

ಗೋಕರ್ಣ: ಇಲ್ಲಿನ ಗಂಗಾವಳಿ ನದಿಗೆ ಗಂಗಾವಳಿ ಮತ್ತು ಮಂಜಗುಣಿ ಗ್ರಾಮದ ಮಧ್ಯೆ ನಿರ್ಮಿಸಲಾದ ಹೊಸ ಸೇತುವೆ ಸೋಮವಾರದಿಂದ ಸಂಚಾರಕ್ಕೆ ಮುಕ್ತವಾಗಿದೆ. ಎಲ್ಲ ಬಗೆಯ ವಾಹನಗಳ ಓಡಾಟ ಪ್ರಾರಂಭವಾಗಿ ಹೊಸ ಅವಕಾಶಗಳ ಮತ್ತು ಬದಲಾವಣೆಗಳ ನಿರೀಕ್ಷೆಗೆ ಕಾರಣವಾಗಿದೆ.
2019ರಲ್ಲಿ ಸೇತುವೆ ಕಾಮಗಾರಿ ಪ್ರಾರಂಭವಾಗುವ ತನಕವೂ ಗಂಗಾವಳಿ ಮತ್ತು ಆಚೆ ತೀರದ ಮಂಜಗುಣಿ ಗ್ರಾಮದ ನಡುವೆ ಪ್ರಯಾಣಿಕರಿಗಾಗಿ ತಾರಿ ದೋಣಿಯ ವ್ಯವಸ್ಥೆ ಇತ್ತು. ಅಂದಿನ ಪ್ರಯಾಣಿಕರ ದೋಣಿಯಲ್ಲಿ ಬೈಕ್ ಮಾತ್ರ ಒಯ್ಯುವ ಅವಕಾಶವಿತ್ತು. ಆದರೆ, ಗಂಗಾವಳಿ ಸೇತುವೆ ಸಂಚಾರಕ್ಕೆ ತೆರೆದುಕೊಳ್ಳುವ ಮೂಲಕ ಈಗ ಎಲ್ಲ ಪ್ರಕಾರದ ವಾಹನಗಳ ಸಂಚಾರಕ್ಕೆ ಅನುಕೂಲ ಒದಗಿದಂತಾಗಿದೆ.
ರಸ್ತೆ ಅಭಿವೃದ್ಧಿ ನಿಗಮದ ದೇಣಿಗೆ:
ಅಧಿಕೃತ ದಾಖಲೆಗಳ ಮೇರೆಗೆ ರಸ್ತೆ ಅಭಿವೃದ್ಧಿ ನಿಗಮ 2017ರಲ್ಲಿ ಈ ಬ್ರಿಜ್‌ಗಾಗಿ ಪ್ರೊಜೆಕ್ಟ್ ರಿಪೋರ್ಟ್‌ನ್ನು ಸರ್ಕಾರಕ್ಕೆ ಸಲ್ಲಿಸಿತು. 2018ರ ಮಾರ್ಚ್ 16ರಂದು ಹಿರೇಗುತ್ತಿ ಮೂಲದ ಹುಬ್ಬಳ್ಳಿಯ ಡಿಆರ್‌ಎನ್ ಕನ್‌ಸ್ಟ್ರಕ್ಷನ್ ಕಂಪನಿ ಸರ್ಕಾರದ ಜತೆಗೆ ಒಪ್ಪಂದಕ್ಕೆ ಸಹಿ ಮಾಡಿ ಸೇತುವೆಯ ಗುತ್ತಿಗೆ ಪಡೆಯಿತು. 2019ರಲ್ಲಿ ಸೇತುವೆ ಕಾಮಗಾರಿ ಆರಂಭವಾಯಿತು. ಆದರೆ, ನಡುವೆ ಎದುರಾದ ಕೋವಿಡ್ ವ್ಯಾಧಿಯಿಂದ 18 ತಿಂಗಳ ಕಾಲ ಕೆಲಸಗಳು ಸ್ಥಗಿತವಾದವು. ತರುವಾಯ 35ಮೀ ಅಂತರದ 9 ಸ್ಪೇನ್ ಕಟ್ಟಲ್ಪಟ್ಟು ಸೇತುವೆ ಕೆಲಸ 2023ರಲ್ಲಿ ಪೂರ್ತಿಯಾಯಿತು. ಈ ಮೂಲಕ 28.71 ಕೋಟಿ ರೂ. ವೆಚ್ಚದಲ್ಲಿ 10 ಮೀ. ಅಗಲವಿರುವ 315 ಮೀ. ಉದ್ದದ ಸೇತುವೆ ಸಿದ್ಧಗೊಂಡು ಸೇವೆಗಾಗಿ ಕಾದು ನಿಂತಿತು.
