

ಶಕ್ತಿ ಸ್ವರೂಪಿಣಿಯಾದ ಮಾತೆಯನ್ನು ಪೂಜಿಸುವ ಶರನ್ನವರಾತ್ರಿ ದೇಶಾದ್ಯಂತ ನಡೆಯುತ್ತದೆ. ಕರ್ನಾಟಕದಲ್ಲಿ ವಿಶೇಷವಾಗಿ ಮೈಸೂರಿನಲ್ಲಿ ನಡೆಯುವ ದಸರಾ ಉತ್ಸವವು ಪೌರಾಣಿಕ, ಸಾಂಸ್ಕೃತಿಕ, ಐತಿಹಾಸಿಕ ಹಾಗೂ ಪ್ರವಾಸೋದ್ಯಮ ದೃಷ್ಟಿಯಿಂದಲೂ ಪ್ರಾಮುಖ್ಯತೆ ಪಡೆದಿದೆ. ‘ನಾಡ ಹಬ್ಬ ಮೈಸೂರು ದಸರೆ’ಯ ಕುರಿತು ಪುರಾತತ್ವ ಮತ್ತು ಇತಿಹಾಸಜ್ಞ ಡಾ. ಶೆಲ್ವಪಿಳ್ಳೆ ೖ ಅಯ್ಯಂಗಾರ್, ನಿವೃತ್ತ ಪ್ರಾಧ್ಯಾಪಕ ಪ್ರೊ. ಎನ್.ಎಸ್. ರಂಗರಾಜು ಹಾಗೂ ಮೈಸೂರಿನ ಕಥೆಗಳು ಖ್ಯಾತಿಯ ಧಮೇಂದ್ರ ಕುಮಾರ್ ಅವರು ‘ವಿಜಯವಾಣಿ ಹಾಗೂ ದಿಗ್ವಿಜಯ 24ಗಿ7 ನ್ಯೂಸ್ ಆಯೋಜಿಸಿದ್ದ ‘ಕ್ಲಬ್ಹೌಸ್ ಆನ್ಲೈನ್ ಆಡಿಯೋ ಸಂವಾದ’ ಕಾರ್ಯಕ್ರಮದಲ್ಲಿ ಬೆಳಕು ಚೆಲ್ಲಿದ್ದಾರೆ.
ಮೈಸೂರರಸರಿಗೆ ಋಣಿಯಾಗಿರೋಣ
| ಧಮೇಂದ್ರ ಕುಮಾರ್
ಅಕ್ಷರಶಃ ಮುಳ್ಳಿನ ಹಾದಿಯಲ್ಲಿ ನಡೆದು ಜನರ ಕಣ್ಣೀರೊರೆಸುವಲ್ಲಿ ಮೈಸೂರು ಮಹಾರಾಜರು ಯಶಸ್ವಿಯಾದರು. ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು 1831ರಂದು ದಸರಾ ದರ್ಬಾರಿನಲ್ಲಿ ಕುಳಿತಿದ್ದಾಗ, ‘ನಿಮ್ಮ ಆಡಳಿತ ಇಂದು ಕೊನೆಯಾಗುತ್ತದೆ’ ಎಂದು ಬ್ರಿಟಿಷ್ ಪ್ರತಿನಿಧಿ ಪತ್ರ ತಂದು ನೀಡಿದ. ಮಹಾರಾಜರು ಒಂದೂ ಮಾತನಾಡದೆ ಮೌನವಾಗಿ ಒಳನಡೆಯುತ್ತಾರೆ. ಅಂದಿನಿಂದ 50 ವರ್ಷದವರೆಗೆ, ಅಂದರೆ 1880ವರೆಗೆ ಸಂಸ್ಥಾನ ಬ್ರಿಟಿಷರ ಅಧೀನದಲ್ಲಿತ್ತು. ಈ ಐವತ್ತು ವರ್ಷ ನಿರಂತರವಾಗಿ ಬ್ರಿಟಿಷರ ಜತೆಗೆ ಪತ್ರ ವ್ಯವಹಾರ, ಚರ್ಚೆಗಳನ್ನು ನಡೆಸಿ ಸಂಪೂರ್ಣ ಅಹಿಂಸಾತ್ಮಕವಾಗಿ ಸಂಸ್ಥಾನವನ್ನು ಹಿಂಪಡೆಯಲಾಯಿತು. ಭಾರತದಲ್ಲಿ ಅಹಿಂಸೆಯಿಂದ ಬ್ರಿಟಿಷರನ್ನು