ಚರ್ಚ್​ ಸ್ಟ್ರೀಟ್​ನಲ್ಲಿ ಚಹಾ ಸವಿದ ನೆದರ್​ಲ್ಯಾಂಡ್​ ಪ್ರಧಾನಿ; ಯುಪಿಐ ಮೂಲಕ ಹಣ ಪಾವತಿ

Nedarland PM
Published on

ಬೆಂಗಳೂರು: ಭಾರತ ಹಾಗೂ ನೆದರ್​ಲ್ಯಾಂಡ್ಸ್​ ರಾಷ್ಟ್ರಗಳು ಪ್ರಜಾಪ್ರಭುತ್ವ ವ್ಯವಸ್ಥೆಗೆ ತೆರೆದುಕೊಂಡು 75 ವರ್ಷಗಳಾಗಿರುವ ಸಂದರ್ಭದ ಸವಿನೆನಪಿಗಾಗಿ ಎರಡು ದಿನಗಳ ಬೆಂಗಳೂರು ಪ್ರವಾಸದಲ್ಲಿರುವ ನೆದರ್​ಲ್ಯಾಂಡ್​ ಪ್ರಧಾನಿ ಮಾರ್ಕ್​ ರುಟ್ಟೆ ನಗರದ ಚರ್ಚ್​ಸ್ಟ್ರೀಟ್​ನಲ್ಲಿ ಸೋಮವಾರ ಸಂಚರಿಸಿ ಜನರೊಂದಿಗೆ ಬೆರೆತರು.

ಬ್ರಿಗೇಡ್​ ರಸ್ತೆಯಿಂದ ಚರ್ಚ್​ ಸ್ಟ್ರೀಟ್​ನ ಚಾಯ್​ಪಾಯಿಂಟ್​ಗೆ ಕಾಲ್ನಡಿಗೆಯಲ್ಲಿ ಆಗಮಿಸಿ, ಮಸಾಲಾ ಚಹ ಖರೀದಿಸಿ ರುಚಿ ಸವಿದರು. ಬಳಿಕ ಯುಪಿಐ ಮೂಲಕ ಹಣ ಪಾವತಿಸಿದರು. ನಂತರ ತಮ್ಮ ಸಂಗಡಿಗರೊಂದಿಗೆ ಲೋಕಾಭಿರಾಮವಾಗಿ ಮಾತನಾಡುತ್ತ, ಚರ್ಚ್​ ಸ್ಟ್ರೀಟಿನ ಬೇರಿ ಸರ್ಕಲ್​ ವರೆಗೆ ನಡೆದುಕೊಂಡೇ ಬಂದರು. ತಶಿಲಾ ಇನ್​ಸ್ಟಿಟ್ಯೂಷನ್​ ಗೋಡೆಯ ಮೇಲೆ ಭಾರತ ಹಾಗೂ ನೆದರ್​ಲ್ಯಾಂಡ್​ ದ್ಯೋತಕವಾಗಿ ಬರೆಯಲಾಗಿರುವ ಸಿಂಹದ ವರ್ಣಚಿತ್ರ ವೀಸಿ ಸಂತಸ ವ್ಯಕ್ತಪಡಿಸಿದರು.

ಸಾರ್ವಜನಿಕರೊಂದಿಗೆ ಸೆಲ್ಫಿ

ಸರಳ ಭದ್ರತೆಯ ನಡುವೆ ಯಾವುದೇ ಹೆಚ್ಚು ಅಂತರಗಳನ್ನು ಇಟ್ಟುಕೊಳ್ಳದೇ ಸಾರ್ವಜನಿಕರೊಂದಿಗೆ ಬೆರೆತ ನೆದರ್​ಲ್ಯಾಂಡ್​ ಪ್ರಧಾನಿ, ಜನರ ಬಳಿ ತೆರಳಿ ಕೈ ಕುಲುಕಿದರು. ಇದೇ ವೇಳೆ ಚಿಕ್ಕ ಮಗುವೊಂದನ್ನು ಕಂಡು ವಿಶೇಷ ಪ್ರೀತಿ ವ್ಯಕ್ತಪಡಿಸಿದರು. ತಮ್ಮೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಬಂದ ಮಂದಿಯೊಂದಿಗೆ ಆತ್ಮೀಯವಾಗಿ ಬೆರೆತರು. ತಾವೇ ಖುದ್ದಾಗಿ ಜನರ ಮೊಬೈಲುಗಳಲ್ಲಿ ಸೆಲ್ಫಿ ತೆಗೆದುಕೊಟ್ಟರು. ಈ ವೇಳೆ ಶಾಸಕ ಎನ್​.ಎ.ಹ್ಯಾರಿಸ್​ ಮತ್ತಿತರರಿದ್ದರು.

ಭಾರತದ ಡಿಜಿಟಲ್​ ಪಾವತಿಯ ಯುಪಿಐ ವಿಧಾನವು ಅತ್ಯಂತ ಸರಳ ಹಾಗೂ ಸುಲಭವಾಗಿದೆ. ಇಲ್ಲಿನ ಚರ್ಚ್​ಸ್ಟ್ರೀಟಿನಲ್ಲಿ ಸಂಚರಿಸಿ ಚಹಾ ಸವಿದಿರುವುದು ಸಂತಸ ತಂದಿದೆ. ಕೆಳ ಮತ್ತು ಮಧ್ಯಮ ಆದಾಯ ಹೊಂದಿರುವ ರಾಷ್ಟ್ರಗಳ ಸಾಲ ಯೋಜನೆ ಕುರಿತು ಸೂಕ್ತ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಚರ್ಚಿಸಿ ಹಂತ ಹಂತವಾಗಿ ದೀರ್ಘಾವಧಿಯ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುವುದು. ಜಿ20ಯ ನವದೆಹಲಿ ಘೋಷಣೆಗೆ ಸಂಪೂರ್ಣ ಸಹಮತವಿದೆ. ಕರ್ನಾಟಕದ ಭೇಟಿ ಸಂದರ್ಭದಲ್ಲಿ ಇಲ್ಲಿನ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ತೋರಿದ ಕಾಳಜಿ ಮರೆಯಲಾದ್ದು ಎಂದು ನೆದರ್​ಲ್ಯಾಂಡ್​ ಪ್ರಧಾನಿ ಮಾರ್ಕ್​ ರುಟ್ಟೆ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net