರಕ್ಷತೆ ಹೆಚ್ಚಳದ ಅಗತ್ಯ ಇದೆ. ುಟ್‌ಪಾತ್‌ಗಳನ್ನು ಮರು ವಿನ್ಯಾಸಗೊಳಿಸಿ ಸುರಕ್ಷಿತ ಪಾದಚಾರಿ ಮಾರ್ಗಗಳನ್ನು ನಿರ್ಮಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕಿದೆ ಎಂದು ಬಿ.ಎಸ್.ಪ್ರಹ್ಲಾದ್ ತಿಳಿಸಿದರು.
ಅನಧಿಕೃತ ಪಾರ್ಕಿಂಗ್ ತಡೆಗೆ ಕ್ರಮ ಅಗತ್ಯ:
ನಗರದಲ್ಲಿ ವಾಹನಗಳ ಸಂಖ್ಯೆ ಹೆಚ್ಚುತ್ತಿದ್ದು, ನಿಲುಗಡೆಗೆ ಸ್ಥಳಾವಕಾಶ ಇಲ್ಲದಂತಾಗಿದೆ. ಸಂಚಾರ ಉತ್ತಮಪಡಿಸುವ ಹಿನ್ನೆಲೆಯಲ್ಲಿ ಅನಧಿಕೃತ ಪಾರ್ಕಿಂಗ್‌ಗೆ ತಡೆ ಹಾಕಬೇಕಿದೆ. ನಗರದೆಲ್ಲೆಡೆ ಪಾದಚಾರಿ ಮಾರ್ಗಗಳಲ್ಲಿ ಪ್ರತ್ಯೆಕ ಸೈಕಲ್ ಲೈನ್‌ಗಳನ್ನು ನಿರ್ಮಿಸಬೇಕು. ಮೆಟ್ರೋ ಮಾರ್ಗವನ್ನು ಹೆಚ್ಚಿಸುವ ಜೊತೆಗೆ ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು. ನಾಗರಿಕರು ಸ್ವಂತ ವಾಹನ ಬಳಸುವ ಬದಲು ಸಮೂಹ ಸಾರಿಗೆ ಬಳಕೆಯನ್ನು ಪ್ರೋತ್ಸಾಹಿಸಬೇಕು. ನಗರದಲ್ಲಿರುವ ರಸ್ತೆಜಾಲ, ಜಂಕ್ಷನ್, ರಸ್ತೆ ಉಬ್ಬು, ಯೂಟರ್ನ್, ರಸ್ತೆ ಮಧ್ಯೆ ಡೀವೈಡರ್ ಅಳವಡಿಕೆ ಸಹಿತ ಇತರ ಮೂಲಸೌಕರ್ಯವನ್ನು ಸಮರ್ಪಕವಾಗಿ ನಿರ್ವಹಣೆ ಮಾಡುವ ವ್ಯವಸ್ಥೆ ರೂಪಿಸಬೇಕು ಎಂಬ ಸಲಹೆ ವಿಚಾರಸಂಕಿರಣದಲ್ಲಿ ವ್ಯಕ್ತವಾಯಿತು.
ಕಾರ್ಯಕ್ರಮದಲ್ಲಿ ನಗರ ಭೂ ಸಾರಿಗೆ ನಿರ್ದೇಶನಾಲಯದ ಐಟಿ ಮುಖ್ಯಸ್ಥ ಶಮಂತ್, ಟಿಇಸಿ ವಿಭಾಗದ ಕಾರ್ಯಪಾಲಕ ಅಭಿಯಂತರ ಬಾಲಾಜಿ, ಮೆಟ್ರೊ, ಬಿಎಂಟಿಸಿ ಅಧಿಕಾರಿಗಳು, ಎಂ.ಎಸ್. ರಾಮಯ್ಯ ಹಾಗೂ ಭಾರತೀಯ ವಿಜ್ಞಾನ ಸಂಸ್ಥೆಯ ಸಿವಿಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳು, ತಜ್ಞರು ಉಪಸ್ಥಿತರಿದ್ದರು.