

ಚಳ್ಳಕೆರೆ: ತಾಲೂಕಿನ ನನ್ನಿವಾಳ ಗ್ರಾಪಂ ವ್ಯಾಪ್ತಿಯಲ್ಲಿ ಬುಡಕಟ್ಟು ಪದ್ಧತಿ ಹೆಚ್ಚಾಗಿದೆ. 36 ಹಟ್ಟಿಗಳ ಪೈಕಿ ನನ್ನಿವಾಳ, ಗೊರ‌್ಲಕಟ್ಟೆ ಮತ್ತು ಇಮಾಂಪುರ ಕಂದಾಯ ಗ್ರಾಮಗಳಾಗಿದ್ದರೆ, ಉಳಿದ 33 ಹಟ್ಟಿಗಳು ಕಂದಾಯ ರಹಿತವಾಗಿವೆ.
ಗೊಲ್ಲರಹಟ್ಟಿಯಲ್ಲಿ ಸೂಕ್ತ ರಸ್ತೆ ವ್ಯವಸ್ಥೆ ಇಲ್ಲದೆ, ಮಳೆಯ ನೀರಿಗೆ ಕೆಸರು ಗದ್ದೆಯಂತಾಗುತ್ತಿತ್ತು. ದುರಸ್ತಿಗೆ ಇಲ್ಲಿನ ನಿವಾಸಿಗಳು ಸಾಕಷ್ಟು ಬಾರಿ ಮನವಿ ಮಾಡಿಕೊಂಡಿದ್ದರು.
ಕೊನೆಗೂ ಎಚ್ಚೆತ್ತುಕೊಂಡ ಗ್ರಾಪಂ ಅಧಿಕಾರಿಗಳು, ಶುಕ್ರವಾರ, ರಸ್ತೆ ಬದಿಯ ಜಾಲಿಗಿಡಗಳನ್ನು ತೆರವುಗೊಳಿಸಿ, ಮಣ್ಣು ಹಾಕಿಸಿ ಬಿಗಿಗೊಳಿಸಿದ್ದಾರೆ. ಗೊಲ್ಲರಹಟ್ಟಿಯಿಂದ ರಾಮಜೋಗಿಹಳ್ಳಿ ಅಡ್ಡ ರಸ್ತೆಯವರೆಗೆ ರಸ್ತೆ ಸರಿಪಡಿಸಲಾಗಿದೆ.
ಗ್ರಾಪಂ ಅಧ್ಯಕ್ಷೆ ವೈ.ಪಾರಿಜಾತಾ ಶಿವಣ್ಣ, ಉಪಾಧ್ಯಕ್ಷೆ ಪ್ರಭಾವತಿ ಚಿನ್ನಯ್ಯ, ಸದಸ್ಯರಾದ ಈರಮ್ಮ, ಓಬಣ್ಣ, ಚಿನ್ನಯ್ಯ, ದೊರೆ ಅಪ್ಪಣ್ಣ ಇತರರಿದ್ದರು.
ಹಟ್ಟಿ ನಿವಾಸಿಗಳು ನಿವೇಶನ, ಮನೆ ಮತ್ತು ಕುಡಿಯುವ ನೀರಿನ ಕಂದಾಯ ಕಟ್ಟುವುದಿಲ್ಲ. ಜಮೀನುಗಳಲ್ಲಿ ಮನೆ ಕಟ್ಟಿಕೊಂಡಿದ್ದೇವೆ, ಕಂದಾಯ ಕಟ್ಟುವುದಿಲ್ಲ ಎನ್ನುತ್ತಾರೆ. ಹಟ್ಟಿಗಳಿಗೆ ಒಳಪಟ್ಟಿರುವ 80 ಕೊಳವೆಬಾವಿ, 18 ಜಾನುವಾರುಗಳ ಕುಡಿಯುವ ನೀರಿನ ತೊಟ್ಟಿ, ಬೀದಿ ದೀಪಗಳ ನಿರ್ವಹಣೆ ಸಕಾಲಕ್ಕೆ ಸರಿಯಾಗಿ ಮಾಡಲಾಗುತ್ತಿದೆ. ಮೂಲ ಸೌಕರ್ಯದ ಬಗ್ಗೆ ಶೀಘ್ರ ಕ್ರಮವಹಿಸಲಾಗುವುದು.ಎನ್.ಪಾಲಯ್ಯ, ಪಿಡಿಒ