

ಕಂಪ್ಲಿ: ತಾಲೂಕಿನ ಮೆಟ್ರಿ ಗ್ರಾಪಂ ವ್ಯಾಪ್ತಿಯ ಉಪ್ಪಾರಹಳ್ಳಿಯ ಜನತೆ ನೆಟ್‌ವರ್ಕ್ ಸಿಗದೆ ಮೊಬೈಲ್‌ನಲ್ಲಿ ಮಾತನಾಡಲು ಪರದಾಡುತ್ತಿದ್ದಾರೆ.
ಮೊಬೈಲ್‌ನಲ್ಲಿ ಮಾತನಾಡ ಬಯಸುವವರು ಗ್ರಾಮ ಬಿಟ್ಟು ಮೂರು ಕಿ.ಮೀ.ನಷ್ಟು ದೂರ ತೆರಳಬೇಕಿದೆ. ಡಿಜಿಟಲ್ ತಂತ್ರಜ್ಞಾನವನ್ನು ಬಳಸುವಲ್ಲಿ ಜಾಗತಿಕ ಮಟ್ಟದಲ್ಲಿ ದೇಶ ಮುಂಚೂಣಿಯತ್ತ ದಾಪುಗಾಲು ಹಾಕುವ ಈ ದಿನಗಳಲ್ಲಿ ಉಪ್ಪಾರಹಳ್ಳಿ ಗ್ರಾಮಕ್ಕೆ ನೆಟ್‌ವರ್ಕ್ ಸೇವೆ ದೊರಕದಿರುವುದು ವಿಪರ್ಯಾಸ.
ನೆರೆ ಗ್ರಾಮಗಳಾದ ಮೆಟ್ರಿ, ಚಿನ್ನಾಪುರ ಗ್ರಾಮಗಳಿಗೆ ಇರುವ ಮೊಬೈಲ್ ಸಿಗ್ನಲ್ ನೆಟ್‌ವರ್ಕ್ ಸೌಲಭ್ಯ ಉಪ್ಪಾರಹಳ್ಳಿಗೆ ಇಲ್ಲ. ಹೀಗಾಗಿ ಯಾರಾದರೂ ಸತ್ತರೆ, ಶುಭ ಸಮಾಚಾರ ಸೇರಿ ಮೊಬೈಲ್ ಮೂಲಕ ವಿಷಯ ತಿಳಿಸಲು ಗ್ರಾಮ ಬಿಟ್ಟು ಹೊರ ಹೋಗಬೇಕಿದೆ. ಮೂರು ಕಿ.ಮೀ.ಅಂತರದಲ್ಲಿನ ಮೆಟ್ರಿ, ಚಿನ್ನಾಪುರ ಗ್ರಾಮಗಳಿಗೆ ಬಂದೇ ಮೊಬೈಲ್ ಬಳಸಬೇಕಿದೆ. ಪಡಿತರ ಪಡೆದುಕೊಳ್ಳಲು ಉಪ್ಪಾರಹಳ್ಳಿ ಗ್ರಾಮಸ್ಥರು ಚಿನ್ನಾಪುರಕ್ಕೆ ಬಂದು ಅಲ್ಲಿನ ನೆಟ್‌ವರ್ಕ್ ಬಳಸಿ ಎಂಟ್ರಿ ಮಾಡಿಸಿ ಪಡಿತರ ಪಡೆದುಕೊಳ್ಳುವ ಸ್ಥಿತಿಯಿದೆ.
ಸರ್ಕಾರಿ ಶಾಲೆಗೆ ಗ್ರಾಪಂ ಬಿಎಸ್ಸೆನ್ನೆಲ್ ನೆಟ್‌ವರ್ಕ್ ಕೊಡಿಸಿದ್ದು ಬಿಟ್ಟರೆ ಗ್ರಾಮದಲ್ಲಿ ಮೊಬೈಲ್ ನೆಟ್‌ವರ್ಕ್ ಇಲ್ಲ. ಈಚೆಗೆ ಖಾಸಗಿ ನೆಟ್‌ವರ್ಕ್ ಸೌಲಭ್ಯ ಕಲ್ಪಿಸಿದ್ದರೂ ಗುಣಮಟ್ಟದ ಕೊರತೆಯಿಂದ ಪರದಾಡುವುದು ತಪ್ಪಿಲ್ಲ. ನೆಟ್‌ವರ್ಕ್‌ಗಾಗಿ ಸಂಬಂಧಿಸಿದವರಿಗೆಲ್ಲರಿಗೂ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಗ್ರಾಮಕ್ಕೆ ಬಿಎಸ್ಸೆನ್ನೆಲ್ ನೆಟ್‌ವರ್ಕ್ ಸೌಲಭ್ಯ ಕಲ್ಪಿಸುವಂತೆ ಗ್ರಾಪಂ ಸದಸ್ಯರಾದ ಎಚ್.ಕುಮಾರಸ್ವಾಮಿ, ದೇವೇಂದ್ರಪ್ಪ, ವಿದ್ಯಾರ್ಥಿಗಳಾದ ಹೊನ್ನೂರಮ್ಮ, ಅನಸೂಯ, ತಿಮ್ಮಪ್ಪ, ಗ್ರಾಮಸ್ಥರಾದ ಪರಶುರಾಮ, ಪಂಪಾಪತಿ, ದೇವರಮನೆ ವೀರೇಶ್ ಇತರರು ಒತ್ತಾಯಿಸಿದ್ದಾರೆ.