ಅಡೆತಡೆಯ ಗೋಡೆ:
ಆದರೆ ಮಂಜಗುಣಿ ಮತ್ತು ಗಂಗಾವಳಿ ಗ್ರಾಮಗಳ ಎರಡೂ ಕಡೆಯಲ್ಲಿನ ಕೂಡು ರಸ್ತೆ ನಿರ್ಮಿಸಲು ಅಗತ್ಯವಿರುವ ಸ್ಥಳದ ಹಸ್ತಾಂತರ ಹಾಗೂ ಜಾಗ ಬಿಟ್ಟು ಕೊಟ್ಟವರಿಗೆ ಪರಿಹಾರ ವಿತರಣೆ ವಿಳಂಬದಿಂದ ರಸ್ತೆ ನಿರ್ಮಾಣಕ್ಕೆ ಹಿನ್ನಡೆಯಾಯಿತು. ಸ್ಥಳೀಯ ಶಾಸಕ ದಿನಕರ ಶೆಟ್ಟಿ ಮತ್ತು ಅಂಕೋಲಾ ಶಾಸಕ ಸತೀಶ ಸೈಲ್ ಅವರ ಪ್ರಯತ್ನಗಳಿಂದಾಗಿ ಈ ಅಡೆತಡೆಗಳು ಕೊನೆಗೊಂಡು ಕಾಮಗಾರಿ ಸುಗಮವಾಗುವಂತಾಯಿತು. ಜತೆಗೆ ಕಳೆದ ಕೆಲ ವಾರದ ಹಿಂದೆ ಮಂಜಗುಣಿ ಗ್ರಾಮದ ಜನ ಸರ್ವೀಸ್ ರಸ್ತೆಗಾಗಿ ಒತ್ತಾಯಿಸಿ ಸೇತುವೆಯ ಮೇಲಿನ ಸಂಚಾರವನ್ನು ನಿರ್ಬಂಧಿಸಿ ಪ್ರತಿಭಟನೆ ನಡೆಸಿದರು. ಸರ್ವೀಸ್ ರಸ್ತೆ ಮಾಡಿಕೊಡುವುದಾಗಿ ಶಾಸಕ ಸೈಲ್ ಅವರ ಭರವಸೆ ಮತ್ತು ಗಂಗಾವಳಿ ಭಾಗದ ನಾಡುಮಾಸ್ಕೇರಿ ಗ್ರಾಪಂ ಜನರು ಇದಕ್ಕೆ ಸಂಪೂರ್ಣ ಸಹಕಾರ ನೀಡುವ ಆಶ್ವಾಸನೆಯೊಂದಿಗೆ ಪ್ರತಿಭಟನೆ ಮತ್ತು ಧರಣಿ ಕೊನೆಗೊಂಡು ಸೋಮವಾರ ಸೇತುವೆ ಸಂಚಾರಕ್ಕೆ ಅನುವಾಯಿತು.
