

ಶಿವಮೊಗ್ಗ: ಶರಾವತಿ ಸಂತ್ರಸ್ತರಿಗೆ ಭೂಮಿ ಹಕ್ಕು ನೀಡುವ ವಿಷಯದಲ್ಲಿ ಒಂದಿಷ್ಟು ಆಶಾದಾಯಕ ಬೆಳವಣಿಗೆಗಳು ಕಾಣಿಸಿಕೊಂಡಿವೆ. ರಾಜ್ಯ ಹಾಗೂ ಕೇಂದ್ರ ಸರ್ಕಾರ ಪರಸ್ಪರ ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳುವಂತೆ ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿರುವುದರಿಂದ ಹೊಸ ನಿರೀಕ್ಷೆಗಳು ಮೂಡಿವೆ. ಈಗ ರಾಜ್ಯ ಸರ್ಕಾರ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.
ಶರಾವತಿ ಸಂತ್ರಸ್ತರ ಭೂಮಿ ಡಿನೋಟಿಫಿಕೇಶನ್‌ಗೆ ಸಂಬಂಧಿಸಿದಂತೆ ಕೇಂದ್ರ ಹಾಗೂ ಸುಪ್ರೀಂಕೋರ್ಟ್ ಸಂತ್ರಸ್ತರಪರ ಒಲವು ತೋರಿಸಿವೆ. ಇದಕ್ಕೆ ಪೂರಕವಾಗಿ ರಾಜ್ಯ ಸರ್ಕಾರದಿಂದ ಸಿದ್ಧತೆಗಳು ಆರಂಭವಾಗಬೇಕು. ಈಗ ಕಾನೂನಾತ್ಮಕ ಪರಿಹಾರ ಸಿಗುವ ಲಕ್ಷಣಗಳು ಗೋಚರವಾಗುತ್ತಿವೆ. ಕೋರ್ಟ್ ನೀಡುವ ಆದೇಶ ಪ್ರಶ್ನಿಸದೇ ಪರಿಸರವಾದಿಗಳು ರೈತರ ಬಗ್ಗೆ ಔದಾರ್ಯ ತೋರಬೇಕು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.
ಈ ಹಿಂದೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಕೇಂದ್ರ ಅರಣ್ಯ ಸಚಿವ ಭೂಪೇಂದ್ರ ಯಾದವ್ ಅವರನ್ನು ಭೇಟಿಯಾಗಿ ಡಿನೋಟಿಫೈಗೆ ಅನುಮತಿ ಕೋರಲಾಗಿತ್ತು. ಎಲ್ಲವೂ ಒಂದು ಹಂತಕ್ಕೆ ಬಂತು ಎನ್ನುವಾಗ ರಾಜ್ಯದಲ್ಲಿ ಬಿಜೆಪಿ ಆಡಳಿತಾವಧಿ ಮುಕ್ತಾಯವಾಗಿತ್ತು. ಈಗ ರಾಜ್ಯ ಸರ್ಕಾರ ಸುಪ್ರೀಂ ಮೊರೆ ಹೋಗಿರುವುದರಿಂದ ಮತ್ತೆ ಕಾನೂನಾತ್ಮಕ ಹೋರಾಟ ಮುಂದುವರಿದಂತಾಗಿದೆ ಎಂದರು.
ಸುಪ್ರೀಂನಲ್ಲಿ ಶರಾವತಿ ಸಂತ್ರಸ್ತರ ಭೂಮಿ ಹಕ್ಕು ವಿಷಯದ ಕುರಿತ ಮುಂದಿನ ವಿಚಾರಣೆ ಜ.20ಕ್ಕೆ ನಡೆಯಲಿದೆ. ಇದರ ನಡುವೆ ಕೇಂದ್ರ ಅರಣ್ಯ ಸಚಿವರನ್ನು ಭೇಟಿಯಾಗಿ ಸಹಕಾರ ಕೋರಲಾಗಿದೆ. ಬಿಎಸ್‌ವೈ ಕೂಡ ಅವರೊಂದಿಗೆ ಫೋನ್‌ನಲ್ಲಿ ಮಾತನಾಡಿದ್ದಾರೆ. ಕೇಂದ್ರ ಸಚಿವರಿಂದ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ ಎಂದು ಹೇಳಿದರು.
ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಮುಗಿದು ತೀರ್ಪು ಬರುವ ಮುನ್ನ ರಾಜ್ಯ ಸರ್ಕಾರ ಕಂದಾಯ-ಅರಣ್ಯ ಭೂಮಿ ಸಮಸ್ಯೆಯ ಗೊಂದಲ ದೂರ ಮಾಡಿಕೊಳ್ಳಬೇಕು. ಜಂಟಿ ಸರ್ವೆ, ಪೋಡಿ, ಪಹಣಿಯಲ್ಲಿ ಬದಲಾವಣೆ ಮುಂತಾದ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕು. ಈ ಸಂಬಂಧ ಅರಣ್ಯ ಸಚಿವರನ್ನು ಭೇಟಿ ಮಾಡಿ ವಾಸ್ತವ ಸ್ಥಿತಿ ವಿವರಿಸಲಾಗುವುದು ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಮಾಜಿ ಸಚಿವ ಹರತಾಳು ಹಾಲಪ್ಪ, ಮಾಜಿ ಶಾಸಕ ಕೆ.ಬಿ.ಅಶೋಕ ನಾಯ್ಕ, ಕೆ.ಜಿ.ಕುಮಾರಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸಿ.ಎಚ್.ಮಾಲತೇಶ್, ಎಂ.ಬಿ.ಹರಿಕೃಷ್ಣ, ಶಿವರಾಜ್, ಪಾಲಿಕೆ ಮಾಜಿ ಸದಸ್ಯ ಎಸ್.ಜ್ಞಾನೇಶ್ವರ್ ಮುಂತಾದವರು ಸುದ್ದಿಗೋಷ್ಠಿಯಲ್ಲಿದ್ದರು.