ಟ್ರಂಪ್​ ಜತೆ ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ಔತಣಕೂಟಕ್ಕೆ ಬಿಎಸ್​ವೈಗೆ ಆಹ್ವಾನ; ಬೆಳಗ್ಗೆ ದೆಹಲಿಗೆ ತೆರಳಲಿರುವ ಯಡಿಯೂರಪ್ಪ

TRUMP BSY
Published on

ಬೆಂಗಳೂರು: ನಾಳೆ ರಾತ್ರಿ ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಆಯೋಜನೆ ಗೊಂಡಿರುವ ಅಮೆರಿಕ ಅಧ್ಯಕ್ಷ ಟ್ರಂಪ್​ ಅವರೊಂದಿಗಿನ ಔತಣಕೂಟದಲ್ಲಿ ಭಾಗವಹಿಸಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತೆರಳಲಿದ್ದಾರೆ.

ಬೆಳಗ್ಗೆ 11.30ಕ್ಕೆ ಬೆಂಗಳೂರಿನಿಂದ ದೆಹಲಿಗೆ ಸಿಎಂ ಪ್ರಯಾಣ ಬೆಳಸಲಿದ್ದಾರೆ. ನಾಳೆ ರಾತ್ರಿ 8 ಗಂಟೆಗೆ ನಡೆಯಲಿರುವ ಔತಣಕೂಟದಲ್ಲಿ ಭಾಗಿಯಾಗುವಂತೆ ಆಹ್ವಾನಿಸಲಾಗಿತ್ತು.

ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಅವರಿಗೆ ರಾಷ್ಟ್ರಪತಿ ಭವನದಿಂದ ಆಹ್ವಾನ ಬಂದಿತ್ತು. ನಾಳೆ ರಾತ್ರಿ ಔತಣಕೂಟದಲ್ಲಿ ಭಾಗವಹಿಸಿದ ಬಳಿಕ ದೆಹಲಿಯಲ್ಲೇ ಸಿಎಂ ಯಡಿಯೂರಪ್ಪ ವಾಸ್ತವ್ಯ ಹೂಡಲಿದ್ದಾರೆ. ಫೆ. 26 ರಂದು ಬೆಂಗಳೂರಿಗೆ ಸಿಎಂ ವಾಪಸಾಗಲಿದ್ದಾರೆ.

ಈ ಮಧ್ಯೆ ನಾಳೆ ನಡೆಯಲಿರುವ ಔತಣಕೂಟದಲ್ಲಿ ಭಾಗವಹಿಸದಿರಲು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿರ್ಧರಿಸಿದ್ದಾರೆ. ಕಾಂಗ್ರೆಸ್​ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಟ್ರಂಪ್​ ಕಾರ್ಯಕ್ರಮಕ್ಕೆ ಆಹ್ವಾನಿಸದಿರುವ ಬಗ್ಗೆ ಅವರಿಗೆ ಬೇಸರವಾಗಿದೆ. ಈ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಸಿಂಗ್​ ಔತಣಕೂಟಕ್ಕೆ ಗೈರಾಗಲಿದ್ದಾರೆ.

ರಾಜ್ಯಸಭಾ ಪ್ರತಿಪಕ್ಷ ನಾಯಕ ಗುಲಾಮ್​ ನಬಿ ಅಜಾದ್​ ಅವರು ಕೂಡ ರಾಷ್ಟ್ರಪತಿ ಭವನದಲ್ಲಿ ನಾಳೆ ನಡೆಯಲಿರುವ ಔತಣಕೂಟದಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ. ಔತಣಕೂಟಕ್ಕೆ ಆಹ್ವಾನ ಇಲ್ಲದಿರುವ ಬಗ್ಗೆ ಆಪ್​ ಪಕ್ಷವೂ ಅಸಮಾಧಾನ ವ್ಯಕ್ತಪಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net