

ಬಂಗಾರಪೇಟೆ: ಬಂಗಾರಪೇಟೆ ಪುರಸಭೆ ಮಾಜಿ ಅಧ್ಯಕ್ಷ, ಕ್ಷೇತ್ರದ ಮುಖಂಡ ಕೆ.ಚಂದ್ರಾರೆಡ್ಡಿ ಮತ್ತು ಬಂಗಾರಪೇಟೆ ತಾಲೂಕು ಜೆಡಿಎಸ್ ಅಧ್ಯಕ್ಷ ಮುನಿರಾಜು ಸೋಮವಾರ ಶಾಸಕ ಎಸ್.ಎನ್.ನಾರಾಯಣಸ್ವಾಮಿ ನೇತೃತ್ವದಲ್ಲಿ ಸೋಮವಾರ ಬೆಂಗಳೂರಿನ ಸದಾಶಿವನಗರದಲ್ಲಿರುವ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ.ಶಿವಕುಮಾರ್ ಸಮ್ಮುಖದಲ್ಲಿ ಅಧಿಕೃತವಾಗಿ ಕಾಂಗ್ರೆಸ್ಗೆ ಸೇರ್ಪಡೆಯಾದರು.
ಈ ಹಿಂದೆ ಕಾಂಗ್ರೆಸ್ನಲ್ಲೇ ಇದ್ದ ಕೆ.ಚಂದ್ರಾರೆಡ್ಡಿ ಎಂಎಲ್ಸಿ ಟಿಕೆಟ್ ಸಿಗದೆ ಅಸಮಾಧಾನಗೊಂಡು ಬಿಜೆಪಿಗೆ ಸೇರಿಸಿದ್ದರು. ಈ ವೇಳೆ ಮಾಜಿ ಸಂಸದ ಎಸ್.ಮುನಿಸ್ವಾಮಿ ನಿಗಮ ಮಂಡಳಿಗೆ ಅಧ್ಯಕ್ಷ ಸ್ಥಾನ ಹಾಗೂ ಗೌರವ ಹುದ್ದೆ ನೀಡುವ ಭರವಸೆ ನೀಡಿದ್ದರು. ಆದರೆ, ಭರವಸೆ ಈಡೇರಿದ ಕಾರಣ ಎಸ್.ಎನ್. ನಾರಾಯಣಸ್ವಾಮಿ ಸಮ್ಮುಖದಲ್ಲಿ ಮರಳಿ ಕಾಂಗ್ರೆಸ್ ಮನೆ ಸೇರಿದ್ದಾರೆ.
ಬಂಗಾರಪೇಟೆ ಕಸಬಾ ವ್ಯಾಪ್ತಿಯ ಕಾರಮಂಗಲ ಎಂ.ಮುನಿರಾಜು ಅವರು ಜೆಡಿಎಸ್ ತಾಲೂಕು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ಗೆ ಪದಾರ್ಪಣೆ ಮಾಡಿದ್ದಾರೆ. ಕಸಬಾ ವ್ಯಾಪ್ತಿಯ
ಜಿಲ್ಲಾ ಪಂಚಾಯಿತಿ ಕ್ಷೇತ್ರದಲ್ಲಿ ಈ ಹಿಂದೆ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು. ಸಾಮಾನ್ಯ ಮಹಿಳಾ ಮೀಸಲಾತಿಯಲ್ಲಿ ಅವರ ಪತ್ನಿಯೂ ಕಾಂಗ್ರೆಸ್
ಅಭ್ಯರ್ಥಿಯಾಗಿದ್ದರು. ಆದರೆ ಇಬ್ಬರೂ ಪರಾಭವಗೊಂಡಿದ್ದರು.
ನಂತರದಲ್ಲಿ ನಡೆದ ರಾಜಕೀಯ ಬೆಳೆವಣಿಗೆಯಲ್ಲಿ ಮುನಿರಾಜು ಜೆಡಿಎಸ್ ಸೇರಿದರು. ಕಳೆದ ವಿಧಾನಸಭೆ, ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲುವಿಗೆ ಶ್ರಮಿಸಿದ್ದರು.
ಕೆ.ಚಂದ್ರಾರೆಡ್ಡಿ ಮತ್ತು ಮುನಿರಾಜು ಕಾಂಗ್ರೆಸ್ ಬಂದಿರುವುದು ಸ್ವಾಗತಾರ್ಹ. ಮುಖಂಡರು ಪಕ್ಷದ ಶಿಸ್ತಿಗೆ ಬದ್ಧರಾಗಿ ಸಂಘಟನೆ ಮಾಡಬೇಕು. ಕಾಂಗ್ರೆಸ್ ಶಿಸ್ತನ್ನು ನಂಬಿ ಯಾರೇ ಬರಲಿ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಾಗುವುದು. - ಎಸ್.ಎನ್.ನಾರಾಯಣಸ್ವಾಮಿ ಶಾಸಕ ಮತ್ತೆ ಕಾಂಗ್ರೆಸ್ಗೆ ಬಂದಿರುವುದು ನನ್ನ ಸ್ವಂತ ಮನೆಗೆ ಬಂದಂತಾಗಿದೆ. ಏನೇ ಸಮಸ್ಯೆ ಇದ್ದರೂ ಸ್ವಂತ ಮನೆ ಬಿಟ್ಟು ಬಾಡಿಗೆ ಮನೆಯಲ್ಲಿ ವಾಸಕ್ಕೆ ಹೋಗಬಾರದು ಎಂದು ಜ್ಞಾನೋದಯವಾಗಿದೆ. - ಕೆ.ಚಂದ್ರಾರೆಡ್ಡಿ, ಪುರಸಭೆ ಮಾಜಿ ಅಧ್ಯಕ್ಷ, ಬಂಗಾರಪೇಟೆ