ಹುಬ್ಬಳ್ಳಿ: ಇಲ್ಲಿಯ ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯವು ಬದಲಾಗುತ್ತಿರುವ ಉದ್ಯಮಗಳಿಗೆ ತಕ್ಕಂತೆ ಹೊಸ ಕೋರ್ಸ್ ಪರಿಚಯಿಸಿದೆ. "ಸಟಿರ್ಫಿಕೇಟ್ ಇನ್ ರಿಟೇಲ್ ಮ್ಯಾನೇಜಮೆಂಟ್' ಎಂಬ ಕೋರ್ಸ್ ಅನ್ನು ಪ್ರಾರಂಭಿಸಲಾಗಿದೆ.
ಸದಾ ಹೊಸತನಕ್ಕೆ ಪೂರಕವಾಗಿ ಸ್ಪಂದಿಸುವ ವಿಶ್ವವಿದ್ಯಾಲಯ ಇದಾಗಿದ್ದು, ಪ್ರಸ್ತುತ ದೇಶದಲ್ಲಿ ರಿಟೇಲ್ ಉದ್ದಿಮೆಯು ಒಂದು ಸಂಟಿತ ರೂಪದಲ್ಲಿ ಬೆಳೆಯುತ್ತಿದೆ. ದೇಶದ ಅರ್ಥವ್ಯವಸ್ಥೆಯಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತಿದೆ. 2030ರ ವೇಳೆಗೆ ಈ ಕ್ಷೇತ್ರದಲ್ಲಿ ಹೆಚ್ಚುವರಿಯಾಗಿ 25 ದಶಲಕ್ಷ ಉದ್ಯೋಗಗಳು ಸೃಷ್ಟಿಯಾಗುವ ಸಾಧ್ಯತೆ ಇದೆ.
ಬಹುರಾಷ್ಟ್ರೀಯ ರಿಟೇಲ್ ಕಂಪನಿಗಳು ಸಹ ದೇಶದ ರಿಟೇಲ್ ರಂಗವನ್ನು ಪ್ರವೇಶ ಮಾಡುತ್ತಿವೆ. ಇದಲ್ಲದೇ ದೇಶವು ಬಹು ದೊಡ್ಡ ಗ್ರಾಹಕ ಸಮೂಹವನ್ನು ಹೊಂದಿದ್ದು, ಮಧ್ಯಮ ವರ್ಗದವರ ಆದಾಯವೂ ಹೆಚ್ಚುತ್ತ ಸಾಗಿದೆ.
ಈ ಎಲ್ಲ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕದ ಹುಬ್ಬಳ್ಳಿ ಧಾರವಾಡ ಭಾಗದಲ್ಲಿ ಹಲವು ಕಂಪನಿಗಳು ರಿಟೇಲ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿವೆ. ಈ ಕ್ಷೇತ್ರಕ್ಕೆ ಸೂಕ್ತವಾದ ಮಾನವ ಸಂಪನ್ಮೂಲ ರೂಪಿಸುವ ಉದ್ದೇಶದಿಂದ ಹೊಸ ಕೋರ್ಸ್ ಪರಿಚಯಿಸಲಾಗಿದೆ.
ಬಿಎ, ಬಿಕಾಂ, ಬಿಎಸ್ಸಿ, ಬಿಬಿಎ ಮುಂತಾದ ಪದವಿ ಪಡೆದ ವಿದ್ಯಾರ್ಥಿಗಳು ಈ ಕೋರ್ಸ್ ಸೇರಬಹುದು. ಕೋರ್ಸ್ ಕಲಿತ ನಂತರ ಹಲವು ಉದ್ಯೋಗಾವಕಾಶಗಳು ಲಭ್ಯವಾಗಲಿವೆ.
ಹೆಚ್ಚಿನ ಮಾಹಿತಿಗೆ ವಿಶ್ವವಿದ್ಯಾಲಯದ ಡಾ. ರೋನಿಲ್ ಮನೋಹರ್, ಪ್ರೊ. ಪ್ರಸನ್ನ ಕಳ್ಳಿಮಠ ಅವರನ್ನು ಸಂಪಕಿರ್ಸಲು ಕೋರಲಾಗಿದೆ.