

ಕಾರವಾರ: ಕರ್ನಾಟಕ ನೌಕಾ ವಲಯದ ನೂತನ ಮುಖ್ಯಸ್ಥರಾಗಿ ರಿಯರ್ ಅಡ್ಮಿರಲ್ ವಿಕ್ರಂ ಮೆನನ್ ಗುರುವಾರ ಅಽಕಾರ ವಹಿಸಿಕೊಂಡರು. ಇದುವರೆಗೆ ಮುಖ್ಯಸ್ಥರಾಗಿದ್ದ ರಿಯರ್ ಅಡ್ಮಿರಲ್ ಕೆ.ಎಂ.ರಾಮಕೃಷ್ಣ ಅವರು ಬೇರೆಡೆ ವರ್ಗಾವಣೆಯಾಗಿದ್ದಾರೆ.
ಮೆನನ್ ಅವರು ಖಡಕ್‌ವಾಸ್ಲಾದ ಪ್ರತಿಷ್ಠಿತ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಮತ್ತು ನೌಕಾ ಯುದ್ಧ ಕಾಲೇಜ್‌ನ ಹಳೆಯ ವಿದ್ಯಾರ್ಥಿಯಾಗಿರುವ ಅವರು 1990 ರಲ್ಲಿ ಭಾರತೀಯ ನೌಕಾಸೇನೆ ಸೇರಿದ್ದರು. ಮೂಲತಃ ಯುದ್ಧ ವಿಮಾನದ ನುರಿತ ಪೈಲಟ್ ಆಗಿರುವ ಅವರು ಸೀ ಹ್ಯಾರಿಯರ್ ವಿಮಾನದಲ್ಲಿ 2 ಸಾವಿರ ತಾಸಿಗೂ ಹೆಚ್ಚು ಹಾರಾಟ ಮಾಡಿದ ಅನುಭವ ಹೊಂದಿದ್ದಾರೆ. ಫ್ಲಾಯಿಂಗ್ ಇನ್ಸ್ಪೆಕ್ಟರ್ ಆಗಿಯೂ ಅವರು ಕಾರ್ಯ ನಿರ್ವಹಿಸಿದ್ದರು. ಅವರು ಗೋವಾ ಹಂಸಾ ನೌಕಾ ವಿಮಾನ ನೆಲೆಯ ಐಎನ್‌ಎಎಸ್-552 ಏರ್ ಸ್ಕ್ವಾಡ್ರನ್ ಮುಖ್ಯಸ್ಥರಾಗಿದ್ದರು. ಯುದ್ಧ ವಿಮಾನ ವಾಹಕ ನೌಕೆ ಐಎನ್‌ಎಸ್ ವಿರಾಟ್‌ನಲ್ಲಿ ಅವರು ಪೈಲಟ್ ಆಗಿ ಕಾರ್ಯ ನಿರ್ವಹಿಸಿದ್ದಾರೆ.
ಮಾತ್ರವಲ್ಲದೇ ಮೆನನ್ ಅವರು ನವದೆಹಲಿಯಲ್ಲಿರುವ ನೌಕಾ ಪ್ರಧಾನ ಕಚೇರಿಯಲ್ಲಿ ಸಹಾಯಕ ನೌಕಾ ಮುಖ್ಯಸ್ಥ , ಮುಖ್ಯ ಸಿಬ್ಬಂದಿ ಅಽಕಾರಿ (ವಿಮಾನಯಾನ)ಯಾಗಿ, ರಕ್ಷಣಾ ಸಚಿವಾಲಯದ ಮಿಲಿಟರಿ ವ್ಯವಹಾರಗಳ ಇಲಾಖೆಯಲ್ಲಿ ಜಂಟಿ ಕಾರ್ಯದರ್ಶಿ (ನೌಕಾ ಮತ್ತು ರಕ್ಷಣಾ ಸಿಬ್ಬಂದಿ) ಕಾರ್ಯ ನಿರ್ವಹಿಸಿದ್ದರು.
ಅಲ್ಲದೇ ಅವರು ಐಎನ್‌ಎಸ್ ತಿಲ್ಲಾಂಚಾಂಗ್, ಐಎನ್‌ಎಸ್ ಶಾರದಾ, ಐಎನ್‌ಎಸ್ ಶಕ್ತಿ ನೌಕೆಗಳ ಕ್ಯಾಪ್ಟನ್ ಆಗಿ, ಐಎನ್‌ಎಸ್ ರಣವಿಜಯ್ ನೌಕೆಯ ಕಾರ್ಯನಿರ್ವಾಹಕ ಅಽಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು. ಸದ್ಯ ಅವರು ಕಾರವಾರ ಕೇಂದ್ರವಾಗಿರುವ ಕರ್ನಾಟಕ ನೌಕಾ ವಲಯದ ಎಲ್ಲ ನೌಕಾ ಘಟಕಗಳು, ಮತ್ತು ಸಂಸ್ಥೆಗಳ ಕಾರ್ಯಾಚರಣೆ, ಆಡಳಿತ, ಭದ್ರತೆ ಹಾಗೂ ಅಭಿವೃದ್ಧಿ ಕಾರ್ಯತಂತ್ರಗಳನ್ನು ಅವರು ನಿರ್ವಹಿಸಬೇಕಿದೆ.