ಗೆದ್ದ ಮೊದಲ ಉದಾಹರಣೆ ಇದು. ಈ 50 ವರ್ಷಗಳಲ್ಲಿ ಅವರು ಪಟ್ಟ ಪಾಡೇ 10 ಗ್ರಂಥಗಳಾಗುತ್ತವೆ. ಮಹಾರಾಜರು ಪ್ರಜೆಗಳನ್ನು ಯಾವ ರೀತಿ ನಡೆಸಿಕೊಂಡಿದ್ದರು ಎಂಬುದಕ್ಕೆ ಅನೇಕ ನಿದರ್ಶನಗಳಿವೆ. ಮಹಾರಾಜರಿಗೆ ಅಧಿಕಾರ ಕೈತಪ್ಪಿದಾಗ ತಾಯಮ್ಮ ಎಂಬ ನೃತ್ಯಗಾರ್ತಿ, ಮುಮ್ಮಡಿ ಅವರಿಗೆ ಮತ್ತೆ ಅಧಿಕಾರ ಸಿಗುವವರೆಗೆ ಗೆಜ್ಜೆ ಕಟ್ಟುವುದಿಲ್ಲ ಎಂದು ಶಪಥ ಮಾಡಿದ್ದಳು. ಸಂಸ್ಥಾನ ಹಿಂದಿರುಗುವ ವೇಳೆಗೆ ಆ ತಾಯಿಗೆ ವಯಸ್ಸಾಗಿ ಮುದುಕಿಯಾಗಿರುತ್ತಾಳೆ.
10ನೇ ಚಾಮರಾಜ ಒಡೆಯರ್ ಅಧಿಕಾರ ಸ್ವೀಕರಿಸುತ್ತಿದ್ದಾರೆ ಎಂದು ಆಕೆಯ ಮೊಮ್ಮಗ ಬಂದು ತಿಳಿಸುತ್ತಾನೆ. ತನ್ನೆಲ್ಲ ಶಕ್ತಿಯನ್ನು ಒಟ್ಟುಗೂಡಿಸಿಕೊಂಡ ಆಕೆ ಥಟ್ಟನೆ ಎದ್ದು ಗೆಜ್ಜೆ ಕಟ್ಟಿ ನಾಟ್ಯ ಮಾಡುತ್ತಲೇ ಕುಸಿದು ಬಿದ್ದು ನಿಧನಳಾಗುತ್ತಾಳೆ. ಮಹಾರಾಜರು ನಮ್ಮ ತಂದೆ ಎನ್ನುವಷ್ಟು ಭಯ ಭಕ್ತಿ ಮೈಸೂರಿನ ನಾಗರಿಕರಿಗೆ ಇದೆ. ದೇಶದ ವಿವಿಧೆಡೆ ಸಂಸ್ಥಾನಗಳಿದ್ದ ಊರುಗಳಿಗೆ ಮೈಸೂರನ್ನು ಹೋಲಿಸಿದರೆ ಮಹಾರಾಜರ ಪ್ರಾಮುಖ್ಯತೆ ತಿಳಿಯುತ್ತದೆ. ದೇಶದಲ್ಲೆಲ್ಲೂ ಒಂದೂ ಕೈಗಾರಿಕೆ ಇಲ್ಲದಿದ್ದಾಗ ಎಚ್ಎಎಲ್ನಂತಹ ಕಾರ್ಖಾನೆ ಸ್ಥಾಪಿಸಿದವರು ಮಹಾರಾಜರು. ರೈತರನ್ನು ಕರೆಸಿ ಉಚಿತವಾಗಿ ಜಮೀನು ನೀಡಿದರು. ಮೊದಲು ಆಹಾರ ಉತ್ಪಾದನೆ ಮಾಡಿ ಜನರಿಗೆ ಊಟ ಹಾಕಿ, ನಂತರ ತೆರಿಗೆ ನೀಡಿ ಎಂದವರು ಮಹಾರಾಜರು. ಆದರೆ ನಮ್ಮಲ್ಲಿ ಅನೇಕ ಕೃತಘ್ನರಿದ್ದಾರೆ. ಅಧಿಕಾರ ಹೋದ ನಂತರ ನಡೆದ ಮೊದಲ ಸಭೆಯಲ್ಲಿ ಮಹಾರಾಜರಿಗೆ ವಿಶೇಷ ಕುರ್ಚಿ ಬೇಕಿಲ್ಲ ಎಂದು ಕೆಲವರು ಆಕ್ಷೇಪಿಸಿದರು. ಒಂದೂ ಮಾತಾಡದೆ ಮಹಾರಾಜರು ಸಾಮಾನ್ಯರಂತೆ ಕುಳಿತರು.