ಡ್ರಗ್ಸ್ ಕಾರ್ಯಾಚರಣೆಗೆ ಸ್ನೈಫರ್ ಎಂಟ್ರಿ, ಉಡುಪಿ ಶ್ವಾನಪಡೆಗೆ ಮತ್ತೊಂದು ಡಾಬರ್‌ಮನ್

snifer
Published on

ಉಡುಪಿ: ಅಪರಾಧ, ಸ್ಫೋಟಕ ಪತ್ತೆಯಲ್ಲಿ ರಾಜ್ಯಮಟ್ಟದಲ್ಲಿ ಹೆಸರು ಮಾಡಿರುವ ಉಡುಪಿ ಪೊಲೀಸ್ ಇಲಾಖೆಯ ಶ್ವಾನದಳ ಇದೀಗ ಡ್ರಗ್ಸ್ ವಿರುದ್ಧದ ಕಾರ್ಯಾಚರಣೆಗೆ ಬಳಸಲು ಶ್ವಾನವೊಂದಕ್ಕೆ ವಿಶೇಷ ತರಬೇತಿ ಕೊಡಿಸಲು ಮುಂದಾಗಿದೆ.

ಜಿಲ್ಲೆಯಲ್ಲಿ ಡ್ರಗ್ಸ್ ಮಾರಾಟ ಮತ್ತು ಪೂರೈಕೆ ದಂಧೆಯನ್ನು ಸಂಪೂರ್ಣ ಮಟ್ಟ ಹಾಕಲು ಪೊಲೀಸ್ ಇಲಾಖೆ ಪಣತೊಟ್ಟಿದೆ. ಕಳೆದ ಎರಡು ತಿಂಗಳಿನಲ್ಲಿ ಮಹತ್ವದ ಪ್ರಕರಣಗಳನ್ನು ಬೇಧಿಸಲಾಗಿದೆ. ಈ ಕಾರ್ಯಾಚರಣೆಯಲ್ಲಿ ಸ್ಫೋಟಕ ಪತ್ತೆ ವಿಭಾಗದ ಶ್ವಾನಗಳಾದ ಐಕಾನ್ ಮತ್ತು ಕ್ಯಾಪ್ಟನ್ (ಲ್ಯಾಬ್ರಡರ್ ಮತ್ತು ಜರ್ಮನ್ ಶೆಫರ್ಡ್) ಭಾಗವಹಿಸಿವೆ.

