

ಮಂಡ್ಯ: ತಾಲೂಕಿನ ಬಸರಾಳು ಗ್ರಾಮದಲ್ಲಿ ಮಂಚಮ್ಮ ದೇವಸ್ಥಾನದ ಜೀರ್ಣೋದ್ಧಾರ ಹಾಗೂ ದೇವಿಯ ನೂತನ ವಿಗ್ರಹ ಪ್ರತಿಷ್ಠಾಪನಾ ವಿಧಿ ವಿಧಾನಗಳು ಭಕ್ತಿ ಪೂರ್ವಕ, ಸಡಗರ ಸಂಭ್ರಮದಿಂದ ನೆರವೇರಿದವು.
ಗ್ರಾಮದ ಗಂಗಾಮತಸ್ಥ ಸಮುದಾಯದವರು ಅನಾದಿಕಾಲದಿಂದಲೂ ಪೂಜಿಸುತ್ತಾ ಬಂದಿರುವ ಮಂಚಮ್ಮ ದೇವಿಯ ದೇವಸ್ಥಾನದ ಆವರಣದಲ್ಲಿ ಗುರುವಾರ ಬೆಳಗ್ಗೆಯಿಂದಲೇ ಪೂಜಾ ಕಾರ್ಯಕ್ರಮ ಆರಂಭಗೊಂಡವು. ವೇದಬ್ರಹ್ಮ ಪ್ರವೀಣ್ ವಿನಯ ದೀಕ್ಷಿತ್ ಅವರ ನೇತೃತ್ವದಲ್ಲಿ ಗಣಪತಿ ಪ್ರಾರ್ಥನೆ, ಯಾಗ ಶಾಲಾ ಪ್ರವೇಶ, ಮಹಾಸಂಕಲ್ಪ, ಪಂಚಗವ್ಯ, ರಕ್ಷಾಬಂಧನ, ಕಳಸ ಸ್ಥಾಪನೆ, ವಾಸ್ತು ಬಲಿಹರಣ ಸೇರಿದಂತೆ ಧಾರ್ಮಿಕ ಕೈಂಕರ್ಯ ನಡೆಯಿತು. ರಾತ್ರಿ ದೇವಿಗೆ ನವರತ್ನ ಪಂಚಲೋಹ ಶ್ರೀಚಕ್ರದೊಂದಿಗೆ ಅಷ್ಟಬಂಧನ ಕ್ರಿಯಾ ವಿಧಿ ವಿಧಾನಗಳು ನೆರವೇರಿದವು.
ಶುಕ್ರವಾರ ಮುಂಜಾನೆ ಗಣಪತಿ ಪ್ರಾರ್ಥನೆ, ಚತುರ್ವೇದ ಪಾರಾಯಣ, ಪ್ರಾಣ ಪ್ರತಿಷ್ಠಾಪನೆ, ನಾಮಗ್ರಹಣ, ಮಂಗಳಾರತಿ ಮಾಡಿ ಸಂಧಾನ ಪೂರ್ವಕ ಸೇರಿದಂತೆ ಮಹಾಪೂರ್ಣಾಹುತಿ ಯಶಸ್ವಿಯಾಗಿ ನಡೆಸಲಾಯಿತು. ಅಂತೆಯೇ ಪಂಚಾಮೃತ ಅಭಿಷೇಕ, ಕುಂಭಾಭಿಷೇಕ, ಅಲಂಕಾರ ಸೇರಿದಂತೆ ಇನ್ನಿತರ ಪೂಜಾ ವಿಧಿವಿಧಾನ, ಮಹಾಮಂಗಳಾರತಿ ಬಳಿಕ ತೀರ್ಥ ಪ್ರಸಾದ ವಿತರಿಸಲಾಯಿತು. ಮಧ್ಯಾಹ್ನ ಕಾಲಭೈರವೇಶ್ವರ ಸ್ವಾಮಿ ದೇವಸ್ಥಾನ ಆವರಣದಲ್ಲಿ 2 ಸಾವಿರಕ್ಕೂ ಹೆಚ್ಚು ಜನರಿಗೆ ಪ್ರಸಾದವಾಗಿ ಅವರೆಕಾಳು ಸಾರು, ರಾಗಿ ಮುದ್ದೆ, ಅನ್ನ, ಪಾಯಸ ಪ್ರಸಾದ ವಿತರಿಸಲಾಯಿತು. ಶಾಸಕ ರವಿಕುಮಾರ್ ಗಣಿಗ, ಮನ್‌ಮುಲ್ ಮಾಜಿ ಅಧ್ಯಕ್ಷ ಬಿ.ಆರ್.ರಾಮಚಂದ್ರು ಸೇರಿದಂತೆ ಹಲವು ಗಣ್ಯರು ದೇವರ ದರ್ಶನ ಮಾಡಿ ಪ್ರಸಾದ ಸ್ವೀಕರಿಸಿದರು.
ಗ್ರಾಮದ ಪಂಚಮ್ಮ ದೇವಸ್ಥಾನ, ಕಾಲಭೈರವೇಶ್ವರ ಸ್ವಾಮಿ ದೇವಸ್ಥಾನವನ್ನು ವಿವಿಧ ಬಗೆಯ ಹೂ ಹಾಗೂ ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು. ಮಾತ್ರವಲ್ಲದೆ ಬಸ್ ನಿಲ್ದಾಣದವರೆಗೆ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿತ್ತು. ಡಿ.7ರಿಂದ 48 ದಿನ ಮಂಚಮ್ಮ ದೇವಿಗೆ ಅಭಿಷೇಕ, ಅರ್ಚನೆ, ಮಹಾ ಮಂಗಳಾರತಿ, ತೀರ್ಥ ಪ್ರಸಾದ ನಡೆಯಲಿದೆ.