

ಮಾಯಕೊಂಡ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಗ್ರಾಮೀಣ ಪ್ರದೇಶದ ಮಹಿಳೆಯರಿಗೆ, ಯುವಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಅಕ್ಷಯ ಪಾತ್ರೆಯಾಗಿದೆ ಎಂದು ದಿಂಡದಹಳ್ಳಿ ಆಂಜನೇಯ ದೇವಸ್ಥಾನ ಕಮಿಟಿ ಅಧ್ಯಕ್ಷ ಡಿ.ಎಚ್. ರಾಮಚಂದ್ರಪ್ಪ ಅಭಿಮತ ವ್ಯಕ್ತಪಡಿಸಿದರು.
ಹೋಬಳಿಯ ದಿಂಡದಹಳ್ಳಿ ಗ್ರಾಮದಲ್ಲಿ ನಿರ್ವಣಗೊಳ್ಳುತ್ತಿರುವ ನೂತನ ಆಂಜನೇಯ ದೇವಸ್ಥಾನಕ್ಕೆ ಶುಕ್ರವಾರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯವರು ನೀಡಿದ 1.5 ಲಕ್ಷ ರೂ. ಡಿಡಿ ಸ್ವೀಕರಿಸಿ ಮಾತನಾಡಿದರು.
ಧರ್ಮಸ್ಥಳ ಧರ್ವಧಿಕಾರಿಗಳಾದ ಡಾ. ವೀರೇಂದ್ರ ಹೆಗ್ಗಡೆ ಮತ್ತು ಹೇಮಾವತಿಯವರು ಧಗ್ರಾ ಯೋಜನೆ ಪ್ರಾರಂಭಿಸಿ ಮಹಿಳೆಯರಿಗೆ ಸ್ವಸಹಾಯ ಸಂಘಗಳ ಮೂಲಕ ಆರ್ಥಿಕ ನೆರವನ್ನು ನೀಡುವುದರ ಜತೆಗೆ ಸ್ವಾವಲಂಬಿ ಬದುಕನ್ನು ನಡೆಸಲು ದಾರಿ ದೀಪವಾಗಿದ್ದಾರೆ ಎಂದರು.
ನಿರುದ್ಯೋಗಿ ಯುವಕರಿಗೆ ಧಗ್ರಾ ಯೋಜನೆಯಿಂದ ಸಾಲ ಸೌಲಭ್ಯವನ್ನು ನೀಡಿ ಸ್ವ- ಉದ್ಯೋಗಕ್ಕೆ ಸಹಕಾರಿಯಾಗಿದೆ. ವಿದ್ಯಾರ್ಥಿ ವೇತನ, ವೃದ್ಧಾಪ್ಯ ವೇತನ, ಗ್ರಾಮೀಣ ಪ್ರದೇಶಗಳ ದೇವಾಲಯಗಳಿಗೆ ಜೀಣೋದ್ಧಾರಕ್ಕಾಗಿ ಧನ ಸಹಾಯ, ಸರ್ಕಾರಿ ಶಾಲೆಗಳಿಗೆ ಪೀಠೋಪಕರಣ ಸಹಾಯ ಸೇರಿ ಹಲವಾರು ಸೌಲಭ್ಯವನ್ನು ಒದಗಿಸಿದೆ ಎಂದು ಶ್ಲಾಘಿಸಿದರು.
ಧಗ್ರಾ ಯೋಜನೆ ಜಿಲ್ಲಾ ನಿರ್ದೇಶಕ ಲಕ್ಷ್ಮಣ್ ಮಾತನಾಡಿ, ಡಾ. ವೀರೇಂದ್ರ ಹೆಗಡೆ ಹಾಗೂ ಹೇಮಾವತಿ ಅವರ ಆಶಯದಂತೆ ಗ್ರಾಮೀಣ ಪ್ರದೇಶಗಳಲ್ಲಿನ ಕೆರೆಗಳು, ದೇವಾಲಯಗಳು ಹಾಗೂ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ದೇಣಿಗೆ ನೀಡುತ್ತಿದ್ದು, ರಾಜ್ಯಾದ್ಯಂತ ಸಾವಿರಾರು ದೇವಾಲಯ, ಕೆರೆಕಟ್ಟೆಗಳು ಅಭಿವೃದ್ಧಿಗೊಂಡಿವೆ ಎಂದು ತಿಳಿಸಿದರು.
ಆಂಜನೇಯ ದೇವಸ್ಥಾನ ಕಮಿಟಿ ಅಧ್ಯಕ್ಷ ಡಿ.ಎಚ್. ರಾಮಚಂದ್ರಪ್ಪ ಇವರಿಗೆ ಧಗ್ರಾಯೋ ಜಿಲ್ಲಾ ನಿರ್ದೇಶಕ ಎಂ. ಲಕ್ಷ್ಮಣ್ 1.5 ಲಕ್ಷದ ಡಿಡಿಯನ್ನು ಹಸ್ತಾಂತರಿಸಿದರು.
ಧಗ್ರಾಯೋ ತಾಲೂಕು ಯೋಜನಾಧಿಕಾರಿ ಯಶೋದಾ, ಮಾಯಕೊಂಡ ವಲಯ ಮೇಲ್ವಿಚಾರಕಿ ವನಜಾಕ್ಷಮ್ಮ, ಸೇವಾ ಪ್ರತಿನಿಧಿಗಳಾದ ಗುಣಶೀಲ, ಶಾರದಾ, ದೇವಸ್ಥಾನ ಕಮಿಟಿ ಸದಸ್ಯರಾದ ಪ್ರಶಾಂತ್ ದೊಡ್ಮನೆ, ಸುರೇಶ್ ಕುಂಬಾಳೆ, ರುದ್ರೇಶ್ ಕುಂಬಾಳೆ, ಪರಶುರಾಮ್ ಕೃಷ್ಣಮೂರ್ತಿ ಅಣ್ಣಪ್ಪ, ಗ್ರಾಪಂ ಮಾಜಿ ಸದಸ್ಯೆ ನಳಿನಾ ಆಂಜನೇಯ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.