ನೆಟ್, ಸೆಟ್‌ನ 77 ಪರೀಕ್ಷೆ ಪಾಸಾದ ಶಾಲಾ ಶಿಕ್ಷಕ!

KLE
ಕೆಎಲ್‌ಇ ಶತಮಾನೋತ್ಸವ ಸ್ಮಾರಕ ಸಭಾಂಗಣದಲ್ಲಿ ಗುರುವಾರ ನಡೆದ ಕೆಎಲ್‌ಇ ಸಂಸ್ಥೆಯ 109ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಸಾಧಕ ಶಿಕ್ಷಕ ದಾನಯ್ಯ ಕವಟಗಿಮಠ ಅವರನ್ನು ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಸನ್ಮಾನಿಸಿದರು.
Published on

ಬೆಳಗಾವಿ: ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಶೇ.37, ಶೇ.36ರಷ್ಟು ಮಾತ್ರ ಅಂಕ ಪಡೆದಿದ್ದ ಶಾಲಾ ಶಿಕ್ಷಕರೊಬ್ಬರು, ಮುಕ್ತ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದು ಸ್ವಂತ ಓದಿನ ಬಲದಿಂದ ರಾಷ್ಟ್ರಮಟ್ಟದ ಪ್ರಾಧ್ಯಾಪಕರ 4 ಅರ್ಹತಾ ಪರೀಕ್ಷೆ (ನೆಟ್), ರಾಜ್ಯಮಟ್ಟದ ಉಪನ್ಯಾಸಕರ 36 ಅರ್ಹತಾ ಪರೀಕ್ಷೆ (ಸೆಟ್) ಹಾಗೂ ಶಿಕ್ಷಕರ 36 ಅರ್ಹತಾ ಪರೀಕ್ಷೆ (ಟಿಇಟಿ) ಸೇರಿ 77 ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ಪ್ರತಿಭೆಯನ್ನು ಓರೆಗೆ ಹಚ್ಚಿದ್ದಾರೆ. ಮಹಾರಾಷ್ಟ್ರದ ಅಕ್ಕಲಕೋಟ ನಗರದಲ್ಲಿ ಕೆಎಲ್‌ಇ ಸಂಸ್ಥೆಯ ಮಂಗರೋಳೆ ಗ್ರಾಮದ ದಾನಯ್ಯ ಕವಟಗಿಮಠ ಅವರೇ ನಿರೀಕ್ಷೆಗೂ ಮೀರಿ ಸಾಧನೆ ಮಾಡಿದವರು. ಕನ್ನಡ ಪ್ರಾಥಮಿಕ ಶಾಲೆಯ ಕನ್ನಡ ಭಾಷಾ ಶಿಕ್ಷಕ. ಸಾಧಕ ಶಿಕ್ಷಕ ದಾನಯ್ಯ ಕವಟಗಿಮಠ ಅವರನ್ನು ಗುರುವಾರ ಬೆಳಗಾವಿಯಲ್ಲಿ ನಡೆದ ಕೆಎಲ್‌ಇ ಸಂಸ್ಥೆಯ 109ನೇ ಸಂಸ್ಥಾಪನೆ ದಿನಾಚರಣೆಯಲ್ಲಿ ಸನ್ಮಾನಿಸಿದ ಕೆಎಲ್‌ಇ ಸಂಸ್ಥೆ ಈ ಮೂಲಕ ಶಿಕ್ಷಕ ವರ್ಗದ ಅಭಿಮಾನವನ್ನು ಎತ್ತಿ ಹಿಡಿದು ಗಮನ ಸೆಳೆಯಿತು.

ಕಹಿ ಮರೆಯಲು ಓದಿನ ಬೆನ್ನು ಹತ್ತಿದವರು: 10ನೇ ತರಗತಿ ಮತ್ತು ಪಿಯುಸಿಯಲ್ಲಿ ಕನಿಷ್ಠ ಅಂಕ ಗಳಿಸಿದ್ದ ದಾನಯ್ಯ, ಜೀವನದಲ್ಲಾದ ಕಹಿ ಘಟನೆಂದ ಹೊರ ಬರುವುದಕ್ಕೆ ಓದಿನ ಬೆನ್ನು ಹತ್ತಿದವರು. ಜತೆಗೆ ಪುಣೆಯಲ್ಲಿ ಆಯೋಜಿಸಿದ್ದ ಶಿಕ್ಷಕರ ತರಬೇತಿಯಲ್ಲಿ ‘ಸಾಮಾನ್ಯ ಟೀಚರ್ ಆಗಬಾರದು, ಪ್ರೇರಣೆಯಾಗುವ ಟೀಚರ್ ಆಗಬೇಕು’ ಎಂಬ ಗುರುರಾಜ ಕರ್ಜಗಿ ಅವರ ಮಾತುಗಳು ಇವರನ್ನು ಪ್ರಭಾವಿಸಿದ್ದವು. ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದರೂ ರಾಜ್ಯಮಟ್ಟದ ಉಪನ್ಯಾಸಕರ ಅರ್ಹತಾ ಪರೀಕ್ಷೆ ಬರೆಯಬೇಕು ಎಂಬ ಉದ್ದೇಶದಿಂದ ಮುಕ್ತ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದರು.

ಕರ್ನಾಟಕದಲ್ಲಿಯೇ ಇಂಗ್ಲಿಷ್, ಭಾಷಾಶಾಸ್ತ್ರ, ಮಹಿಳಾ ಅಧ್ಯಯನ, ಜನಪದ ಸಾಹಿತ್ಯ ಮತ್ತು ಶಿಕ್ಷಣ ವಿಷಯದಲ್ಲಿ ಸೆಟ್ ಪರೀಕ್ಷೆಗಳನ್ನು ಪಾಸ್ ಮಾಡಿದ್ದಾರೆ. ಮಹಾರಾಷ್ಟ್ರದಲ್ಲಿ 2018ರಲ್ಲಿ ಆ ರಾಜ್ಯದ ಸೆಟ್ ಪರೀಕ್ಷೆ ಬರೆದು ರಾಜ್ಯಕ್ಕೇ ಪ್ರಥಮ ರ‌್ಯಾಂಕ್ ಗಳಿಸಿದ್ದು ಇನ್ನೂ ವಿಶೇಷ. ಅಖಿಲ ಭಾರತ ಮಟ್ಟದ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಗಳಾದ ಯುಜಿಸಿ ನೆಟ್, ಸಿಬಿಎಸ್‌ಇ - ನೆಟ್ ಸೇರಿ ನಾಲ್ಕು ಬಗೆಯ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿದ್ದಾರೆ. ಜತೆಗೆ ವಿವಿಧ ರಾಜ್ಯಗಳ ಟಿಇಟಿ ಪರೀಕ್ಷೆಗಳಲ್ಲಿಯೂ ಉತ್ತೀರ್ಣರಾಗಿದ್ದಾರೆ. ಇವರ ಸಾಧನೆಗಳನ್ನು ಗುರುತಿಸಿ ಯೂನಿಕ್ ವರ್ಲ್ಡ್ ರೆಕಾರ್ಡ್, ವರ್ಲ್ಡ್ ರೆಕಾರ್ಡ್ ಇಂಡಿಯಾ, ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್, ರಕಾರ್ಡ್ ಹೋಲ್ಡರ್ಸ್ ರಿಪಬ್ಲಿಕ್ ಸಂಸ್ಥೆಗಳು ಪ್ರಮಾಣಪತ್ರ ನೀಡಿವೆ. ಇವರ ಮಾರ್ಗದರ್ಶನ ಪಡೆದ 802 ವಿದ್ಯಾರ್ಥಿಗಳೂ ಸೆಟ್, ನೆಟ್ ಪರೀಕ್ಷೆ ಪಾಸಾಗಿದ್ದರೆ. ದಾನಯ್ಯ ಅವರು ದೆಹಲಿಯ ಜೆ.ಎನ್. ವಿಶ್ವವಿದ್ಯಾಲಯಕ್ಕೂ ಹೋಗಿ ಉಪನ್ಯಾಸ ನೀಡಿ ಬಂದಿದ್ದಾರೆ. ದೇಶದ ಒಟ್ಟು 53 ವಿಶ್ವವಿದ್ಯಾಲಯಗಳು ಪರೀಕ್ಷಾ ವಿಷಯವಾಗಿ ದಾನಯ್ಯ ಕವಟಗಿಮಠ ಅವರನ್ನು ಕರೆಯಿಸಿ ವಿದ್ಯಾರ್ಥಿಗಳಿಗೆ ಉಪನ್ಯಾಸ ಕೊಡಿಸುತ್ತಿರುವುದು ಶಿಕ್ಷಕರು ಮತ್ತು ವಿದ್ಯಾರ್ಥಿಗಳಲ್ಲಿ ಹೊಸ ಉತ್ಸಾಹ ಮೂಡಿಸುತ್ತಿದೆ.

ಮಾರ್ಗದರ್ಶನಕ್ಕೆ ಸದಾ ಸಿದ್ಧ

ದೇಶದ ಹಲವು ಸೆಟ್ ಪರೀಕ್ಷೆಗಳಲ್ಲಿ ಪಾಸಾಗಿರುವ ಕನ್ನಡಿಗ ದಾನಯ್ಯ ಕವಟಗಿಮಠ ಅವರು ತಾವು ಗಳಿಸಿದ ಜ್ಞಾನವನ್ನು ಧಾರೆ ಎರೆಯಲು ಮುಂದಾಗಿದ್ದಾರೆ. ಪರೀಕ್ಷೆಯ ಸಾಮಾನ್ಯ ಪ್ರಶ್ನೆಗಳ ಬಗ್ಗೆ ಕಿರು ಪುಸ್ತಕಗಳನ್ನು ಹೊರ ತಂದಿದ್ದಾರೆ. ಅಲ್ಲದೇ, ‘ಘೆಉ ಖಉ ಉ ಚಿ ಈಎಓ ಖಜ್ಟಿ’ ಎಂಬ ಯೂಟ್ಯೂಬ್ ಚಾನೆಲ್ ಮೂಲಕ ಉಚಿತವಾಗಿ ಪರೀಕ್ಷೆ ಪಾಸಾಗುವ ವಿಧಾನಗಳನ್ನು ಹೇಳಿಕೊಡುತ್ತಿದ್ದಾರೆ. ವಿದ್ಯಾರ್ಥಿಗಳು ಮಾರ್ಗದರ್ಶನ, ಮಾಹಿತಿಗೆ ಮೊಬೈಲ್ ಸಂಖ್ಯೆ 73978 47907ಗೆ ಸಂಪರ್ಕಿಸುವಂತೆ ದಾನಯ್ಯ ಕವಟಗಿಮಠ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net