ಜನಸಾಮಾನ್ಯರ ದ್ವನಿ ಹೊಸಗನ್ನಡ ಸಾಹಿತ್ಯ: ಮೈಸೂರು ವಿಶ್ವವಿದ್ಯಾಲಯದ ಪ್ರಸಾರಾಂಗದ ನಿರ್ದೇಶಕ ಪ್ರೊ.ಎಂ.ನಂಜಯ್ಯ ಹೊಂಗನೂರು

7
Published on

ಮೈಸೂರು: ಹೊಸಗನ್ನಡ ಸಾಹಿತ್ಯ ವಿವಿಧ ಪ್ರಕಾರದ ಮಜಲನ್ನು ಹೊಂದಿದ್ದು ವಿಸ್ತಾರ ಹಾಗೂ ಸಮೃದ್ಧ ಅಭಿವ್ಯಕ್ತಿಯಾಗಿ ಬೆಳೆದಿದೆ ಎಂದು ಮೈಸೂರು ವಿಶ್ವವಿದ್ಯಾಲಯದ ಪ್ರಸಾರಾಂಗದ ನಿರ್ದೇಶಕ ಪ್ರೊ.ಎಂ.ನಂಜಯ್ಯ ಹೊಂಗನೂರು ಹೇಳಿದರು.

ಮೈಸೂರು ವಿವಿ ಪ್ರಸಾರಾಂಗ ಹಾಗೂ ಕರ್ನಾಟಕ ಜಾನಪದ ಸಂಶೋಧಕರ ಒಕ್ಕೂಟದಿಂದ ಮಾನಸಗಂಗೋತ್ರಿಯ ಪ್ರಸಾರಾಂಗದಲ್ಲಿ ಸೋಮವಾರ ಆಯೋಜಿಸಿದ್ದ ಡಾ.ಹೊಂಬಯ್ಯ ಹೊನ್ನಲಗೆರೆ ಹಾಗೂ ಶ್ರೀನಾಥ ಬಿ.ಕಾಂಬಳೆ ಸಂಪಾದಕತ್ವದ ‘ಹೊಸಗನ್ನಡ ಸಾಹಿತ್ಯ ಚರಿತ್ರೆ: ಪಂಥಗಳು’ ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಪೂರ್ವದ ಹಳಗನ್ನಡ ರಾಜ-ಮಹಾರಾಜರ ಪ್ರಭುತ್ವ, ಅವರ ಆಶಯದ ಮಹತ್ವವನ್ನು ಸಾರಿದರೆ, ಹೊಸಗನ್ನಡ ಸಾಹಿತ್ಯವೂ ಜನ ಸಾಮಾನ್ಯರ ದ್ವನಿಯಾಗಿ ನೆಲೆ ನಿಂತಿದೆ ಎಂದರು.

ಇಂದಿನ ಸಾಮಾನ್ಯ ಜನರು ಬರೆಯುವ ಹಾಗೂ ಓದುವ ಸಾಹಿತ್ಯ ಎಂದರೆ ಅದು ಹೊಸಗನ್ನಡ ಸಾಹಿತ್ಯವಾಗಿದೆ. ದನಿ ಇಲ್ಲದ ಅಲಕ್ಷಿತ ಎಲ್ಲ ಸ್ತರದ ಜನರನ್ನು ಹೊಸಗನ್ನಡ ಸಾಹಿತ್ಯ ಮುಖಾಮುಖಿಯಾಗಿದೆ. ತಳಸ್ತರದ ಜನರ ಆಶೋತ್ತರಗಳಿಗೆ ಸ್ಪಂದಿಸಿದೆ ಎಂದು ಬಣ್ಣಿಸಿದರು.

ಹೊಸಗನ್ನಡ ಸಾಹಿತ್ಯ ವಿವಿಧ ಪ್ರಕಾರದ ಮಜಲನ್ನು ಹೊಂದಿದ್ದು ಸಮೃದ್ಧ ಅಭಿವ್ಯಕ್ತಿಯಾಗಿ ಬೆಳೆದಿದೆ. ಅತ್ಯಂತ ವಿಸ್ತಾರವೂ ಸಮೃದ್ಧವೂ ಆದ ಹೊಸ ಕನ್ನಡ ಸಾಹಿತ್ಯ ಜನರನ್ನು ಸುಲಭವಾಗಿದೆ ತಲುಪಿದೆ. ಇದನ್ನು ಲೇಖಕರು 270 ಪುಟಗಳಲ್ಲಿ ಸಂಗ್ರಹಿಸಿ ಕೊಟ್ಟಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನಾಡು-ನುಡಿಯ ಅಭಿಮಾನ, ದೇಶಾಭಿಮಾನ, ಚಳವಳಿ, ಪ್ರತಿಭಟನೆ, ವೈಜ್ಞಾನಿಕ, ರಾಜಕೀಯ ಮತ್ತು ಸಾಮಾಜಿಕ ಕೊಡುಗೆಗಳ ಹಿನ್ನೆಲೆಯಲ್ಲಿ ಕೃತಿಯಲ್ಲಿ ದಾಖಲು ಮಾಡಲಾಗಿದೆ ಎಂದು ತಿಳಿಸಿದರು.

