

ಬ್ಯಾಡಗಿ: ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಮದ್ಯವರ್ಜನ ಶಿಬಿರ ಬೆಳಕು ನೀಡುತ್ತಿದೆ ಎಂದು ಹಾವೇರಿ ಹೊಸಮಠದ ಶ್ರೀ ಬಸವಶಾಂತಲಿಂಗ ಶ್ರೀಗಳು ಹೇಳಿದರು.
ತಾಲೂಕಿನ ಸುಕ್ಷೇತ್ರ ಕದರಮಂಡಲಗಿ ಕಾಂತೇಶ ಸಭಾಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ , ರಾಜ್ಯ ಮದ್ಯಪಾನ ಸಂಯಮ ಮಂಡಳಿ ಆಶ್ರಯದಲ್ಲಿ ಭಾನುವಾರ ಆಯೋಜಿಸಿದ್ದ 1678ನೇ ಮದ್ಯವರ್ಜನಾ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಧರ್ಮಸ್ಥಳದ ಮಂಜುನಾಥ ಸ್ವಾಮಿ ಹಾಗೂ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರ ಭಾವಚಿತ್ರ ನೋಡಿದ ತಕ್ಷಣ ಬಹುತೇಕರು ತಮ್ಮ ತಪ್ಪಿನ ಅರಿವು ಮಾಡಿಕೊಂಡು ಬದಲಾಗುತ್ತಿದ್ದಾರೆ ಎಂದರು.
ಶಾಸಕ ಬಸವರಾಜ ಶಿವಣ್ಣನವರ ಮಾತನಾಡಿ, ಧರ್ಮಸ್ಥಳ ಧರ್ಮಾಧಿಕಾರಿಗಳ ಸಮಾಜಪರ ಚಿಂತನೆ ಶ್ರೇಷ್ಠವಾಗಿದೆ ಎಂದರು.
ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಶಾಸಕ ಸುರೇಶಗೌಡ ಪಾಟೀಲ, ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಎಸ್.ಆರ್. ಪಾಟೀಲ, ತಾಲೂಕು ಕಾಂಗ್ರೆಸ್ ಘಟಕದ ತಾಲೂಕಾಧ್ಯಕ್ಷ ದಾನಪ್ಪ ಚೂರಿ, ನಾಗರಾಜ ಆನ್ವೆರಿ, ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಮುತ್ತಣ್ಣ ಯಲಿಗಾರ, ಆಂಜನೇಯ ಪಂಚ ಕಮಿಟಿ ಅಧ್ಯಕ್ಷ ಹನುಮಂತಪ್ಪ ಕುಡಪಲಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಭಾಸ್ಕರ, ಎಂ. ದಿವಾಕರ ಇದ್ದರು. ಮೇಲ್ವಿಚಾರಕರಾದ ಬಿ. ರಘುಪತಿ, ಎಂ.ಎನ್. ಚನ್ನಬಸಪ್ಪ ಕಾರ್ಯಕ್ರಮ ನಿರ್ವಹಿಸಿದರು. 71 ಶಿಬಿರಾರ್ಥಿಗಳು ಹೊಸ ಜೀವನ ಆರಂಭಿಸುವ ಸಂಕಲ್ಪ ಮಾಡಿದರು.