

ಕಡೂರು: ಕಡೂರು ಮತ್ತು ಬೀರೂರು ಸಾರ್ವಜನಿಕ ಆಸ್ಪತ್ರೆಗಳಿಗೆ ಶೀಘ್ರದಲ್ಲಿ ಎರಡು ಹೊಸ ಅಂಬುಲೆನ್ಸ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಶಾಸಕ ಕೆ.ಎಸ್.ಆನಂದ್ ತಿಳಿಸಿದರು.
ಶಾಸಕರ ಕಚೇರಿ ಆವರಣದಲ್ಲಿ ತಾಲೂಕಿನ ಪಂಚನಹಳ್ಳಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ನೂತನ ಅಂಬುಲೆನ್ಸ್ ಹಸ್ತಾಂತರಿಸಿ ಮಾತನಾಡಿದ ಅವರು, ಗಡಿ ಗ್ರಾಮ ಪಂಚನಹಳ್ಳಿಯ ಆರೋಗ್ಯ ಕೇಂದ್ರದಲ್ಲಿ ಆಂಬುಲೆನ್ಸ್ ಕೊರತೆ ಸಾಕಷ್ಟು ಕಾಡುತ್ತಿದೆ. ಈ ಬಗ್ಗೆ ಕೆಡಿಪಿ ಸಭೆಗೆ ಆಗಮಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಜೆ.ಜಾರ್ಜ್ ತಮ್ಮ ಸಿಆರ್‌ಎ್ ಅನುದಾನದಲ್ಲಿ 36 ಲಕ್ಷ ರೂ. ವೆಚ್ಚದಲ್ಲಿ ಅಂಬುಲೆನ್ಸ್ ನ್ನು ಆಸ್ಪತ್ರೆಗೆ ಒದಗಿಸಲಾಗಿದೆ ಎಂದರು.
ಯಗಟಿ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ಕಟ್ಟಡ ಮತ್ತಿತರ ವ್ಯವಸ್ಥೆಗಳು ಪೂರ್ಣಗೊಂಡಿದ್ದು ಅಲ್ಲಿನ ಹುದ್ದೆಗಳನ್ನು ಮೇಲ್ದರ್ಜೆಗೇರಿಸುವ ಮತ್ತು ಚೌಳಹಿರಿಯೂರು ಆರೋಗ್ಯ ಸಮುದಾಯ ಕೇಂದ್ರವನ್ನು ಮೇಲ್ದರ್ಜೆಗೇರಿಸುವ ಕುರಿತು ಚಿಂತನೆ ನಡೆಸಲಾಗಿದೆ. ಈ ಬಗ್ಗೆ ಆರೋಗ್ಯ ಸಚಿವರ ಬಳಿ ಚರ್ಚಿಸಲಾಗಿದೆ ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಅಶ್ವಥ್‌ಬಾಬು, ತಾಲೂಕು ಆರೋಗ್ಯಾಧಿಕಾರಿ ಡಾ. ಎಸ್.ಸಿ.ರವಿಕುಮಾರ್, ಪಂಚನಹಳ್ಳಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಜಗದೀಶ್, ತಾಪಂ ಮಾಜಿ ಉಪಾಧ್ಯಕ್ಷ ಪಿ.ಸಿ.ಪ್ರಸನ್ನ, ಗ್ರಾಪಂ ಸದಸ್ಯ ತಿಮ್ಲಾಪುರ ದಿನೇಶ್, ವಸಂತ, ಸುನಿತಾ, ಲಕ್ಷ್ಮೀಶ ನಾಯ್ಕ, ಪಿ.ಜಿ.ಸಿದ್ದರಾಮಪ್ಪ, ಭೀಮಣ್ಣ. ಅಬಿದ್‌ಪಾಷಾ, ದೊಣ್ಣೇಕೋರನಹಳ್ಳಿ ಉಮೇಶ್, ಕೃಷ್ಣಪ್ಪ, ಹೋಚಿಹಳ್ಳಿ ಭೋಗಪ್ಪ ಮತ್ತಿತರಿದ್ದರು.