

ಆರ್.ತುಳಸಿಕುಮಾರ್ ಬೆಂಗಳೂರು
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲಿನ ಒತ್ತಡ ತಗ್ಗಿಸಲು ಬೆಂಗಳೂರಿನಲ್ಲಿ ಎರಡನೇ ಏರ್‌ಪೋರ್ಟ್ ಸ್ಥಾಪಿಸಬೇಕೆಂಬ ನಿರ್ಧಾರ ಕೈಗೊಂಡ ಹಲವು ದಿನಗಳೇ ಆಗಿದ್ದರೂ ಸ್ಥಳ ಮಾತ್ರ ಅಂತಿಮಗೊಂಡಿಲ್ಲ. ಈ ಸಂದರ್ಭದಲ್ಲೇ, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಯು ಬಿಡದಿ ಸಮೀಪದ ವಿವಿಧ ಗ್ರಾಮಗಳಿಗೆ ಸೇರಿದ 4,800 ಎಕರೆ ಜಮೀನು ಸ್ವಾಧೀನ ಮುಂದಾಗಿರುವುದು ಚರ್ಚೆಗೆ ಎಡೆಮಾಡಿಕೊಟ್ಟಿದೆ.
ಬೆಂಗಳೂರು ದಕ್ಷಿಣ ಭಾಗದಲ್ಲಿ ಹೊಸ ವಿಮಾನ ನಿಲ್ದಾಣ ಸ್ಥಾಪಿಸುವ ಮೂಲಕ ನೆರೆಯ ಹೊಸೂರಿನಲ್ಲಿ ತಮಿಳುನಾಡು ಸರ್ಕಾರ ಸ್ಥಾಪಿಸಲು ಉದ್ದೇಶಿರುವ ಏರ್‌ಪೋರ್ಟ್ ಪ್ರಸ್ತಾಪಕ್ಕೆ ರಾಜ್ಯ ಸರ್ಕಾರ ಕೌಂಟರ್ ಕೊಡುವ ಸಾಧ್ಯತೆ ಗೋಚರಿಸಿದೆ. ಈ ಉದ್ದೇಶದಿಂದಲೇ ಬಿಡದಿ ಬಳಿ ಭೂಸ್ವಾಧೀನಕ್ಕೆ ಸಿದ್ಧತೆ ನಡೆದಿರಬಹುದೆಂದು ಹೇಳಲಾಗುತ್ತಿದೆ. ಜತೆಗೆ ಬೆಂಗಳೂರು ದಕ್ಷಿಣ ಭಾಗದಲ್ಲೇ 2ನೇ ಏರ್‌ಪೋರ್ಟ್ ಸ್ಥಾಪಿಸಬೇಕೆಂದು ಡಿಸಿಎಂ ಡಿ.ಕೆ.ಶಿವಕುಮಾರ್ ಮೊದಲಿನಿಂದಲೂ ಪಟ್ಟುಹಿಡಿದಿದ್ದು, ಅವರ ಒತ್ತಡಕ್ಕೆ ರಾಜ್ಯ ಸರ್ಕಾರ ಮಣಿದಿದೆಯೇ ಎಂಬ ಪ್ರಶ್ನೆಯನ್ನೂ ಹುಟ್ಟುಹಾಕಿದೆ.
