

ಹೊಸನಗರ: ರೈತರ ಹಿತ ಕಾಯುವತ್ತ ಸಹಕಾರಿ ಸಂಘಗಳು ಹೆಚ್ಚಿನ ಗಮನ ಹರಿಸಬೇಕು ಎಂದು ಮೂಲೆಗದ್ದೆ ಮಠದ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ ಸಲಹೆ ನೀಡಿದರು.
ಪಟ್ಟಣದ ಜೆಸಿಎಂ ರಸ್ತೆಯಲ್ಲಿರುವ ವೀರಶೈವ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟಿಸಿದ ಶ್ರೀಗಳು, ಖಾಸಗಿ ವರ್ತಕರ ಕಪಿಮುಷ್ಠಿಯಿಂದ ರೈತರನ್ನು ತಪ್ಪಿಸಿ, ಬೆಳೆಗಾರರಿಗೆ ಕಡಿಮೆ ಬಡ್ಡಿಯಲ್ಲಿ ಆರ್ಥಿಕ ಸಹಾಯ ನೀಡುವುದರ ಜತೆಗೆ ಅವರ ಬೆಳೆಗೆ ಉತ್ತಮ ಬೆಲೆ ದೊರಕುವಂತೆ ಸಹಕಾರ ಸಂಘಗಳು ಮಾಡಬೇಕು ಎಂದು ಆಶಿಸಿದರು.
ಸಂಘದ ಅಧ್ಯಕ್ಷ ಹರತಾಳು ನಂಜುಂಡಪ್ಪ ಮಾತನಾಡಿ, ಸುಮಾರು 50 ಲಕ್ಷ ರೂ. ವೆಚ್ಚದ ಕಟ್ಟಡವನ್ನು ಯಾವುದೇ ಗುತ್ತಿಗೆದಾರರಿಗೆ ನೀಡದೆ, ಸಂಘದ ಮೇಲುಸ್ತುವಾರಿಯಲ್ಲಿ ನಿರ್ಮಿಸಲಾಗಿದೆ ಎಂದರು. ಇದೇ ವೇಳೆಯಲ್ಲಿ ಸಂಘದ ಪ್ರವರ್ತರಿಂದ ಅಡಕೆ ಹಾಗೂ ತೋಟಗಾರಿಕಾ ಬೆಳೆ ಖರೀದಿ, ದಳ್ಳಾಳಿ ಮಂಡಿಗೂ ಚಾಲನೆ ನೀಡಲಾಯಿತು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಷಡಾಕ್ಷರಿ, ಮಾಜಿ ಅಧ್ಯಕ್ಷ ಚನ್ನವೀರಪ್ಪ, ನಿರ್ದೇಶಕರಾದ ಎಂ.ಎಂ.ಪರಮೇಶ್ವರ, ಜಿ.ಎನ್.ಸುಧೀರ್, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಂ.ವಿ.ಜಯರಾಮ್, ಮಾಜಿ ನಿರ್ದೇಶಕ ಜಬಗೋಡು ಹಾಲಪ್ಪ, ಕಲ್ಯಾಣಪ್ಪ ಗೌಡ, ಉಪಾಧ್ಯಕ್ಷ ಬಸಪ್ಪ ಇದ್ದರು. ಜಬಗೋಡು ಮಲ್ಲಿಕಾ ಸ್ವಾಗತಿಸಿದರು. ಶಿವಾನಂದ ಕಾರ್ಯಕ್ರಮ ನಿರೂಪಿಸಿದರು. ಸಿಇಒ ಗೀತಾ ಗಿರೀಶ್ ವರದಿ ಮಂಡಿಸಿದರು.