ಸುಬ್ರಹ್ಮಣ್ಯಕ್ಕೆ ಬೇಕು ಹೊಸ ಠಾಣೆ ಕಟ್ಟಡ

sub station web
Published on

ರತ್ನಾಕರ ಸುಬ್ರಹ್ಮಣ್ಯ

ಕುಕ್ಕೆ ಸುಬ್ರಹ್ಮಣ್ಯದ 40 ವರ್ಷ ಹಳೆಯ ಪೊಲೀಸ್ ಠಾಣಾ ಕಟ್ಟಡ ಶಿಥಿಲಾವಸ್ಥೆ ತಲುಪಿದೆ. ಠಾಣೆಯನ್ನು 1972ರಲ್ಲಿ ತೆರೆಯಲಾಗಿದ್ದು, 1979ರಲ್ಲಿ ನೂತನ ಕಟ್ಟಡ ನಿರ್ಮಾಣವಾಗಿತ್ತು. ಸುಮಾರು 15 ವರ್ಷಗಳವರೆಗೆ ಕಡಬ ಪೊಲೀಸ್ ಠಾಣೆಯ ಹೊರಠಾಣೆಯಾಗಿ ಕಾರ್ಯನಿರ್ವಹಿಸಿ ಬಳಿಕ ಸ್ವತಂತ್ರವಾಗಿ ಸುಬ್ರಹ್ಮಣ್ಯ ಠಾಣೆಯಾಗಿ ಕಾರ್ಯಾಚರಿಸುತ್ತಿದೆ.

ಹೆಂಚಿನ ಛಾವಣಿಯ ಈ ಕಟ್ಟಡ ಪ್ರಸ್ತುತ 3 ಕೊಠಡಿಗಳನ್ನು ಹೊಂದಿದೆ. ಕೊಠಡಿ ಸಮಸ್ಯೆಯಾದುದರಿಂದ 2001ರಲ್ಲಿ ಊರ ದಾನಿಗಳ ಸಹಕಾರದಿಂದ ಹೆಚ್ಚುವರಿ ಕೊಠಡಿ ನಿರ್ಮಿಸಲಾಯಿತು. ಸದ್ಯ ಇದೇ ಕಟ್ಟಡದಲ್ಲಿ ಠಾಣೆ ಕಾರ್ಯಾಚರಿಸುತ್ತಿದೆ. ಹಳೇ ಕಟ್ಟಡವಾಗಿರುವುದರಿಂದ ಮಳೆಗಾಲದಲ್ಲಿ ಸಮಸ್ಯೆಯಾಗುತ್ತಿದೆ. ದಾಖಲೆ ನಿರ್ವಹಣೆ, ದಾಸ್ತಾನು ಮೊದಲಾದ ಪ್ರತ್ಯೇಕ ವಿಭಾಗಗಳಿಗೆ ಸಾಕಷ್ಟು ಸ್ಥಳಾವಕಾಶ ಇಲ್ಲದಿರುವುದರಿಂದ ಇಕ್ಕಟ್ಟಾಗಿದೆ.

ಠಾಣೆಯು ಸುಬ್ರಹ್ಮಣ್ಯದ ಹೃದಯ ಭಾಗದಲ್ಲಿ 3 ಎಕರೆ ವಿಶಾಲ ಜಾಗವನ್ನು ಹೊಂದಿದೆ. ಪ್ರಸ್ತುತ 28 ಸಿಬ್ಬಂದಿ ಕರ್ತವ್ಯದಲ್ಲಿದ್ದು ಮೂಲಸೌಕರ್ಯಕ್ಕೆ ಯಾವುದೇ ಕೊರತೆಗಳಿಲ್ಲ. ಸುಳ್ಯ ನ್ಯಾಯಾಲಯ ವ್ಯಾಪ್ತಿಯಲ್ಲಿದ್ದು ಸುಳ್ಯ ಹಾಗೂ ಕಡಬ ತಾಲೂಕಿನ 15 ಗ್ರಾಮಗಳನ್ನೊಳಗೊಂಡಿದೆ.
ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವ್ಯಾಪ್ತಿಯ ಹೆಚ್ಚಿನ ಪೊಲೀಸ್ ಠಾಣೆಗಳು ಸುಸಜ್ಜಿತ ಕಟ್ಟಡಗಳನ್ನು ಹೊಂದಿವೆ. ಅದರಂತೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಗೂ ನೂತನ ಕಟ್ಟಡ ಬೇಕು ಎನ್ನುವುದು ಈ ಭಾಗದ ಜನತೆಯ ಆಶಯ.

ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ಹೊಸ ಕಟ್ಟಡ ಬೇಕೆಂಬ ಬೇಡಿಕೆಯನ್ನು ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಠಾಣೆಯನ್ನು ಮೇಲ್ದರ್ಜೆಗೆ ಏರಿಸಲು ಸೂಕ್ತ ಕ್ರಮಕೈಗೊಳ್ಳುವಂತೆ ಗೃಹ ಸಚಿವರಿಗೆ ಮನವಿ ಮಾಡಲಾಗುವುದು. ಎಸ್.ಅಂಗಾರ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net