ರಾಮನಗರ ಜಪ:
ಮುಖ್ಯವಾಗಿ ರಾಮನಗರ ಜಿಲ್ಲೆಗೆ ‘ಬೆಂಗಳೂರು ದಕ್ಷಿಣ‘ ಎಂದು ಮರುನಾಮಕರಣ ಮಾಡಿ ರಾಜಧಾನಿಯ ವರ್ಚಸ್ಸು ನೀಡಲು ಡಿಸಿಎಂ ಭಾರಿ ಕಸರತ್ತು ನಡೆಸುತ್ತಿದ್ದಾರೆ. ಕಳೆದ ವಾರವಷ್ಟೇ ಈ ಇಂಗಿತವನ್ನು ಅವರು ರಾಮನಗರದಲ್ಲಿ ಮತ್ತೊಮ್ಮೆ ಹೊರಹಾಕಿದ್ದಾರೆ. ಬೆಂಗಳೂರು ದಕ್ಷಿಣವೆಂದು ಹೆಸರು ಬದಲಾಗುವುದರಿಂದ ಇಲ್ಲಿನ ಜಮೀನಿಗೆ ದುಪ್ಪಟ್ಟು ಬೆಲೆ ಬರಲಿದೆ. ಹೀಗಾಗಿ ಯಾರೂ ಜಮೀನು ಮಾರಾಟ ಮಾಡಬಾರದೆಂದು ಫರ್ಮಾನು ಹೊರಡಿಸಿದ್ದರು. ಇದು ಏರ್‌ಪೋರ್ಟ್ ಆರಂಭಿಸಲು ಸ್ಥಳೀಯ ಜನರಿಂದ ಜಮೀನು ಭೂಸ್ವಾಧೀನ ಮಾಡಿಕೊಳ್ಳಲು ಪೂರ್ವತಯಾರಿ ಕೆಲಸ ಎಂದೇ ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದಾರೆ.
‘ಗ್ರೇಟರ್ ಬೆಂಗಳೂರು‘ ವ್ಯಾಪ್ತಿ:
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಬಿಡದಿ ಸುತ್ತಲಿನ ಪ್ರದೇಶಗಳನ್ನು ಒಳಗೊಂಡು ರಚಿಸಿದ್ದ ‘ಗ್ರೇಟರ್ ಬೆಂಗಳೂರು’ ಯೋಜನೆಗೆ ನೀರೆರೆಯುತ್ತಾ ಬಂದಿದೆ. ಅದರಲ್ಲೂ ರಾಮನಗರ ಜಿಲ್ಲೆಯ ರಾಜಕೀಯವನ್ನು ಕೈವಶ ಮಾಡಿಕೊಂಡಿರುವ ಡಿ.ಕೆ. ಶಿವಕುಮಾರ್, ಬಿಡದಿ ಸುತ್ತಮುತ್ತ ಹಲವು ಯೋಜನೆಗಳನ್ನು ಘೋಷಿಸುತ್ತಾ ಬಂದಿದ್ದಾರೆ. ಬಿಡದಿ ಕೈಗಾರಿಕೆ ಪ್ರದೇಶ ಅಭಿವೃದ್ಧಿಗೆ ಅನುದಾನ ಬಿಡುಗಡೆ, ಬಿಡದಿಗೆ ಮೆಟ್ರೋ ರೈಲು ಸೌಲಭ್ಯ, ನೈಸ್ ಸಂಸ್ಥೆಯ ಬಾಕಿಯಿರುವ 9 ಕಿ.ಮೀ. ಉದ್ದದ ರಸ್ತೆ, ಮೈಸೂರು ರಸ್ತೆಯಿಂದ ಕನಕಪುರ ಮಾರ್ಗವಾಗಿ ಸಾಗುವ ಪಿಆರ್‌ಆರ್-2 ರಸ್ತೆ ಹಾಗೂ ಈ ರಸ್ತೆಯ ಅಕ್ಕಪಕ್ಕದಲ್ಲೇ ಹೊಸದಾಗಿ 5 ಬಡಾವಣೆಗಳನ್ನು ಬಿಡಿಎಯಿಂದ ರಚಿಸಲು ತಯಾರಿ ನಡೆಸಲಾಗಿದೆ. ಈ ಎಲ್ಲ ವಿದ್ಯಮಾನಗಳು ಬೆಂಗಳೂರು ದಕ್ಷಿಣ ಜಿಲ್ಲೆಯಾಗಿಸುವುದು ಹಾಗೂ 2ನೇ ಏರ್‌ಪೋರ್ಟ್ ಸ್ಥಾಪಿಸುವ ಉದ್ದೇಶದಿಂದದೇ ಆಗಿದೆ ಎಂದು ವಿಶ್ಲೇಷಿಸಲಾಗಿದೆ.
10 ಗ್ರಾಮಗಳು ಯಾವುವು?:
ಭೂಸ್ವಾಧೀನಕ್ಕಾಗಿ ಕೆಐಎಡಿಬಿ ಬಿಡದಿ ಸುತ್ತಮುತ್ತಲಿನ 10 ಹಳ್ಳಿಗಳಲ್ಲಿನ ಜಮೀನು ಗುರುತಿಸಲು ಸಿದ್ಧತೆ ಆರಂಭಿಸಿದೆ. ಬೆಂಗಳೂರು ದಕ್ಷಿಣ ತಾಲೂಕಿನ ಕಗ್ಗಲೀಪುರ, ಚಿನ್ನಕುರ್ಚಿ, ಸೀಗೆಹಳ್ಳಿ, ಉತ್ತರಿ, ನಾಗನಾಯಕನಹಳ್ಳಿ, ಚೂಡಹಳ್ಳಿ, ನೆಲಗುಳಿ ಹಾಗೂ ರಾಮನಗರ ಜಿಲ್ಲೆಯ ಬಿಡದಿ ಹೋಬಳಿಗೆ ಸೇರಿದ ಕೊಡಿಯಾಲಕರನಹಳ್ಳೀ, ದೊಡ್ಡಕುಂಟನಹಳ್ಳಿ, ಚಿಕ್ಕಕುಂಟನಹಳ್ಳಿ ಗ್ರಾಮಗಳಲ್ಲಿನ ಜಮೀನುಗಳಿಗೆ ಭೂಸ್ವಾಧೀನ ಪ್ರಕ್ರಿಯೆಗಾಗಿ ಸ್ಥಳ ತನಿಖೆ ವರದಿ, ಚೆಕ್ಕುಬಂದಿ ಹಾಗೂ ನಕ್ಷೆ ತಯಾರಿಸಲು ಸಂಸ್ಥೆಯ ವಿಶೇಷ ಭೂಸ್ವಾಧೀನಾಧಿಕಾರಿ -2 ಅವರು ಮೋಜಿಣಿದಾರರು ಮತ್ತು ತಪಾಸಕರಿಗೆ ಪತ್ರ ಬರೆದಿದ್ದಾರೆ. ಈ ಕಾರ್ಯ ಕಾಲಮಿತಿಯೊಳಗೆ ಪೂರ್ಣಗೊಳಿಸುವಂತೆ ಕೆಳಹಂತದ ಅಧಿಕಾರಿಗಳಿಗೆ ಸಂಸ್ಥೆಯಿಂದ ಸಂದೇಶ ರವಾನಿಸಲಾಗಿದೆ.
ಏನೆಲ್ಲ ಲೆಕ್ಕಾಚಾರ?:
ಪ್ರಸ್ತುತ ಭೂಸ್ವಾಧೀನ ಮಾಡಿಕೊಳ್ಳಲಿರುವ ಪ್ರದೇಶವು ಕೃಷಿ ಭೂಮಿಯಾಗಿದೆ. ಸಮತಟ್ಟಾದ, ಎಲ್ಲೂ ಎತ್ತರದ ಗುಡ್ಡ ಬೆಟ್ಟಗಳಿಲ್ಲದ ಹಾಗೂ ಪರಿಸರಕ್ಕೆ ಹೆಚ್ಚು ಹಾನಿ ಮಾಡ ಆಯಾಕಟ್ಟಿನ ಜಾಗದಲ್ಲಿದೆ. ರಾಜಧಾನಿಗೆ ಸಮೀಪದಲ್ಲೇ ಇರುವ ಬಿಡದಿಯು ರಾಮನಗರ, ಮೈಸೂರು, ಮಂಡ್ಯ ಪ್ರದೇಶಕ್ಕೆ ಸಂಪರ್ಕ ಕೊಂಡಿಯಾಗಿದೆ. ಭವಿಷ್ಯದಲ್ಲಿ ಅಭಿವೃದ್ಧಿಗೆ ವಿಫುಲಾವಕಾಶ ಇರುವುದರಿಂದ ಏರ್‌ಪೋರ್ಟ್ ಸ್ಥಾಪಿಸಿದ್ದಲ್ಲಿ ಸ್ಥಳೀಯರಿಗೆ ಉದ್ಯೋಗಾವಕಾಶದ ಬಾಗಿಲು ತೆರೆಯಲಿದೆ ಎಂಬ ಲೆಕ್ಕಾಚಾರ ಇದೆ. ಜತೆಗೆ ರಾಜಧಾನಿ ಆಚೆ ನವ ಬೆಂಗಳೂರು ನಿರ್ಮಿಸಲು ಈಗಿನಿಂದಲೇ ಭೂಮಿಕೆ ಸಿದ್ಧಪಡಿಸುವ ಡಿಸಿಎಂ ಯತ್ನಕ್ಕೆ ಕೆಐಎಡಿಬಿ ಭೂಸ್ವಾಧೀನ ಪ್ರಕ್ರಿಯೆ ಇಂಬು ನೀಡಿದೆ.