ಎದ್ದು ನಿಂತೀತೆ ಹೊಸ ಆಶಾಸೌಧ?:
ಈ ಸೇತುವೆ ಗೋಕರ್ಣ ಮಾತ್ರವಲ್ಲದೆ ಉತ್ತರ ಕನ್ನಡದಲ್ಲಿ ಈಗಿರುವ ಸಂಚಾರ ವ್ಯವಸ್ಥೆಯ ಗಮನಾರ್ಹ ಬದಲಾವಣೆಗೆ ಕಾರಣವಾದೀತು ಎಂಬ ಮಾತು ಕೇಳಿ ಬಂದಿದೆ. ಮಹಾರಾಷ್ಟ್ರ, ಗೋವಾ ರಾಜ್ಯ, ಹುಬ್ಬಳಿ ಸೇರಿ ಉತ್ತರ ಕರ್ನಾಟಕದಿಂದ ಗೋಕರ್ಣಕ್ಕೆ ಬಂದು ಹೋಗುವ ಲಕ್ಷಾಂತರ ಯಾತ್ರಿಕರು ಮತ್ತು ಪ್ರವಾಸಿಗರು ಅಂಕೋಲಾ ಮೂಲಕ ರಾಷ್ಟ್ರೀಯ ಹೆದ್ದಾರಿ 66ರನ್ನು ಬಳಸದೆ ಈ ಹೊಸ ಮಾರ್ಗದಿಂದ ನೇರವಾಗಿ ಗೋಕರ್ಣ ಸೇರಬಹುದಾಗಿದೆ. ಹೀಗಾಗಿ ಗೋಕರ್ಣ ಮತ್ತು ಸುತ್ತಲಿನ ಗ್ರಾಮಾಂತರಗಳಲ್ಲಿ ಪ್ರವಾಸೋದ್ಯಮದಲ್ಲಿ ತೊಡಗಿರುವವರಲ್ಲಿ ಹೊಸ ಆಶಾ ಸೌಧವನ್ನು ಕಟ್ಟಿ ನಿಲ್ಲಿಸುತ್ತಿದೆ.
ಸೋಮವಾರದಿಂದ ಗಂಗಾವಳಿ ಸೇತುವೆ ಮೇಲೆ ಎಲ್ಲ ಬಗೆಯ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿರುವುದು ಸಂತಸದ ವಿಷಯವಾಗಿದೆ. ಸೇತುವೆ ಕಾಮಗಾರಿಯನ್ನು ತ್ವರಿತಗೊಳಿಸುವ ಬಗ್ಗೆ ಮತ್ತು ಜಾಗ ಬಿಟ್ಟುಕೊಟ್ಟವರಿಗೆ ಅಗತ್ಯ ಪರಿಹಾರ ಒದಗಿಸುವ ಬಗ್ಗೆ ವಿಧಾನಸಭೆ ಅಧಿವೇಶನದಲ್ಲಿ ಗಮನ ಸೆಳೆದದ್ದು ಫಲಕಾರಿಯಾಗಿದೆ. ಈ ಪ್ರಯತ್ನದಲ್ಲಿ ನನ್ನ ಜತೆ ನಿಂತ ಕ್ಷೇತ್ರದ ಜನ ಮತ್ತು ಸರ್ಕಾರ ಸೇರಿ ಸಹಕಾರ ನೀಡಿದ ಎಲ್ಲರೂ ಅಭಿನಂದನಾರ್ಹರು. ದಿನಕರ ಶೆಟ್ಟಿ, ಶಾಸಕ ಕಾಮಗಾರಿ ಹೆಚ್ಚೂ ಕಡಿಮೆ ಪೂರ್ಣಗೊಂಡಿರುವ ಕಾರಣ ಸೋಮವಾರದಿಂದ ವಾಹನ ಸಂಚಾರಕ್ಕೆ ಅನುವು ಮಾಡಲಾಗಿದೆ. ಚಿಕ್ಕ ಪುಟ್ಟ ಕೆಲಸಗಳು ಬಾಕಿಯಿದ್ದು, ಆದಷ್ಟು ಬೇಗ ಮುಗಿಯಲಿವೆ. ಜತೆಗೆ ಮಂಜಗುಣಿ ಗ್ರಾಮದಲ್ಲಿನ ಸರ್ವೀಸ್ ರಸ್ತೆ ಮತ್ತಿತರ ಕಾಮಗಾರಿಗಳಿಗೆ ಹೊಸ ಅನುದಾನದ ಅಗತ್ಯವಿದೆ. ಇದನ್ನು ಸರ್ಕಾರದ ಗಮನಕ್ಕೆ ತರಲಾಗಿದ್ದು ಆದಷ್ಟು ಬೇಗ ಮುಂದಿನ ಅವಶ್ಯಕ ಕಾಮಗಾರಿಗೆ ನಡೆಯುವ ವಿಶ್ವಾಸವಿದೆ.- ಸುಧೀರ ಎಂ. ಜೂ.ಇಂಜಿನಿಯರ್ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ.