

ಬಳ್ಳಾರಿ: ನೇತಾಜಿ ಆವರ ಹೋರಾಟ ಮತ್ತು ವಿಚಾರ ಇಂದಿಗೂ ಪ್ರಸ್ತುತ. ಸಾಮ್ರಾಜ್ಯಶಾಹಿ ಬ್ರಿಟಿಷರ ವಿರುದ್ಧ ಸಶಸ್ತ್ರ ಸಮರಸಾರಿ ಅದಕ್ಕಾಗಿ ಸೈನ್ಯವನ್ನು ಸಜ್ಜುಗೊಳಿಸಿ, ಶೋಷಣೆ ರಹಿತ ಭವ್ಯ ಭಾರತದ ಕನಸನ್ನು ಕಂಡಿದ್ದರು ಎಂದು ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ಜಿಲ್ಲಾಧ್ಯಕ್ಷೆ ಈಶ್ವರಿ ಹೇಳಿದರು.
ನಗರದ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯ ಜಿಲ್ಲಾ ಕಚೇರಿಯಲ್ಲಿ ಮಂಗಳವಾರ ನಡೆದ ಸುಭಾಷ್‌ಚಂದ್ರ ಬೋಸ್ ಅವರ 127ನೇ ಜನ್ಮ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಹಿಳೆಯರ ಘನತೆ ಮತ್ತು ಐತಿಹಾಸಿಕ ಪಾತ್ರವನ್ನು ಎತ್ತಿ ಹಿಡಿದ ಕೀರ್ತಿ ನೇತಾಜಿ ಅವರಿಗೆ ಸಲ್ಲುತ್ತದೆ. ಸ್ವಾತಂತ್ರ್ಯ ಸಂಗ್ರಾಮದ ಸಂಧಾನಾತೀತ ಪ್ರಜ್ವಲ ತಾರೆ ನೇತಾಜಿ ಅವರು. ನೈಜ ಧರ್ಮ ನಿರಪೇಕ್ಷತೆ, ಪ್ರಜಾತಾಂತ್ರಿಕ ಮೌಲ್ಯಗಳು, ಮಹಿಳೆಯರಿಗೆ ಸಮಾನ ಸ್ಥಾನಮಾನ ನೆಲೆಗೊಂಡಿರುವ ಸಮಾಜವಾದಿ ಭಾರತ ನಿರ್ಮಾಣದ ಕನಸು ಕಂಡವರು ಎಂದರು.
ಹೆಣ್ಣು ಮಕ್ಕಳಲ್ಲಿ ಸಂಪೂರ್ಣ ಭರವಸೆಯನ್ನು ಇಟ್ಟಿದ್ದ ನೇತಾಜಿ ಅಂತಿಮ ಸ್ವಾತಂತ್ರ್ಯ ಸಮರದಲ್ಲಿ ನಮಗೆ ಒಬ್ಬ ಝಾನ್ಸಿ ರಾಣಿ ಇದ್ದರೆ ಸಾಲದು ಸಹಸ್ರ ಸಹಸ್ರ ಝಾನ್ಸಿ ರಾಣಿಯರು ಬೇಕಾಗಿದ್ದಾರೆ ಎಂದು ಕರೆ ನೀಡಿ ಸಾವಿರಾರೂ ಸಂಖ್ಯೆಯಲ್ಲಿ ಹೆಣ್ಣು ಮಕ್ಕಳನ್ನು ಸೈನ್ಯಕ್ಕೆ ಸೇರಿಸಿಕೊಂಡು ಅವರೂ ಕೂಡ ಪುರುಷರಂತೆಯೇ ಯುದ್ಧಭೂಮಿಯಲ್ಲಿ ಸರಿಸಮಾನವಾಗಿ ಹೋರಾಡಬಲ್ಲರು ಎಂಬುದನ್ನು ಜಗತ್ತಿಗೆ ಸಾಬೀತು ಪಡಿಸಿದರು.
ಶಿಕ್ಷಣ, ಆರೋಗ್ಯ, ಉದ್ಯೋಗ, ಭದ್ರತೆ ಖಾತ್ರಿಪಡಿಸುವ ಸಮಾಜವಾದಿ ಭಾರತದ ಕನಸನ್ನು ಅವರು ಕಂಡಿದ್ದರು. ಆದರೆ ಅವರು ಕಂಡಿದ್ದ ಕನಸು ಇನ್ನೂ ಕನಸಾಗಿಯೇ ಉಳಿದಿದೆ. ಈ ನಿಟ್ಟಿನಲ್ಲಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯು ನೇತಾಜಿ ಅವರ ವಿಚಾರಗಳನ್ನು ಎಲ್ಲ ಸ್ತರದ ಹೆಣ್ಣು ಮಕ್ಕಳನ್ನು ಒಟ್ಟಿಗೆ ತೆಗೆದುಕೊಂಡು ಹೋಗುತ್ತಿದೆ. ಎಲ್ಲರಲ್ಲೂ ಜಾಗೃತಿ ಮೂಡಿಸಿ ಹೊಸ ಸಮಾಜವನ್ನು ತರಲು ಮಹಿಳೆಯರನ್ನು ಸಜ್ಜುಗೊಳಿಸಲಾಗುತ್ತಿದೆ ಎಂದು ತಿಳಿಸಿದರು.
ಎಐಎಂಎಸ್‌ಎಸ್‌ನ ಜಿಲ್ಲಾ ಜಂಟಿ ಕಾರ್ಯದರ್ಶಿ ಗಿರಿಜಾ, ಸಂಘಟನೆಯ ಪದಾಧಿಕಾರಿಗಳಾದ ವಿಜಯಲಕ್ಷ್ಮೀ, ವಿದ್ಯಾ, ಅಭಿಲಾಷ ಇನ್ನಿತರರಿದ್ದರು.