ಎಕರೆಗೆ 10 ಕೋಟಿ ರೂ. ಕೊಡಲಿ:
ಕೆಐಎಡಿಬಿ ಭೂಸ್ವಾಧೀನ ಮಾಡಿಕೊಳ್ಳಲಿರುವ ಜಮೀನಿಗೆ ಪ್ರಸ್ತುತ 1 ಕೋಟಿ ರೂ.ಗಿಂತ ಹೆಚ್ಚು ಬೆಲೆ ಇದೆ. ಏರ್‌ಪೋರ್ಟ್‌ಗೆ ಜಮೀನು ಬಿಟ್ಟುಕೊಡಲು ರೈತರು ಸಿದ್ಧರಿಲ್ಲ. ಆದರೆ, ಮುಂದಿನ ಜೀವನ ಭದ್ರತೆಗೆ ಉದ್ಯೋಗ ಹಾಗೂ ಎಕರೆಗೆ 10 ಕೋಟಿ ರೂ. ನೀಡಿದರೆ ಜಮೀನು ಬಿಟ್ಟುಕೊಡಲು ಯೋಚನೆ ಮಾಡಬಹುದು. ಮೊದಲು ಸರ್ಕಾರ ಏರ್‌ಪೋರ್ಟ್ ನಿರ್ಮಿಸುವ ಯೋಜನೆ ಪ್ರಕಟಿಸಲಿ. ರೈತರಿಗೆ ಅನ್ಯಾಯ ಆಗದಂತೆ ಸ್ಪಷ್ಟ ವಾಗ್ದಾನ ನೀಡಿದರಷ್ಟೇ ಸಕಾರಾತ್ಮಕವಾಗಿ ಸ್ಪಂದಿಸಬಹುದು ಎನ್ನುತ್ತಾರೆ ಆ ಭಾಗದ ಜನರು.
ಪ್ರಮುಖಾಂಶಗಳು:
* ನೆಲಮಂಗಲ ಬಳಿ ಏರ್‌ಪೋರ್ಟ್ ಸ್ಥಾಪನೆಗೆ ವಿರೋಧ ಹಿನ್ನೆಲೆ
* ಬಿಡದಿ ಸುತ್ತಮುತ್ತ ದೃಷ್ಟಿ ಹರಿಸಿದ ರಾಜ್ಯ ಸರ್ಕಾರ
* ಬಿಡದಿ ಬಳಿ 4,800 ಎಕರೆ ಭೂಸ್ವಾಧೀಮನಕ್ಕೆ ಸಿದ್ಧತೆ
* ಭುಮಿ ವಶಕ್ಕೆ ಪಡೆಯುವ ಪ್ರಕ್ರಿಯೆಗೆ ಕೆಐಎಡಿಬಿ ಚಾಲನೆ
* ಈಗಲೇ ಜಮೀನು ಕಾಯ್ದಿರಿಸಿದರೆ ಭವಿಷ್ಯದಲ್ಲಿ ಸಮಸ್ಯೆ ಆಗಲ್ಲ
* ಹೊಸ ಉಪನಗರ, ಮೆಟ್ರೋ ಸೌಲಭ್ಯಕ್ಕೆ ತಯಾರಿ
* ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಎಂದು ಗುರುತಿಸಲು ಸಹಕಾರಿ