

ಸೋಮವಾರಪೇಟೆ: ಸರ್ಕಾರಿ ನಿವೃತ್ತ ನೌಕರರ ಸಂಘದ ವತಿಯಿಂದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 127ನೇ ಜನ್ಮ ದಿನವನ್ನು ಯಡೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಆಚರಿಸಲಾಯಿತು.
ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿ.ಕೆ.ಮಲ್ಲಪ್ಪ ಮಾತನಾಡಿ, ದೇಶದ ಸ್ವಾತಂತ್ರ್ಯಕ್ಕಾಗಿ ಬಲಿದಾನವಾದ ವಹಾನ್ ಚೇತನ, ದೇಶ ಕಂಡ ಅಪ್ರತಿಮ ವೀರ ಸೇನಾನಿ ಸುಭಾಷ್ ಚಂದ್ರ ಬೋಸ್ ಅವರಾಗಿದ್ದಾರೆ. ಇಂದಿಗೂ ಯುವಜನರ ಪ್ರೇರಣೆಯಾಗಿದ್ದು, ಅವರ ಆದರ್ಶಗಳನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕುಮಾರಸ್ವಾಮಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಸಂಘದ ಗೌರವ ಅಧ್ಯಕ್ಷ ಹಾಲೇಬೇಲೂರು ನಿರ್ವಾಣಿ ಶೆಟ್ಟಿ, ಉಪಾಧ್ಯಕ್ಷ ಕುಟ್ಟಪ್ಪ, ಹಿರಿಯ ಸಲಹೆಗಾರ ವೀರಪ್ಪ, ನಿರ್ದೇಶಕ ಮಾಚಯ್ಯ, ಮುಖ್ಯಶಿಕ್ಷಕಿ ಎಲ್.ಎಂ.ಪ್ರೇಮಾ ಇದ್ದರು.
ವಿದ್ಯಾರ್ಥಿಗಳಿಗೆ ಮಕ್ಕಳಿಂದ ನೇತಾಜಿ ಬಗ್ಗೆ ಭಾಷಣ ಸ್ಪರ್ಧೆ, ಚಿತ್ರಕಲೆ, ಭಾವಗೀತೆ, ನೃತ್ಯ ಏರ್ಪಡಿಸಲಾಗಿತ್ತು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು.