

ಕಂಪ್ಲಿ: ತಾಲೂಕಿನ ಚಿಕ್ಕಜಾಯಿಗನೂರು ಗ್ರಾಮದ ಸರ್ವೇ ನಂ.177 ಅಚ್ಚುಕಟ್ಟು ವ್ಯಾಪ್ತಿಯ, ಡಿಪಿ3 ಕಾಲುವೆಯ ಎಲ್1 ಮತ್ತು ಎಲ್3ಗಳನ್ನು ಟ್ರೀ ಪ್ಲಾನ್ ಕುರಿತಂತೆ ನಿಗಮದ ಕಚೇರಿಯಲ್ಲಿ ಅಧಿಕಾರಿಗಳು ಹಾಗೂ ರೈತ ಮುಖಂಡರ ಮಧ್ಯೆ ಬುಧವಾರ ಚರ್ಚೆ ನಡೆಯಿತು.
ನೀರಾವರಿ ನಿಗಮದ ಇಇ ನಾಗಭೂಷಣ ಮಾತನಾಡಿ, ದಾಖಲಾತಿಯಂತೆ ಹಳೇ ಕಟ್ಟಡ ವಿನ್ಯಾಸವನ್ನು ಬದಲಿಸುವುದಿಲ್ಲ. ನಿರಶನ ನಿರತ ರೈತನ ಆಗ್ರಹದಂತೆ ಹೊಸ ತೂಬು ನಿರ್ಮಾಣ ಸಾಧ್ಯವಿಲ್ಲ. ಕಂಟ್ರೋಲ್ ಪಾಯಿಂಟ್ ತೆಗೆದರೆ ಕೆಳಭಾಗದ ರೈತರಿಗೆ ತೀವ್ರ ತೊಂದರೆಯಾಗುತ್ತದೆ. ಡಿಪಿ3 ಕಾಲುವೆಗೆ 0.68ಕ್ಯೂಸೆಕ್ಸ್‌ನಷ್ಟು ನೀರೊದಗಿಸಿ ಎಲ್ಲ ರೈತರ ಹೊಲಗದ್ದೆಗಳಿಗೆ ಸಮರ್ಪಕ ನೀರು ಹರಿಸಲಾಗುವುದು. ರೈತರೆಲ್ಲರೂ ಪರಸ್ಪರ ಹೊಂದಾಣಿಕೆಯಿಂದ ಸಮನ್ವಯ ಸಾಧಿಸಬೇಕು ಎಂದರು.
ಡಿಪಿ3 ಕಾಲುವೆಯ ಎಲ್1 ಮತ್ತು ಎಲ್3 ತೂಬಿನ ವ್ಯಾಪ್ತಿಯ ರೈತರಾದ ಅಶೋಕ, ಮಲ್ಲೇಶಪ್ಪ ಜಾಯಿಗನೂರು, ವೀರೇಶ್, ರಂಗಯ್ಯ, ಪ್ರಸಾದ್ ಇತರೆ ರೈತರು ಮಾತನಾಡಿ, ಯಾವುದೇ ಪ್ರತ್ಯೇಕ ತೂಬು ನಿರ್ಮಿಸಬಾರದು. ಎಲ್ಲ ರೈತರಿಗೆ ಸದ್ಯದ ವ್ಯವಸ್ಥೆ ಸಮರ್ಪಕವಾಗಿದ್ದು, ಯಥಾಸ್ಥಿತಿ ಕಾಪಾಡಬೇಕು ಎಂದು ಒತ್ತಾಯಿಸಿದರು.
ರೈತ ಸಂಘದ ಅಧ್ಯಕ್ಷ ಕೊಟ್ಟೂರು ರಮೇಶ್, ಮುಖಂಡರಾದ ಚೆಲ್ಲಾ ವೆಂಕಟನಾಯ್ಡು, ವಿ.ಟಿ.ನಾಗರಾಜ, ಆದೋನಿ ರಂಗಪ್ಪ, ಅಗಳಿ ಪಂಪಾಪತಿ ಇತರರು ಮಾತನಾಡಿ, ಎಲ್ಲ ರೈತರಿಗೆ ಅನುಕೂಲವಾಗುವ ವ್ಯವಸ್ಥೆ ಕಲ್ಪಿಸಿ ಎಂದು ಸೂಚನೆ ನೀಡಿದರು. ಉಪವಾಸನಿರತ ರೈತನ ಮನವೊಲಿಸಲು ರೈತ ಸಂಘ ಪ್ರಯತ್ನಿಸಿತು. ರೈತ ಪಟ್ಟು ಬಿಡಲಿಲ್ಲ. ಈ ಸಂದರ್ಭ ಡಿಪಿ3 ಕಾಲುವೆಯ ವ್ಯಾಪ್ತಿಯ ರೈತರು ಮತ್ತು ಉಪವಾಸ ನಿರತ ರೈತನ ಮಧ್ಯೆ ಮಾತಿನ ಚಕಮಕಿ ಜರುಗಿತು.
ನಿರಶನ ಮುಂದುವರಿಸಿದ ರೈತ
ಕಂಪ್ಲಿ: ತಾಲೂಕಿನ ಚಿಕ್ಕಜಾಯಿಗನೂರು ಗ್ರಾಮದ ಸರ್ವೇ ನಂಬರ್ 177 ಅಚ್ಚುಕಟ್ಟು ವ್ಯಾಪ್ತಿಯ, ಡಿಪಿ3 ಕಾಲುವೆಯ ಎಲ್1 ಮತ್ತು ಎಲ್3ಗಳನ್ನು ಟ್ರೀ ಪ್ಲಾನ್ ನಿರ್ಮಿಸಬೇಕು ಎಂದು ಆಗ್ರಹಿಸಿ, ಕಲ್ಲುಗುಡಿ ಭಾಗದ ರೈತ ಎಚ್.ಲಿಂಗಪ್ಪ ಇಲ್ಲಿನ ಕರ್ನಾಟಕ ನೀರಾವರಿ ನಿಗಮ ನಂ.1 ಉಪವಿಭಾಗ ಕಚೇರಿ ಮುಂಭಾಗದಲ್ಲಿ ಕೈಗೊಂಡ ಸತ್ಯಾಗ್ರಹ ಬುಧವಾರ ಎರಡನೇ ದಿನಕ್ಕೆ ಮುಂದುವರಿದೆ. ಟ್ರೀಪ್ಲಾನ್ ಪ್ರಕಾರ ತೂಬು ನಿರ್ಮಿಸುವತನಕ ನಿರಶನ ಮುಂದುವರಿಸುವ ನಿರ್ಧಾರ ಪ್ರಕಟಿಸಿದರು.