

ಹುಬ್ಬಳ್ಳಿ : ನೈಋತ್ಯ ರೈಲ್ವೆ ವಲಯದ ನೂತನ ಪ್ರಧಾನ ವ್ಯವಸ್ಥಾಪಕರಾಗಿ ಮುಕುಲ್ ಸರನ್ ಮಾಥೂರ ಅವರು ಶನಿವಾರ ಅಧಿಕಾರ ವಹಿಸಿಕೊಂಡರು.
1988ರ ಬ್ಯಾಚಿನ ಭಾರತೀಯ ರೈಲ್ವೆ ಸಂಚಾರ ಅಧಿಕಾರಿಯಾಗಿರುವ ಅವರು, ದೆಹಲಿ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಮತ್ತು ಗುರಗಾಂವನ ಮ್ಯಾನೇಜ್ಮೆಂಟ್ ಡೆವಲಪಮೆಂಟ್ ಇನ್ಸ್ಟಿಟ್ಯೂಟ್ನಿಂದ ವ್ಯವಹಾರ ನಿರ್ವಹಣೆಯಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಪಡೆದಿದ್ದಾರೆ. ಈ ಮೊದಲು ಅವರು ರೈಲ್ವೆ ಮಂಡಳಿಯ ಹೆಚ್ಚುವರಿ ವಾಣಿಜ್ಯ ಸದಸ್ಯರಾಗಿದ್ದರು.
ಮೂರು ದಶಕಗಳ ತಮ್ಮ ವೃತ್ತಿಜೀವನದಲ್ಲಿ ಅವರು ಕೇಂದ್ರ ರೈಲ್ವೆ, ಉತ್ತರ ರೈಲ್ವೆ, ಪೂರ್ವ ಕರಾವಳಿ ರೈಲ್ವೆ, ಪಶ್ಚಿಮ ಮಧ್ಯ ರೈಲ್ವೆ ಮತ್ತು ರೈಲ್ವೆ ಮಂಡಳಿಯ ವಿವಿಧ ಸ್ಥಾನಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಅಂತಾರಾಷ್ಟ್ರೀಯ ರೈಲ್ವೆ ಒಕ್ಕೂಟದ ಏಷ್ಯಾ ಕಚೇರಿಯ ಮುಖ್ಯಸ್ಥರಾಗಿಯೂ ಸೇವೆ ಸಲ್ಲಿಸಿದ್ದಾರೆ ಮತ್ತು ಏಷ್ಯಾಪೆಸಿಫಿಕ್ ಪ್ರದೇಶದಲ್ಲಿ ರೈಲು ಅಭಿವೃದ್ಧಿಗೆ ಕೊಡುಗೆ ನೀಡಿದ್ದಾರೆ.
ಶುಕ್ರವಾರದಂದು ನಿವೃತ್ತರಾದ ಅರವಿಂದ ಶ್ರೀವಾಸ್ತವ ಅವರಿಂದ ತೆರವಾದ ಹುದ್ದೆಗೆ ಮಾಥೂರ ನೇಮಕಗೊಂಡಿದ್ದಾರೆ.