

ಕಾರವಾರ: ಕ್ರಿಮ್ಸ್ನಲ್ಲಿ ನಿರ್ಮಾಣವಾಗಿರುವ 450 ಹಾಸಿಗೆಗಳ ಹೊಸ ಕಟ್ಟಡಕ್ಕೆ ಆಸ್ಪತ್ರೆಯ ಕೆಲವು ವಿಭಾಗಗಳನ್ನು ಇನ್ನು 15 ದಿನಗಳಲ್ಲಿ ಸ್ಥಳಾಂತರ ಮಾಡಲಾಗುವುದು ಎಂದು ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕಿ ಡಾ.ಪೂರ್ಣಿಮಾ ಆರ್.ಟಿ.ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2020 ರಲ್ಲಿ ಆಗಿನ ಯಡಿಯೂರಪ್ಪ ಸರ್ಕಾರದ ಅವಽಯಲ್ಲಿ 450 ಕೋಟಿ ರೂ. ವೆಚ್ಚಗಳ ಹೊಸ ಕಟ್ಟಡ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ನಡೆದಿತ್ತು. ಬಿಎಸ್‌ಆರ್ ಕಂಪನಿ ಗುತ್ತಿಗೆ ಪಡೆದಿತ್ತು. 150 ಕೋಟಿ ರೂ. ಬಿಡುಗಡೆಯಾಗಿತ್ತು. ಜಾಗದ ಸಮಸ್ಯೆ ವಿವಿಧ ಕಾರಣಗಳಿಂದ ಕಾಮಗಾರಿ ವಿಳಂಬವಾಗಿದ್ದು, ನಿರ್ಮಾಣ ವೆಚ್ಚ 198 ಕೋಟಿ ರೂ.ಗೆ ಹೆಚ್ಚಿದೆ.
ನೆಲ ಹಾಗೂ 4 ಮಹಡಿಗಳ ಕಟ್ಟಡದಲ್ಲಿ ಕೆಲವು ಲೋಪಗಳಿವೆ ಎಂದು ಲೋಕೋಪಯೋಗಿ ಇಲಾಖೆ ತಜ್ಞರ ತಂಡ ಪರಿಶೀಲನೆ ನಡೆಸಿ, ತಿಳಿಸಿತ್ತು. ಇದರಿಂದ ಕಟ್ಟಡ ಹಸ್ತಾಂತರ ಮಾಡಿಕೊಂಡಿರಲಿಲ್ಲ. ಕಾಮಗಾರಿಯ ಜವಾಬ್ದಾರಿ ವಹಿಸಿದ್ದ ಸಂಸ್ಥೆಯು ಲೋಪ ಹಾಗೂ ನ್ಯೂನತೆಗಳನ್ನು ಸರಿಪಡಿಸಿಕೊಟ್ಟ ನಂತರವೇ ನಾವು ಕಟ್ಟಡ ಹಸ್ತಾಂತರ ಮಾಡಿಕೊಂಡಿದ್ದೇವೆ ಎಂದರು.
450 ಹಾಸಿಗೆಗಳ ಹೊಸ ಆಸ್ಪತ್ರೆ ಕಟ್ಟಡಕ್ಕೆ ಬೇಕಾಗಿರುವ ಪೀಠೋಕರಣ ಖರೀದಿಗೆ 25 ಕೋಟಿ ರೂ. ಪ್ರಸ್ತಾವನೆಗೆ ಇತ್ತೀಚೆಗೆ ರಾಜ್ಯ ಕ್ಯಾಬಿನೇಟ್‌ನಲ್ಲಿ ಅನುಮೋದನೆ ನೀಡಲಾಗಿದೆ. ಟೆಂಡರ್ ಪ್ರಕ್ರಿಯೆ ನಡೆದಿದೆ. ಒಟ್ಟು 661 ಹೆಚ್ಚುವರಿ ಸಿಬ್ಬಂದಿ ನೇಮಕಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಲಾಗಿದೆ. ಎಂಆರ್‌ಐ ಸ್ಕಾ÷್ಯನಿಂಗ್ ಯಂತ್ರ ಅಳವಡಿಕೆ ಟೆಂಡರ್ ಪ್ರಕ್ರಿಯೆ ನಡೆದಿದೆ. ಕ್ಯಾನ್ಸರ್ ಚಿಕಿತ್ಸಾ ಘಟಕಗಳ ನಿರ್ಮಾಣಕ್ಕೆ ಪ್ರತ್ಯೇಕ 3 ಕೋಟಿ ರೂ. ಅನುದಾಣ ಬಿಡುಗಡೆಯಾಗಿದೆ. ಆದರೆ, ಈ ಎಲ್ಲ ಪ್ರಕ್ರಿಯೆಗಳು ಮುಗಿಯಲು ಇನ್ನೂ ಕೆಲವು ತಿಂಗಳು ಬೇಕಿದೆ. ಆದರೆ, ಅಲ್ಲಿಯವರೆಗೆ ಕಾಯದೇ ಇರುವ ಸಿಬ್ಬಂದಿ ಹಾಗೂ ಉಪಕರಣಗಳನ್ನು ಬಳಸಿಕೊಂಡು ಹೊಸ ಕಟ್ಟಡಕ್ಕೆ ಆಸ್ಪತ್ರೆ ಸ್ಥಳಾಂತರಕ್ಕೆ ಸಿದ್ಧತೆ ನಡೆಸಿದ್ದೇವೆ ಎಂದರು.
ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಗಳನ್ನು ಕರೆಸಿ ಉದ್ಘಾಟನಾ ಕಾರ್ಯಕ್ರಮ ಮಾಡಲಾಗುವುದು. ರೋಗಿಗಳ ಅನುಕೂಲಕ್ಕಾಗಿ ಆಸ್ಪತ್ರೆ ಸ್ಥಳಾಂತರಿಸಿ ಎಂದು ಸರ್ಕಾರದಿಂದಲೂ ಅನುಮತಿ ನೀಡಲಾಗಿದೆ. ಈಗಾಗಲೇ ಪೀಠೋಪಕರಣ ಸ್ಥಳಾಂತರ ಪ್ರಾರಂಭವಾಗಿದ್ದು, 15 ದಿನಗಲ್ಲಿ ರೋಗಿಗಳನ್ನು ಅಲ್ಲಿಗೆ ಸ್ಥಳಾಂತರಿಸಲಾಗುವುದು ಎಂದರು.
ಎಲ್ಲೆಲ್ಲಿ ಏನೇನು ಸೌಲಭ್ಯ ..?
ನೆಲ ಮಹಡಿಯಲ್ಲಿ ಸ್ವಾಗತ ಹಾಗೂ ಸಮಾಲೋಚನಾ ವಿಭಾಗ, ಕ್ಯಾನ್ಸರ್ ಚಿಕಿತ್ಸಾ ವಿಭಾಗ, ರೇಡಿಯೋ ಥೆರಪಿ, ಟ್ರಾಮಾ ಕೇರ್ ಸೆಂಟರ್, ತುರ್ತು ಚಿಕಿತ್ಸಾ ವಿಭಾಗ, ಎಕ್ಸ್-ರೇ ಹಾಗೂ 61 ಬೆಡ್ ವ್ಯವಸ್ಥೆ ಇರಲಿದೆ. ಮೊದಲ ಮಹಡಿಯಲ್ಲಿ ಸಭಾಭವನ, ಶಸತ್ರ ಚಿಕಿತ್ಸಾ ಕೊಠಡಿ, 2 ಗ್ರಂಥಾಲಯಗಳು ಹಾಗೂ ಹೆರಿಗೆ, ಮಕ್ಕಳ ಐಸಿಯು, ಸೇರಿ 96 ಹಾಸಿಗೆಗಳ ವಾರ್ಡ್ ಇರಲಿವೆ. ಎರಡನೇ ಮಹಡಿಯಲ್ಲಿ ಜನರಲ್ ಮೆಡಿಸಿನ್ ವಿಭಾಗ, 126 ಹಾಸಿಗೆಗಳ ವಾರ್ಡ್, ಪ್ರಾಧ್ಯಾಪಕರ ಕೊಠಡಿ ಇತ್ಯಾದಿ ಸೌಲಭ್ಯ ಇರಲಿದೆ. ಮೂರನೇ ಮಹಡಿಯಲ್ಲಿ ಜನರಲ್ ಸರ್ಜರಿ ವಿಭಾಗ, ಸಭಾಭವನ, 126 ಹಾಸಿಗೆಗಳ ವಾರ್ಡ್ ಇರಲಿದೆ. ನಾಲ್ಕನೇ ಮಹಡಿಯಲ್ಲಿ 5 ಶಸ್ತç ಚಿಕಿತ್ಸಾ ಕೊಠಡಿಗಳ ಕಾಂಪ್ಲೆಕ್ಸ್, ಒಟಿ ರಿಕವರಿ ರೂಂ ಸೇರಿ ಹಲವು ವಿಭಾಗಗಳು ಇರಲಿವೆ ಎಂದು ಡಾ.ಪೂರ್ಣಿಮಾ ವಿವರಿಸಿದರು.
1970 ರಲ್ಲಿ ನಿರ್ಮಾಣವಾದ ಜಿಲ್ಲಾ ಆಸ್ಪತ್ರೆಯ ಹಳೆಯ ಕಟ್ಟಡ ಶಿಥಿಲವಾಗಿದೆ. ಅದರ ಮರು ನಿರ್ಮಾಣಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಲಾಗಿದೆ. ಸುಸ್ಥಿತಿಯಲ್ಲಿರುವ ಕಡೆಗಳಲ್ಲಿ ಸದ್ಯ ಹೊರ ರೋಗಿ ವಿಭಾಗಗಳನ್ನು ಮಾತ್ರ ನಡೆಸಲಾಗುವುದು. ಹಂತ, ಹಂತವಾಗಿ ಹೊಸ ಕಟ್ಟಕ್ಕೆ ಎಲ್ಲ ಸೌಲಭ್ಯ ಸ್ಥಳಾಂತರಿಸಲಾಗುವುದು. ಡಾ.ಪೂರ್ಣಿಮಾ ಆರ್.ಟಿ. ಡೀನ್, ಕ್ರಿಮ್ಸ್ ಕಾರವಾರ .......