ಅರಿವಿಲ್ಲದೆ ಅಪರಾಧವಾಯಿತೆಂದರೆ ಕ್ಷಮೆ ಇರಲ್ಲ: ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಂ.ಭೃಂಗೇಶ್ ಹೇಳಿಕೆ

New Criminal Law Awareness Programme Mandya
Published on

ಮಂಡ್ಯ: ಅರಿವಿಲ್ಲದೆ ಅಪರಾಧವಾಯಿತು ಎಂದರೆ ಕಾನೂನಿನಲ್ಲಿ ಕ್ಷಮೆ ಇಲ್ಲ. ಆದ್ದರಿಂದ ಪ್ರತಿಯೊಬ್ಬರಿಗೂ ಕಾನೂನಿನ ಅರಿವು ಅಗತ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಂ.ಭೃಂಗೇಶ್ ಸಲಹೆ ನೀಡಿದರು.

ನಗರದ ಮಹಿಳಾ ಸರ್ಕಾರಿ ಕಾಲೇಜಿ(ಸ್ವಾಯತ್ತ)ನ ಎವಿಆರ್ ಕೊಠಡಿಯಲ್ಲಿ ಕೇಂದ್ರ ಸಂವಹನ ಇಲಾಖೆ ಮೈಸೂರು, ವಾರ್ತಾ ಮತ್ತು ಪ್ರಸಾರ ಸಚಿವಾಲಯ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ನೆಹರು ಯುವ ಕೇಂದ್ರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಮಹಿಳಾ ಸರ್ಕಾರಿ ಕಾಲೇಜು(ಸ್ವಾಯತ್ತ), ರಾಜ್ಯಶಾಸ್ತ್ರ ಮತ್ತು ಅಪರಾಧ ಶಾಸ್ತ್ರ ವಿಭಾಗ, ಸ್ನಾತಕೋತ್ತರ ವಿಭಾಗ, ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು(ಕಲ್ಲುಕಟ್ಟಡ) ಸಹಯೋಗದಲ್ಲಿ ಆಯೋಜಿಸಿದ್ದ ನೂತನ ಅಪರಾಧ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇಂದಿನ ಯುವ ಸಮೂಹಕ್ಕೆ ಕಾನೂನುಗಳ ಬಗ್ಗೆ ಕನಿಷ್ಟ ಅರಿವು ಇರಬೇಕು. ಇಲ್ಲವಾದರೆ ತಪ್ಪಿತಸ್ಥರಾಗುವ ಸಾಧ್ಯತೆಯಿದೆ. ನಂತರ ಪೊಲೀಸ್ ಠಾಣೆ ಮತ್ತು ನ್ಯಾಯಾಲಯಕ್ಕೆ ಅಲೆದಾಟ ಮಾಡಬೇಕಾಗುತ್ತದೆ. ಕಾನೂನಿನ ಅರಿವು ಇದ್ದರೆ ಸಾಕಷ್ಟು ಅನಾಹುತಗಳನ್ನು ತಪ್ಪಿಸಬಹುದು. ಜೀವನದಲ್ಲಿ ಸಂತೋಷವಾಗಿರಬಹುದು ಎಂದರು.

ಯುವಕರು ವಾಹನ ಚಲಾಯಿಸುವಾಗ ಸಿಗ್ನಲ್ಜಂಪ್ ಮಾಡುವುದು, ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸುವುದು, ವೀಲ್ಹಿಂಗ್ ಮಾಡುವುದು. ವಾಹನದ ಇನ್ಶುರೆನ್ಸ್ ಮಾಡಿಸದಿರುವುದು ಸಾಮಾನ್ಯವಾಗಿ ಕಂಡು ಬರುತ್ತದೆ. ಆದ್ದರಿಂದ ಚಾಲಕರು ಕಾನೂನಿನ ಅರಿವು ಹೊಂದಿರುವುದು ಅತ್ಯಾವಶ್ಯಕ. ಹೆಣ್ಣು ಮಕ್ಕಳು ತಮ್ಮ ಮೊಬೈಲ್‌ಗೆ ಅಪರಿಚಿತ ಕರೆ ಬಂದರೆ ಸ್ವೀಕರಿಸಬೇಡಿ. ಏಕೆಂದರೆ ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಮ್‌ಗಳು ಹೆಚ್ಚಾಗಿ ಕಂಡುಬರುತ್ತಿದೆ. ಸ್ಮಾರ್ಟ್‌ಫೋನ್‌ಗಳನ್ನು ಬಹಳ ಎಚ್ಚರಿಕೆಯಿಂದ ಉಪಯೋಗಿಸಬೇಕು ಎಂದು ಸಲಹೆ ನೀಡಿದರು.

ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಆನಂದ ಮಾತನಾಡಿ, ನಮ್ಮ ಹಿತರಕ್ಷಣೆ ಕಾಪಾಡಲು ಹಾಗೂ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆಯಿಂದ ಬದುಕಲು ಕಾನೂನು ಬಹುಮುಖ್ಯ. ಹೊಸದಾಗಿ ಅಪರಾಧಗಳು ಸಂಭವಿಸುತ್ತಿರುವುದರಿಂದ ಕಾನೂನನ್ನು ನವೀಕರಣ ಮಾಡಲಾಗಿದೆ. ಹೊಸದಾಗಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ, ಭಾರತೀಯ ನ್ಯಾಯ ಸಂಹಿತೆ , ಸಾಕ್ಷೃ ಅಧಿನಿಯಮ ಎಂಬ 3 ಕಾನೂನುಗಳನ್ನು ಸೇರ್ಪಡೆ ಮಾಡಲಾಗಿದೆ. ಜತೆಗೆ ಆಧುನಿಕ ತಂತ್ರಜ್ಞಾನಕ್ಕೆ ಹೆಚ್ಚಿನ ಆಧ್ಯತೆ ನೀಡಲಾಗಿದೆ. ಎಲ್ಲ ಕಾನೂನುಗಳ ಪ್ರಮುಖ ಉದ್ದೇಶವೆಂದರೆ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವುದಾಗಿದೆ. ನಾವು ಕಾನೂನಿಗೆ ವಿಧೇಯಕರಾಗಿ ಗೌರವಿಸಿದರೆ ಕಾನೂನು ನಮ್ಮನ್ನು ರಕ್ಷಣೆ ಮಾಡುತ್ತದೆ ಎಂದರು.

ಕೇಂದ್ರ ಸಂವಹನ ಇಲಾಖೆಯ ಕ್ಷೇತ್ರ ಪ್ರಚಾರಾಧಿಕಾರಿ ಎಸ್.ಟಿ.ಶ್ರುತಿ ಪ್ರಾಸ್ತಾವಿಕವಾಗಿ ಮಾತನಾಡಿ, ಮಂಡ್ಯ, ಮೈಸೂರು, ರಾಮನಗರ, ಚಿಕ್ಕಬಳ್ಳಾಪುರ, ಚಾಮರಾಜನಗರ ಒಳಗೊಂಡಂತೆ ಮೈಸೂರಿನಲ್ಲಿ ಇರುವ ಕ್ಷೇತ್ರ ಸಂವಹನ ಇಲಾಖೆ ಕೇಂದ್ರ ಕಚೇರಿಯಾಗಿ ಕಾರ್ಯವನ್ನು ನಿರ್ವಹಿಸುತ್ತಿದೆ. ಕೇಂದ್ರ ಸರ್ಕಾರದ ಹಲವು ಯೋಜನೆ ಹಾಗೂ ಜನಪರ ಕಾರ್ಯಕ್ರಮಗಳನ್ನು ಸಾರ್ವಜನಿಕರಿಗೆ ತಲುಪಿಸುವ ಕೆಲಸವನ್ನು ಇಲಾಖೆ ಮಾಡುತ್ತಿದೆ ಎಂದರು.

ಕಾಲೇಜಿನ ಪ್ರಾಂಶುಪಾಲೆ ಡಾ.ಹೇಮಲತಾ, ಜಿಲ್ಲಾ ವಾರ್ತಾಧಿಕಾರಿ ಎಸ್.ಎಚ್.ನಿರ್ಮಲಾ, ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು(ಕಲ್ಲು ಕಟ್ಟಡ) ಪ್ರಾಂಶುಪಾಲ ತಮ್ಮೇಗೌಡ, ಜಿಲ್ಲಾ ನೆಹರು ಯುವ ಕೇಂದ್ರದ ಅಧಿಕಾರಿ ಕೆ.ರಾಜೇಶ್ ಕಾರಂತ್, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಭರತ್‌ರಾಜ್, ಅಪರಾಧಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ರವಿಕಾಂತ ಲಮಾಣಿ ಇತರರಿದ್ದರು.

ಇದೇ ವೇಳೆ ನೂತನ ಅಪರಾಧ ಕಾನೂನು ವಿಷಯದ ಬಗ್ಗೆ ಕಾಲೇಜಿನ ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದ್ದ ಪ್ರಬಂಧ, ಚರ್ಚಾ ಹಾಗೂ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net