ಹೊಸಗನ್ನಡ ಸಾಹಿತ್ಯ 19ನೇ ಶತಮಾನದ ಅರುಣೋದಯ ಕಾಲದಿಂದ ಪ್ರಾರಂಭಗೊಂಡು 21ನೇ ಶತಮಾನದ ಇಂದಿನವರೆಗೂ ಬೆಳೆದುಬಂದಿದೆ. ನವೋದಯ, ಪ್ರಗತಿಶೀಲ, ನವ್ಯ, ದಲಿತ ಬಂಡಾಯ ಹಾಗೂ ಮಹಿಳಾ ಸಾಹಿತ್ಯದ ಪ್ರೇರಣೆ ಧೋರಣೆ ಮತ್ತು ಸ್ವರೂಪ ಲಕ್ಷಣಗಳನ್ನು ಈ ಕೃತಿ ಒಳಗೊಂಡಿದೆ. ಇದರೊಂದಿಗೆ 5 ಪಂಥಗಳ ಪ್ರಮುಖ 50ಕ್ಕೂ ಹೆಚ್ಚು ಕವಿಗಳ ಲೇಖಕರ ಕೃತಿಗಳನ್ನು ಕೇಂದ್ರವಾಗಿಟ್ಟುಕೊಂಡು ವಿಶ್ಲೇಷಣೆ ಮಾಡಲಾಗಿದೆ ಎಂದರು.

ಈ ಕೃತಿಯು ಕರ್ನಾಟಕ ರಾಜ್ಯದ ಬೇರೆ ಬೇರೆ ವಿಶ್ವವಿದ್ಯಾಲಯಗಳ ಪಠ್ಯಕ್ರಮವಾಗಿದೆ. ಇದಲ್ಲದೆ ಎಸ್‌ಡಿಎ, ಎಫ್‌ಡಿಎ ಪ್ರೌಢಶಾಲಾ ಶಿಕ್ಷಕರ ನೇಮಕಾತಿ ಹಾಗೂ ಕನ್ನಡ ಉಪನ್ಯಾಸಕರ ನೇಮಕಾತಿಗೆ ಉಪಯುಕ್ತವಾಗುವ ರೀತಿಯಲ್ಲಿ ಸಿದ್ಧಗೊಂಡಿದೆ ಎಂದು ಹೇಳಿದರು.

ಸರಸ್ವತಿಪುರಂ ಪೊಲೀಸ್ ಠಾಣೆ ಸಬ್ ಇನ್‌ಸ್ಪೆಕ್ಟರ್ ಟಿ.ಎಸ್.ಮಹೇಂದ್ರ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳುವ ವಿದ್ಯಾರ್ಥಿಗಳು ಯಾವ ಸಂದರ್ಭದಲ್ಲೂ ನಿರುತ್ಸಾಹವಾಗದೇ ಪ್ರಯತ್ನ ಮಾಡಿದರೆ ಫಲ ಸಿಗುತ್ತದೆ. ಅದಕ್ಕೆ ಕಠಿಣ ಶ್ರಮ, ಏಕಾಗ್ರತೆ ಬೇಕು ಎಂದು ಹೇಳಿದರು.

ಪುಸ್ತಕದ ಮೇಲೆ ನಂಬಿಕೆ ಇಟ್ಟರೆ ಹೊಸದಾರಿ ತೋರಿಸುತ್ತದೆ. ಮೊಬೈಲ್ ಬಳಕೆ ಕಡಿಮೆ ಮಾಡಿ ಯಶಸ್ಸನ್ನು ದಕ್ಕಿಸಿಕೊಳ್ಳಿ ಎಂದು ಸಲಹೆ ನೀಡಿದರು.

ಪತ್ರಕರ್ತ ವಿನೋದ್ ಮಹದೇವಪುರ ಮಾತನಾಡಿ, ಬೆಳಗಾವಿಯ ಗಡಿಭಾಗದ ಕನ್ನಡ ವಿದ್ಯಾರ್ಥಿಗಳಿಗಾಗಿ ಈ ಕೃತಿಯನ್ನು ಲೇಖಕರು ಸಂಪಾದಿಸಿದ್ದಾರೆ. ಕನ್ನಡ ಸಾಹಿತ್ಯವೂ ಸಮೃದ್ಧವಾಗಿ ಬೆಳೆದಿದ್ದು, ಬಾನು ಮುಷ್ತಾಕ್ ಅವರ ಅನುವಾದಿತ ಕೃತಿಗೆ ಅಂತಾರಾಷ್ಟ್ರೀಯ ಬುಕರ್ ಪ್ರಶಸ್ತಿ ಬಂದಿರುವುದು ಸಾಕ್ಷಿ ಎಂದರು.

ಲೇಖಕ ಶ್ರೀನಾಥ್ ಬಿ. ಕಾಂಬಳೆ ಮಾತನಾಡಿ, ಸ್ಪರ್ಧಾತ್ಮ ಪರೀಕ್ಷೆ ತಯಾರಿಗೆ ಪೂರಕವಾದ ಅಂಶಗಳನ್ನು ಅಡಕವಾಗಿದೆ. ಈ ಕೃತಿಯು ಹೊಸಗನ್ನಡ ಕವಿಗಳ ಕುರಿತು ಹೇಳಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಸಂಚಾಲಕಾರದ ಡಾ.ಎಚ್.ಪಿ. ಮಂಜು ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಸಾರಾಂಗದ ಅಧೀಕ್ಷಕ ಚನ್ನಬಸಪ್ಪ, ಸಹಾಯ ನಿರ್ದೇಶಕ ಅನಿಲ್ ಕುಮಾರ್, ಮುದ್ರಣಾಲಯದ ನಿರ್ದೇಶಕ ಸತೀಶ್, ಶಿವಲಿಂಗೇಗೌಡ, ತಲಕಾಡು ನಾಗರಾಜ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net