ಸಂತ್ರಸ್ತರ ಬದುಕಲ್ಲಿ ಹೊಸ ನಿರೀಕ್ಷೆ

 ಕಾವೇರಿ ದರದಲ್ಲಿರುವ ಮನೆ
ಕಾವೇರಿ ದರದಲ್ಲಿರುವ ಮನೆ
Published on

ಸಿದ್ದಾಪುರ: ಕಾವೇರಿ ನದಿ ತೀರದ ಬಫರ್ ಜೋನ್ ಪ್ರದೇಶಗಳನ್ನು ಸರ್ವೇ ಮಾಡಲು ದಿನಾಂಕ ನಿಗದಿಯಾಗಿದ್ದು, ಏಳು ವರ್ಷಗಳಿಂದ ಶೆಡ್‌ಗಳಲ್ಲಿ ಜೀವನ ಸಾಗಿಸುತ್ತಿರುವ ಸಂತ್ರಸ್ತರ ನಿವೇಶನ ನಿರೀಕ್ಷೆಗೆ ಮತ್ತೆ ಜೀವ ಬಂದಂತಾಗಿದೆ.

2018-19ರಲ್ಲಿ ಕಾವೇರಿ ಪ್ರವಾಹಕ್ಕೆ ಸಿಲುಕಿ ಮನೆ ಕಳೆದುಕೊಂಡವರಿಗೆ ಸರ್ಕಾರ ನಿವೇಶನ ದೊರೆಯಲಿದೆ ಎಂಬ ಭರವಸೆ ಇಟ್ಟುಕೊಂಡು ಪ್ಲಾಸ್ಟಿಕ್ ಹೊದಿಕೆಯಿಂದ ನಿರ್ಮಿಸಿದ ಶೆಡ್‌ಗಳಲ್ಲಿ ಜೀವನ ಸಾಗಿಸುತ್ತಿರುವವರ ಮುಖದಲ್ಲಿ ಈಗ ಸ್ವಲ್ಪಮಟ್ಟಿಗೆ ಮಂದಹಾಸ ಮೂಡಿದಂತಾಗಿದೆ. ಕಾವೇರಿ ನದಿ ತೀರದ ಬಫರ್ ಜೋನ್ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಒಳಪಟ್ಟ ಪ್ರದೇಶವಾಗಿದ್ದು, ಆರೇಳು ದಶಕಗಳಿಂದ ಸುಮಾರು 170 ಕುಟುಂಬಗಳು ಲ್ಲಿ ಬದುಕು ಕಟ್ಟಿಕೊಂಡಿವೆ. ಇವರಿಗೆ ಪಡಿತರ ಚೀಟಿ, ಮತದಾರ ಗುರುತಿನ ಚೀಟಿ, ಕುಡಿಯುವ ನೀರು, ವಿದ್ಯುತ್ ಸೌಲಭ್ಯ ಪಡೆಯಲು ನಿರಾಪೇಕ್ಷಣಾ ಪತ್ರ ನೀಡುವ ಮೂಲಕ ಗ್ರಾಮ ಪಂಚಾಯಿತಿ ಕಂದಾಯ ನಿಗದಿಪಡಿಸಿದೆ. ಈ ನಡುವೆ ಜವಾಹರ್ ರೋಜ್‌ಗಾರ್ ಯೋಜನೆಯಡಿ ಸರ್ಕಾರವೇ ಮನೆಗಳನ್ನು ನಿರ್ಮಿಸಿ ಇವರ ಬದುಕನ್ನು ಅತಂತ್ರಗೊಳಿಸಿದೆ. 2018ರ ಕಾವೇರಿ ನದಿ ಪ್ರವಾಹದ ನಂತರ ಕರಡಿಗೋಡು ಗ್ರಾಮದ ಸಂತ್ರಸ್ಥರು ಸ್ವಯಂಪ್ರೇರಣೆಯಿಂದ ತಮಗೆ ನಿವೇಶನ ನೀಡಿದಲ್ಲಿ ಈ ಪ್ರದೇಶವನ್ನು ಬಿಟ್ಟು ಹೋಗುವುದಾಗಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದ್ದರು.