ಡ್ರಗ್ಸ್ ಪ್ರಕರಣ ಪತ್ತೆ ಕಾರ್ಯಾಚರಣೆ ಇನ್ನಷ್ಟು ಚುರುಕುಗೊಳಿಸಲು ಯಾವುದಾದರೂ ಒಂದು ಶ್ವಾನಕ್ಕೆ ತರಬೇತಿ ನೀಡುವ ಚಿಂತನೆ ಇಲಾಖೆಯದ್ದು. ಅದರಂತೆ ಶ್ವಾನದಳಕ್ಕೆ ಹೊಸದಾಗಿ ಸೇರ್ಪಡೆಗೊಂಡಿರುವ ಎರಡು ತಿಂಗಳ ಮರಿ, ಕಂದು ಬಣ್ಣದ ಡಾಬರ್‌ಮನ್ ತಳಿಯ ‘ಸ್ನೈಫರ್’ ಹೆಸರಿನ ಶ್ವಾನಕ್ಕೆ ಅಪರಾಧ ಪ್ರಕರಣ ಪತ್ತೆ ತರಬೇತಿ ಜತೆಗೆ ಜತೆಗೆ ಡ್ರಗ್ಸ್ ಪ್ರಕರಣಗಳ ಪತ್ತೆಗೂ ಸಹಕಾರಿಯಾಗುವಂತೆ ತರಬೇತಿ ನೀಡಲು ಹಿರಿಯ ಅಧಿಕಾರಿಗಳಲ್ಲಿ ಕೋರಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ತರಬೇತಿ: ಅಪರಾಧ ಪತ್ತೆ ವಿಭಾಗದಲ್ಲಿ ಬ್ರೌನಿ ಹೆಸರಿನ ಡಾಬರ್‌ಮನ್ ತಳಿಯ ಶ್ವಾನ ಕಾರ್ಯನಿರ್ವಹಿಸುತ್ತಿದೆ. ಈಗ ಹೊಸದಾಗಿ ಎರಡು ತಿಂಗಳ ಮರಿ ಸ್ನೈಫರ್ ಸೇರ್ಪಡೆಯಾಗಿದೆ. ಜಿಲ್ಲಾ ಪೊಲೀಸ್ ಅಧೀಕ್ಷಕರು ತಳಿಯ ವಿಶೇಷತೆ, ಕಾರ್ಯನಿರ್ವಹಣೆ ಚುರುಕುತನದ ಬಗ್ಗೆ ತಿಳಿದು, ಮುತುವರ್ಜಿ ವಹಿಸಿ ಇದೇ ತಳಿಯನ್ನು ವಿಶೇಷ ತರಬೇತಿಗೆ ಆಯ್ಕೆ ಮಾಡಿದ್ದಾರೆ. ಬೆಂಗಳೂರು ಆಡುಗೋಡಿಯಲ್ಲಿರುವ ಪೊಲೀಸ್ ಶ್ವಾನ ತರಬೇತಿ ಘಟಕಕ್ಕೆ ಶೀಘ್ರ ಸ್ನೈಫರ್ ತೆರಳಲಿದೆ. ಇದರೊಂದಿಗೆ ಸಶಸ್ತ್ರ ಮೀಸಲು ಪಡೆಯ ಇಬ್ಬರು ಸಿಬ್ಬಂದಿ ಹ್ಯಾಂಡ್ಲರ್‌ಗಳಾಗಿ ತೆರಳುತ್ತಾರೆ. ಶ್ವಾನಗಳಿಗೆ ಅಲ್ಲಿ ಶಿಸ್ತು, ವಿಧೇಯತೆ, ಇಲಾಖೆಗೆ ಬೇಕಾದ ಪೂರಕ ತರಬೇತಿ ಕೊಡಲಾಗುತ್ತದೆ. ಅಪರಾಧ ಸೇರಿದಂತೆ ವಿವಿಧ ವಿಭಾಗ ತಜ್ಞರಿಂದ ತರಬೇತಿ ಪಡೆದು ಬಳಿಕ ಶ್ವಾನದಳದಲ್ಲಿ ಕರ್ತವ್ಯ ನಿರ್ವಹಿಸಲಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಅಪರಾಧ ಪತ್ತೆ ಪ್ರಕರಣಗಳಿಗಾಗಿ ಡಾಬರ್‌ಮನ್ ತಳಿಯ ಮರಿ ಶ್ವಾನ ಸ್ನೈಫರ್ ಹೊಸದಾಗಿ ಸೇರ್ಪಡೆಗೊಂಡಿದೆ. ಇತರೆ ಅಪರಾಧ ಪ್ರಕರಣ ಪತ್ತೆ ಜತೆಗೆ ಡ್ರಗ್ಸ್ ವಿರುದ್ಧ ಇಲಾಖೆ ಕಾರ್ಯಾಚರಣೆಗೆ ಸಹಕಾರಿಯಾಗುವಂತೆ ಸ್ನೈಫರ್‌ಗೆ ವಿಶೇಷ ತರಬೇತಿ ಕೊಡಿಸಲು ಇನ್ನೆರಡು ತಿಂಗಳಲ್ಲಿ ಬೆಂಗಳೂರಿಗೆ ಕಳುಹಿಸಲಾಗುವುದು. - ಕುಮಾರಚಂದ್ರ, ಎಎಸ್‌ಪಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net