

ಕುಮಟಾ: ಕೇಳಿದರೂ ಬರದವರು ಕೆಲವರು, ಕೇಳಿದರೆ ಬರುವವರು ಹಲವರು, ಕೇಳದೆ ತಿಳಿದು ಬರುವವನು ದೇವರು ಮಾತ್ರ ಎಂದು ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳು ಹೇಳಿದರು.
ಕುಮಟಾದ ರೈಲ್ವೆ ನಿಲ್ದಾಣದ ಸಮೀಪ ವಿನಾಯಕ ರೆಕ್ಸಿನ್ ಹೌಸ್‌ನ ನೂತನ ಕಟ್ಟಡ ಅನಾವರಣಗೊಳಿಸಿ, ಮಾಲೀಕ ವಿನಾಯಕ ಹೆಗಡೆಕಟ್ಟೆ ದಂಪತಿಯಿಂದ ಪಾದುಕಾ ಪೂಜೆ ಮತ್ತು ಭಿಕ್ಷಾ ಸೇವೆ ಸ್ವೀಕರಿಸಿ, ಧರ್ಮ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ನಮ್ಮ ನೋವು, ನಲಿವಿನ ಬಗ್ಗೆ ಹೇಳಿದ್ದನ್ನು ಕೇಳಿಸಿಕೊಳ್ಳಲು ಕುಟುಂಬದವರು, ಸ್ನೇಹಿತರು ಇರುತ್ತಾರೆ. ಆದರೆ ನಾವು ಹೇಳದೇ ನಮ್ಮೊಳಗಿನ ಭಾವವನ್ನು ಕೇಳುವವ ಶ್ರೀರಾಮ ಮಾತ್ರ. ಆ ಕಾಲದಲ್ಲಿ ದೇವತೆಗಳ ಅಹವಾಲು ಕೇಳಲು ವಿಷ್ಣುವೇ ಬಂದಿದ್ದ.ಅಂದು ರಾವಣನ ನಿಗ್ರಹಕ್ಕೆ ರಾಮನಾಗಿ ಅವತರಿಸಿದ ಅವರು ವಿವರಿಸಿದರು.
ಭಕ್ತಿಗೆ ಗಡಿಯಿಲ್ಲ ಹೀಗಾಗಿ ಅಂಗಡಿಯಲ್ಲಿಯೂ ದೇವರ ಪೂಜೆ ನಡೆಯಬಹುದು. ವಿನಾಯಕ ಹೆಗಡೆಕಟ್ಟೆ ಕುಟುಂಬ ಗುರುಗಳ ಪಾದ ಸ್ಪರ್ಶವನ್ನು ಬಯಸಿತ್ತು. ಆದರೆ, ರಾಮನ ಪೂಜೆ, ನೈವೇದ್ಯ ಎಲ್ಲವೂ ನಡೆದಿದೆ. ಇದುವೇ ಗುರು ಅನುಗ್ರಹ. ಒಳಗಿನ ಮೊರೆ ಎಷ್ಟು ತೀವ್ರವೋ ಅಷ್ಟು ಫಲ ಜಾಸ್ತಿ. ಹೀಗಾಗಿ ರಾಮನೇ ಪ್ರೇರಣೆಗೊಂಡು ಈ ಕಾರ್ಯ ಮಾಡಿದ್ದಾನೆ ಎಂದು ಹಾರೈಸಿದರು.
ಇದೇ ಸಂದರ್ಭದಲ್ಲಿ ದೀಪ ಬೆಳಗುವ ಮೂಲಕ ಕರ್ಲಾನ್ ಕಾರ್ನರ್ ಉದ್ಘಾಟನೆ ನೆರವೇರಿತು. ಶಾಸಕ ದಿನಕರ ಶೆಟ್ಟಿ, ಹವ್ಯಕ ಮಹಾಮಂಡಲದ ಅಧ್ಯಕ್ಷ ಮೋಹನ ಹೆಗಡೆ, ಕರ್ಲಾನ್ ಕಂಪನಿಯ ಪ್ರಮುಖರು ಇದ್ದರು.
ಇದನ್ನೂ ಓದಿ: ಕಾರವಾರ ವಾಣಿಜ್ಯ ಬಂದರು ಖಾಸಗಿ ತೆಕ್ಕೆಗೆ..?