ಕಂದಾಯ ಇಲಾಖೆ ಅಧೀನಕ್ಕೆ ಒಳಪಟ್ಟ ಕೊಡಗು-ಶ್ರೀರಂಗಪಟ್ಟಣ ಸರ್ವೇ ನಂ 28/2ರಲ್ಲಿ ನಿವೇಶನ ಒದಗಿಸಲು ಸಿದ್ಧತೆ ನಡೆಸಲಾಗಿತ್ತು. ಈ ಅರ್ಜಿ ಜಿಲ್ಲಾಧಿಕಾರಿ ಕಚೇರಿಯಲ್ಲಿದ್ದರೂ ಅದನ್ನು ಹೊರತುಪಡಿಸಿ ಕಸ್ತೂರಿರಂಗನ್ ವರದಿಗೆ ಒಳಪಡುವ ಅರಣ್ಯ ಪ್ರದೇಶದೊಳಗೆ ಜಾಗ ಗುರುತಿಸಲಾಗಿತ್ತು. ಆದರೆ ಇಂದಿಗೂ ಈ ಕುರಿತು ಯಾವುದೇ ಬೆಳವಣಿಗೆಯಾಗದೆ ಕಳೆದ 7 ವರ್ಷಗಳಿಂದ ಸಂತ್ರಸ್ತರು ಸೂರು ಸಿಗಲಿದೆ ಎಂಬ ಭರವಸೆಯಲ್ಲೇ ದಿನದೂಡುವಂತಾಗಿದೆ.

ಇದೀಗ ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಹ್ಯ ಗ್ರಾಮದ ಕಕ್ಕಟಕಾಡು, ಗುಹ್ಯ, ಕೂಡುಗದ್ದೆ ಹಾಗೂ ಕರಡಿಗೋಡು ಗ್ರಾಮಗಳ ಕಾವೇರಿ ನದಿ ತೀರದ ಬಫರ್ ಜೋನ್ ಪ್ರದೇಶಗಳನ್ನು ಸರ್ವೇ ಮಾಡಲು ವಿರಾಜಪೇಟೆ ತಹಸೀಲ್ದಾರ್ ಪ್ರವೀಣ್, ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ನಿಯೋಜಿಸಿದ್ದಾರೆ. ಭೂಮಾಪನ ಅಧಿಕಾರಿ ಸೂರ್ಯಪ್ರಕಾಶ್ ಹಾಗೂ ರಘುವೀರ್ ಅವರ ನೇತೃತ್ವದಲ್ಲಿ ಸಂಬಂಧಪಟ್ಟ ಇಲಾಖೆ ಸಿಬ್ಬಂದಿಯೊಂದಿಗೆ ಅ.27ರಂದು ಸರ್ವೇ ಕಾರ್ಯ ನಡೆಯಲಿದೆ. ಇದರಿಂದ ಪ್ರಸ್ತುತ ನದಿತೀರದಲ್ಲಿ ವಾಸಿಸುತ್ತಿರುವ ಸಂತ್ರಸ್ತರಲ್ಲಿ ಬಫರ್ ಜೋನ್ ಒತ್ತುವರಿದಾರರ ಮಾಹಿತಿ ಸಿಗಲಿದ್ದು, ನಿವೇಶನ ಒದಗಿಸಲು ಸಹಕಾರಿ ಆಗಲಿದೆ. ಆ ಮೂಲಕ ಸಂತ್ರಸ್ತರಲ್ಲಿ ನಿವೇಶನದ ಆಶಾಭಾವನೆ ಮತ್ತೆ ಚಿಗುರೊಡೆದಿದೆ.

ಶೆಡ್‌ಗಳಲ್ಲಿ ಜೀವನ: 2018, 2019ರ ಪ್ರವಾಹದಲ್ಲಿ ಮನೆ ಕಳೆದುಕೊಂಡ ಸಂತ್ರಸ್ತರು ಈ ಹಿಂದೆ ತಮ್ಮ ಮನೆಗಳಿದ್ದ ಜಾಗದಲ್ಲಿ ಪ್ಲಾಸ್ಟಿಕ್ ಹೊದಿಕೆಯ ಶೆಡ್‌ಗಳನ್ನು ನಿರ್ಮಿಸಿಕೊಂಡು ಜೀವನ ಸಾಗಿಸುತ್ತಿದ್ದಾರೆ. ನೂರಾರು ಮನೆಗಳಲ್ಲಿ ಗೋಡೆ ಬಿರುಕು ಬಿಟ್ಟು ವಾಸಕ್ಕೆ ಯೋಗ್ಯವಲ್ಲದ ಸ್ಥಿತಿಯಲ್ಲಿವೆ. ಕೆಲ ಸಂತ್ರಸ್ತರು ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ.

