

ವಿರಾಜಪೇಟೆ: ಸ್ವಂತ ಗಳಿಕೆಯಲ್ಲಿ ವಿರಾಜಪೇಟೆ ತಾಲೂಕು ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಬಿ.ಎಂ.ಗಣೇಶ್ ಅವರು ಬಡವರಿಗೆ ನಿರ್ಮಾಣ ಮಾಡಿರುವ ನಾಲ್ಕನೇ ಮನೆಯನ್ನು ವಿರಾಜಪೇಟೆ ಬಾಳೂಗೋಡು ಗ್ರಾಮದ ಕಂಡಿಮಕ್ಕಿ ಕಾಲನಿಯಲ್ಲಿ ಹಸ್ತಾಂತರ ಮಾಡಿದರು.
ವಿರಾಜಪೇಟೆ ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಳೊಗೋಡು ಗ್ರಾಮ ಕಂಡಿಮಕ್ಕಿ ಪೂಕಾಡ್ ಪೈಸಾರಿಯಲ್ಲಿ ವಾಸವಿರುವ ಕಾರ್ಮಿಕ ದಂಪತಿ ಪಿ.ಯು.ಕಿರಣ್ ಮತ್ತು ಪಿ.ಕೆ. ಬೋಜಮ್ಮ (ಜಾನ್ಸಿ) ಅವರಿಗೆ ಸಮಾಜ ಸೇವಕರೂ ಆದ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಬಿ.ಎಂ. ಗಣೇಶ್ ಅವರು ಭಾನುವಾರ ಹೊಸ ಮನೆಯ ಕೀ ನೀಡುವ ಮೂಲಕ ಮನೆಯನ್ನು ದಂಪತಿಗೆ ಹಸ್ತಾಂತರ ಮಾಡಿದರು.
ಶ್ರೀ ವಿದ್ಯಾ ವಿನಾಯಕ ಸೇವಾ ಸಮಿತಿ ಆರ್ಜಿ, ಪೆರುಂಬಾಡಿ, ಸಮಿತಿ ಮತ್ತು ಮನೆ ಪಡೆದುಕೊಂಡ ದಂಪತಿ ವತಿಯಿಂದ ಸನ್ಮಾನ ಸ್ವೀಕರಿಸಿ ಬಳಿಕ ಮಾತನಾಡಿದ ಬಿ.ಎಂ.ಗಣೇಶ್, ಕಾರ್ಮಿಕರು ಪ್ರಸ್ತುತ ಸ್ಥಿತಿಯಲ್ಲಿ ಆರ್ಥಿಕವಾಗಿ ಮುಂದುವರಿದಿದ್ದಾರೆ. ಅದರೆ, ಉಳಿಕೆಯ ವಿಷಯದಲ್ಲಿ ಹಿಂದುಳಿದಿದ್ದಾರೆ. ಹೀಗಾಗಿ ಇತರ ದುಂದುವೆಚ್ಚಗಳಿಗೆ ಕಡಿವಾಣ ಹಾಕಬೇಕು ಎಂದು ಸಲಹೆ ನೀಡಿದರು.
ಪ್ರಸ್ತುತ ದಿನಗಳಲ್ಲಿ ಕೂಲಿ 800ರಿಂದ 1000 ರೂ. ಪಡೆದುಕೊಂಡರೂ ಮನೆ ನಿರ್ವಹಣೆ ಕಷ್ಟಸಾಧ್ಯ ಎಂದು ತಿಳಿಯುವುದು ತಪ್ಪು ಭಾವನೆಯಾಗಿದೆ. ಗಳಿಕೆಯಲ್ಲಿ ಅಲ್ಪ ಪ್ರಮಾಣದಲ್ಲಿ ಉಳಿತಾಯ ಮಾಡಿಕೊಂಡು ಬಂದಲ್ಲಿ ಗುಡಿಸಲು ಮನೆ ಸುಸಜ್ಜಿತ ಮನೆ ನಿರ್ಮಾಣ ಮಾಡಬಹುದಾಗಿದೆ. ತನಗೆ ಬರುವ ಹಣದಿಂದ ಸ್ವಂತ ವೆಚ್ಚದಲ್ಲಿ ಬಡ ಕಾರ್ಮಿಕರಿಗೆ ವಿವಿಧ ಸ್ಥಳಗಳಲ್ಲಿ ನಾಲ್ಕು ಮನೆ ನಿರ್ಮಾಣ ಮಾಡಿ ಹಸ್ತಾಂತರ ಮಾಡಿದ್ದೇನೆ. ಅದೇ ರೀತಿಯಲ್ಲಿ ಸುಮಾರು ಏಳು ಮನೆಗಳಿಗೆ ಉಚಿತವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿದ್ದೇನೆ. ಸುಮಾರು ಎರಡು ತಿಂಗಳ ಅವಧಿಯಲ್ಲಿ 2 ಲಕ್ಷ ರೂ. ವೆಚ್ಚದಲ್ಲಿ ಮನೆ ನಿರ್ಮಾಣ ಸಾಧ್ಯವಾಗಿದೆ ಎಂದು ತಿಳಿಸಿದರು.
ಮನೆ ಹಸ್ತಾಂತರ ಕಾರ್ಯಕ್ರಮದಲ್ಲಿ ರಿಬ್ಬನ್ ಕತ್ತರಿಸುವ ಮೂಲಕ ಗೃಹ ಪ್ರವೇಶ ಮಾಡಲಾಯಿತು. ಬಳಿಕ ಗ್ರಾಮಸ್ಥರು ಮನೆ ಪಡೆದುಕೊಂಡ ದಂಪತಿ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಬಿ.ಎಂ. ಗಣೇಶ ಅವರಿಗೆ ಶಾಲುಹೊದಿಸಿ ಫಲತಾಂಬೂಲ ನೀಡಿ ಸನ್ಮಾನ ಮಾಡಲಾಯಿತು.
ಶ್ರೀ ವಿದ್ಯಾ ವಿನಾಯಕ ಸೇವಾ ಸಮಿತಿ ಆರ್ಜಿ, ಪೆರುಂಬಾಡಿ, ಸಮಿತಿ ಅಧ್ಯಕ್ಷ ಬಿ.ಎಂ.ಗಿರೀಶ್, ಜೀವನ್, ಬಿ.ಎಂ.ಗಣೇಶ್, ಸುಮಾ ಗಣೇಶ್, ಬಿ.ಆರ್.ಮಂಜಪ್ಪ, ಬಿ.ಎಂ.ಪಾರ್ವತಿ, ಪಿ.ಯು. ಕಿರಣ್ ಇತರರು ಇದ್ದರು.