

ಹೊಸಕೋಟೆ: ಪ್ರತಿ ವರ್ಷ ನಡೆಯುವ ಅವಿಮುಕ್ತೇಶ್ವರ ಬ್ರಹ್ಮ ರಥೋತ್ಸವಕ್ಕೆ ಈ ಬಾರಿ ಬೆಂಡಿಗಾನಹಳ್ಳಿ ಬಚ್ಚೇಗೌಡ ಕುಟುಂಬದವರು ನೂತನ ರಥ ನಿರ್ಮಿಸಿಕೊಡಲಿದ್ದಾರೆ. ಈ ಕುರಿತು ಶಾಸಕ ಶರತ್ ಬಚ್ಚೇಗೌಡ ನೂತನ ರಥ ನಿರ್ಮಾಣಕ್ಕಾಗಿ ಹುಣಸೂರಿನಲ್ಲಿ ಅಗತ್ಯ ಮರಗಳನ್ನು ವೀಕ್ಷಣೆ ಮಾಡಿದರು.
ಕಳೆದ ವರ್ಷ ಹೊಸಕೋಟೆ ನಗರದ ಅವಿಮುಕ್ತೇಶ್ವರಸ್ವಾಮಿ ಬ್ರಹ್ಮರಥೋತ್ಸವ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ್ದ ಶರತ್ ಬಚ್ಚೇಗೌಡ, 5&6 ದಶಗಳಿಂದ ಇರುವ ರಥದ ಬದಲಾಗಿ ನೂತನ ರಥ ಮಾಡಿಸಿಕೊಡುವುದಾಗಿ ಭರವಸೆ ನೀಡಿದ್ದರು. ಕೊಟ್ಟ ಮಾತಿನಂತೆ ರಥಕ್ಕೆ ಬೇಕಾಗಿರುವ ಮರಗಳನ್ನು ಬೆಂಡಿಗಾನಹಳ್ಳಿ ಬಚ್ಚೇಗೌಡರ ಕುಟುಂಬದಿಂದ ಕೊಡಿಸಲು ನಿರ್ಧರಿಸಿದ್ದಾರೆ.
ಮುಖಂಡರಾದ ಎಚ್.ಎಸ್.ಗೋಪಾಲ್, ಶುಭಾಷ್ ಗೌಡ ಇತರರು ಶಾಸಕರ ಜತೆ ಮರಗಳನ್ನು ವೀಕ್ಷಣೆ ಮಾಡಿದರು.
ಇಂದು ಪೂರ್ವಭಾವಿ ಸಭೆ
ಮೇ 12 ರಂದು ನಡೆಯಲಿರುವ ಅವಿಮುಕ್ತೇಶ್ವರಸ್ವಾಮಿ ಬ್ರಹ್ಮರಥೋತ್ಸವದ ಪ್ರಯುಕ್ತ ತಾಲೂಕು ಆಡಳಿತ ಸೌಧದಲ್ಲಿ ಏ.30ರ ಮಧ್ಯಾಹ್ನ 3 ಗಂಟೆಗೆ ಶಾಸಕ ಶರತ್ ಬಚ್ಚೇಗೌಡರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ಹಮ್ಮಿಕೊಳ್ಳಲಾಗಿದೆ.