ಇದುವರೆಗೂ ಬಾಡಿಗೆ ಹಣ ಕೂಡ ಸರ್ಕಾರದಿಂದ ಸಿಕ್ಕಿಲ್ಲ. ಸಿದ್ದಾಪುರದ ಗುಹ್ಯ, ಕರಡಿಗೋಡು, ಮುಂತಾದ ಪ್ರದೇಶಗಳಲ್ಲಿ ಪ್ರತಿ ವರ್ಷ ಪ್ರವಾಹ ಉಂಟಾಗುತ್ತಿದ್ದು, ಇಲ್ಲಿನ ನಿವಾಸಿಗಳ ಜೀವಕ್ಕೆ ರಕ್ಷಣೆ ಇಲ್ಲದಂತಾಗಿದೆ. ನದಿ ದಡದಲ್ಲಿ ಸೂರು ಕಟ್ಟಿಕೊಂಡು ವಾಸಿಸುತ್ತಿರುವುದು ಹೆಚ್ಚಾಗಿ ಬಡವರ್ಗದ ಜನರೇ ಆಗಿದ್ದಾರೆ. ಇದರಿಂದ ಸ್ವಂತ ಜಾಗ ಖರೀದಿಸಿ ಮನೆ ಕಟ್ಟಲು ಸಾಧ್ಯವಾಗದೆ ಸಂಕಟದಲ್ಲಿ ಬೇರೆ ಮಾರ್ಗವಿಲ್ಲದೆ ನದಿದಡದಲ್ಲೇ ಜೀವನ ಸಾಗಿಸಬೇಕಾದ ಅನಿವಾರ್ಯತೆ ಇವರದ್ದಾಗಿದೆ. ಮಳೆಗಾಲದ ಪ್ರವಾಹಕ್ಕೆ ನೀರು ನುಗ್ಗುವ ಸಂದರ್ಭದಲ್ಲಿ ವಸ್ತುಗಳೊಂದಿಗೆ ಕಾಳಜಿ ಕೇಂದ್ರಕ್ಕೆ ತೆರಳುವ ಸ್ಥಳೀಯರು ಪ್ರವಾಹದ ಬಳಿಕ ಇಲ್ಲಿಗೆ ಹಿಂದಿರುಗುತ್ತಾರೆ. ಹಾಗಾಗಿ ಶೀಘ್ರ ಸರ್ಕಾರ ಸಂತ್ರಸ್ತರಿಗೆ ನಿವೇಶನ ನೀಡಬೇಕು ಎಂದು ಒತ್ತಾಯ ಹೆಚ್ಚಾಗಿದೆ.

ಪ್ರವಾಹ ಸಂತ್ರಸ್ತರ ನಿವೇಶನದ ಬೇಡಿಕೆಯನ್ನು ಮುಂದಿಟ್ಟು 9 ದಿನಗಳ ಕಾಲ ಅಹೋರಾತ್ರಿ ಹೋರಾಟ ನಡೆಸಿದರೂ ಸರ್ಕಾರ ಹಾಗೂ ಜನಪ್ರತಿನಿಧಿಗಳೂ ಸ್ಪಂದಿಸಿಲ್ಲ. ಹೀಗಾಗಿ ಸಮಸ್ಯೆಗೆ ಪರಿಹಾರವೂ ಸಿಕ್ಕಿಲ್ಲ. ಶಾಸಕರು, ಸರ್ಕಾರಗಳು ಬದಲಾದರೂ ನಮ್ಮ ನಿವೇಶನದ ಕನಸು ಮರೀಚಿಕೆಯಾಗಿದೆ. ನಮ್ಮ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಶೀಘ್ರದಲ್ಲಿಯೇ ನಿವೇಶನ ಒದಗಿಸಲು ಕ್ರಮ ಕೈಗೊಳ್ಳಬೇಕು.

ಯಮುನಾ ಅಧ್ಯಕ್ಷೆ, ನಿವೇಶನ ಹೋರಾಟ ಸಮಿತಿ

ಐದು ವರ್ಷಗಳಿಂದ ನಿವೇಶನದ ಭರವಸೆ ಇಟ್ಟುಕೊಂಡು ಪ್ಲಾಸ್ಟಿಕ್ ಶೆಡ್‌ಗಳಲ್ಲಿ ಬದುಕು ದೂಡುತ್ತಿದ್ದೇವೆ. ಮಳೆಗಾಲದಲ್ಲಿ ಜನ ಪ್ರತಿನಿಧಿಗಳು, ಅಧಿಕಾರಿಗಳು ನೀಡುವ ಭರವಸೆಗಳಿಂದ ಒಂದಷ್ಟು ಆಶಾಭಾವನೆ ಮೂಡಿದರೂ ನಂತರ ಅದು ಭರವಸೆಯಾಗಿಯೇ ಉಳಿದಿದೆ. ಸಂತ್ರಸ್ತರು ಹೋರಾಟದ ಮೂಲಕ ನಿವೇಶನ ಪಡೆಯಬೇಕಾದ ಅವಶ್ಯಕತೆ ಇದೆ.

ಹರೀಶ್ ಕಕ್ಕಟಕಾಡು ಪ್ರವಾಹ ಸಂತ್ರಸ್ತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net