

ದಾವಣಗೆರೆ: ಜಗತ್ತಿನಲ್ಲಿ ಹೊಸ ರೋಗಗಳು ಕಾಣಿಸಿಕೊಳ್ಳುತ್ತಿದ್ದು, ಅವುಗಳ ನಿಯಂತ್ರಿಸಲು ವೈದ್ಯ ವಿದ್ಯಾರ್ಥಿಗಳು ಸಜ್ಜಾಗಬೇಕು ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಉಸ್ತುವಾರಿ ನಿರ್ದೇಶಕ ಡಾ. ಶ್ರೀಕಾಂತ್ ತ್ರಿಪಾಠಿ ಸಲಹೆ ನೀಡಿದರು.
ಇಲ್ಲಿನ ಎಸ್.ಎಸ್. ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದಲ್ಲಿ ಶನಿವಾರ ಆಯೋಜಿಸಿದ್ದ 9ನೆ ವರ್ಷದ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
ಚೀನಾದಲ್ಲಿ ಕರೊನಾ ವೈರಸ್ ಕಾಣಿಸಿಕೊಂಡಿದೆ. ಇದು ಭಾರತಕ್ಕೆ ಲಗ್ಗೆ ಇಟ್ಟರೆ ತಟೆಗಟ್ಟುವಲ್ಲಿ ಎಚ್ಚರ ವಹಿಸಬೇಕಿದೆ. ಭವಿಷ್ಯದ ದಿನಗಳಲ್ಲಿ ಇನ್ನಷ್ಟು ಮಾರಕ ರೋಗಗಳು ಬರಬಹುದು. ಜಾಗೃತಿ ವಹಿಸಬೇಕಿದೆ ಎಂದರು.
ಸಮಾರಂಭ ಉದ್ಘಾಟಿಸಿದ ಇಸ್ರೋ ಮಾಜಿ ಅಧ್ಯಕ್ಷ ಎ.ಎಸ್. ಕಿರಣ್‌ಕುಮಾರ್ ಮಾತನಾಡಿ, ಭಾರತ ಆರ್ಥಿಕವಾಗಿ ನಂಬರ್ 1 ಸ್ಥಾನ ಪಡೆಯುವ ಅವಕಾಶಗಳಿವೆ. ವೈದ್ಯ ವಿದ್ಯಾರ್ಥಿಗಳು ವಿಭಿನ್ನವಾಗಿ ಕೆಲಸ ಮಾಡಿ ಅತ್ಯಾಧುನಿಕ ತಂತ್ರಜ್ಞಾನವನ್ನು ಸಮಾಜಕ್ಕೆ ತಲುಪಿಸಬೇಕು ಎಂದು ತಿಳಿಸಿದರು.
ಇಂದಿನ ಸ್ಮಾರ್ಟ್‌ಫೋನ್ ವೈದ್ಯರ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಹೀಗಾಗಿ ಯಾವುದೇ ಉಪಕರಣಗಳಿಂದ ಒದಗಿಸಲು ಸಾಧ್ಯವಾಗದ ಮಾನವೀಯತೆಯನ್ನು ವೈದ್ಯರು ನೀಡುವುದು ಅಗತ್ಯವಿದೆ ಎಂದೂ ಪ್ರತಿಪಾದಿಸಿದರು.