ಈಜೀಪುರ ಮೇಲ್ಸೇತುವೆ ಕಾಮಗಾರಿ ಪೂರ್ಣಕ್ಕೆ ಹೊಸ ಡೆಡ್‌ಲೈನ್

maheshwara Rao
Published on

ಬೆಂಗಳೂರು: ಈಜೀಪುರ ಮೇಲ್ಸೇತುವೆ ಕಾಮಗಾರಿಯನ್ನು 2026ರ ಮಾರ್ಚ್‌ದೊಳಗೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಎಂ.ಮಹೇಶ್ವರ್ ರಾವ್ ಹೇಳಿದ್ದಾರೆ.

ಬನ್ನೇರಘಟ್ಟ ರಸ್ತೆ ಸಕಲವಾರ ಗ್ರಾಮದ ಸೆಗ್ಮೆಂಟ್ ಕಾಸ್ಟಿಂಗ್ ಯಾರ್ಡ್‌ಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಮಾತನಾಡಿದರು. ಈಜೀಪುರ ಮುಖ್ಯ ರಸ್ತೆಯಲ್ಲಿ 2.38 ಕಿ.ಮೀ. ಉದ್ದದ ಮೇಲ್ಸೇತುವೆ ಕಾಮಗಾರಿಯನ್ನು ತ್ವರಿತಗತಿಯಲ್ಲಿ ನಡೆಸಲಾಗುತ್ತಿದೆ. ಮೇಲ್ಸೇತುವೆಗೆ ಒಟ್ಟು 762 ಸೆಗ್ಮೆಂಟ್ ಕಾಸ್ಟಿಂಗ್ ಬರಲಿದೆ. 437 ಸೆಗ್ಮೆಂಟ್ ಕಾಸ್ಟಿಂಗ್ ಈಗಾಗಲೇ ಅಳವಡಿಸಲಾಗಿದೆ. ಇನ್ನುಳಿದ ಅಳವಡಿಸಬೇಕಿದೆ. ಈ ಸಂಬಂಧ ಪ್ರತಿ ತಿಂಗಳು 45 ಸೆಗ್ಮೆಂಟ್ ಸಿದ್ಧಪಡಿಸಿ ಅಳವಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಕಾಮಗಾರಿಗೆ ವೇಗ ನೀಡಿ ಕಾಸ್ಟಿಂಗ್ ಅಳವಡಿಸುವ ಪ್ರಕ್ರಿಯೆ ವರ್ಷಾಂತ್ಯದೊಳಗೆ ಪೂರ್ಣಗೊಳಿಸಬೇಕು. ಇನ್ನುಳಿದ ಕಾಮಗಾರಿಯನ್ನು 2026ರ ಒಳಗಾಗಿ ಪೂರ್ಣಗೊಳಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಗುತ್ತಿಗೆದಾರರು ಮತ್ತು ಅಧಿಕಾರಿಗಳಿಗೆ, ಮುಖ್ಯ ಆಯುಕ್ತರು ಸೂಚಿಸಿದರು. ಈಜೀಪುರ ಮೇಲ್ಸೇತುವೆ ಕಾಮಗಾರಿ ನಡೆಯುವ ಸ್ಥಳದಲ್ಲಿ ಸೇಂಟ್ ಜಾನ್ಸ್ ಆಸ್ಪತ್ರೆ ಹಾಗೂ ಹಾಸ್ಟೆಲ್ ಬಳಿ ಭೂಸ್ವಾಧೀನಪಡಿಸಿಕೊಳ್ಳಬೇಕಿದೆ. ಈ ಬಗ್ಗೆ ಸಂಬಧಪಟ್ಟವರೊಂದಿಗೆ ಸಭೆ ನಡೆಸಿ ಸಮಸ್ಯೆ ಬಗೆಹರಿಸಲಾಗಿದೆ. ಶೀಘ್ರ ರ‌್ಯಾಂಪ್ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದರು. ಕಾರ್ಯಪಾಲಕ ಅಭಿಯಂತ ಚಂದ್ರಶೇಖರ್ ಸೇರಿ ಮತ್ತಿತರರಿದ್ದರು.

ಡಾಂಬರೀಕರಣ ಪೂರ್ಣ: ಮುಖ್ಯ ಅಭಿಯಂತ ಡಾ.ರಾಘವೇಂದ್ರ ಪ್ರಸಾದ್ ಮಾತನಾಡಿ, ಈಜೀಪುರ ಮೇಲ್ಸೇತುವೆ ಕಾಮಗಾರಿಗೆ ಸಂಬಂಧಿಸಿದಂತೆ ಎಲ್ಲ ರೀತಿಯಲ್ಲಿ ರೂಪುರೇಷೆ ಸಿದ್ಧಪಡಿಸಿ ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಲು ಯೋಜನೆ ರೂಪಿಸಲಾಗಿದೆ. ಸಂಚಾರ ದಟ್ಟಣೆ ನಡುವೆಯೂ ಕೆಲಸ ಮಾಡಲಾಗುತ್ತಿದೆ. ಪಾದಚಾರಿ ಮಾರ್ಗದ ಕಾಮಗಾರಿ ಬಹುತೇಕ ಪೂರ್ಣಗೊಳಿಸಲಾಗಿದೆ. ಮೇಲ್ಸೇತುವೆ ಕಾಮಗಾರಿ ಆಗಿರುವ ಕೆಳಭಾಗದಲ್ಲಿ ಡಾಂಬರೀಕರಣ ಮಾಡಲಾಗಿದೆ. ಶೋಲ್ಡರ್ ಡ್ರೈನ್, ಮೀಡಿಯನ್ ಕೆಲಸ ಪ್ರಗತಿಯಲ್ಲಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net