

ಶಿರಸಿ: ನಗರದ ದಿ ಶಿರಸಿ ಅರ್ಬನ್ ಸಹಕಾರಿ ಬ್ಯಾಂಕ್ ಪ್ರಸಕ್ತ ಆರ್ಥಿಕ ವರ್ಷದಲ್ಲಿ ತನ್ನ ಒಟ್ಟು ವ್ಯವಹಾರವನ್ನು 2361 ಕೋಟಿ ರೂ.ಗೆ ವೃದ್ಧಿಸಿ ನೂತನ ದಾಖಲೆ ನಿರ್ಮಿಸಿದೆ. 14.92 ಕೋಟಿ ರೂ. ನಿರ್ವಹಣಾ ಲಾಭ, 11.07 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ.
ಈ ಕುರಿತು ಪ್ರಕಟಣೆ ನೀಡಿರುವ ಬ್ಯಾಂಕ್ ಅಧ್ಯಕ್ಷ ಜಯದೇವ ನಿಲೇಕಣಿ, ಉಪಾಧ್ಯಕ್ಷ ಸಂತೋಷ ಪಂಡಿತ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆರತಿ ಶೆಟ್ಟರ್, 49ಸಾವಿರಕ್ಕಿಂತ ಹೆಚ್ಚು ಸದಸ್ಯರನ್ನು ಹೊಂದಿ, ಪ್ರಸಕ್ತ ಸಾಲಿನಲ್ಲಿ ವ್ಯವಹಾರವನ್ನು 2300 ಕೋಟಿ ರೂ. ದಾಟುವುದರೊಂದಿಗೆ ದಾಖಲೆಯನ್ನು ನಿರ್ಮಿಸಿದೆ.
ಬ್ಯಾಂಕಿನ ಠೇವಣಿಗಳು ಕಳೆದ ವರ್ಷದ 1244 ಕೋಟಿ ರೂ.ಗಳಿಂದ 1378 ಕೋಟಿ ರೂ.ಗೆ ಹಾಗೂ ಸಾಲ ಮತ್ತು ಮುಂಗಡಗಳು ಕಳೆದ ವರ್ಷದ 810 ಕೋಟಿ ರೂ.ಗಳಿಂದ ಪ್ರಸಕ್ತ ಆರ್ಥಿಕ ವರ್ಷಾಂತ್ಯಕ್ಕೆ 983 ಕೋಟಿ ರೂ.ಗಳಿಗೆ ಏರಿಕೆಯಾಗಿದೆ.
ಬ್ಯಾಂಕಿನ ಒಟ್ಟು ದುಡಿಯುವ ಬಂಡವಾಳ ಕಳೆದ ವರ್ಷದ 1453 ಕೋಟಿ ರೂ.ಗಳಿಂದ ಪ್ರಸಕ್ತ ಆರ್ಥಿಕ ವರ್ಷಾಂತ್ಯಕ್ಕೆ 152 ಕೋಟಿ ರೂ.ಗಳಷ್ಟು ಹೆಚ್ಚಳವಾಗಿ ಶೇ. 10.46ರಷ್ಟು ವೃದ್ಧಿಸಿದೆ. ಅಲ್ಲದೆ, ಒಟ್ಟು 486 ಕೋಟಿ ರೂ. ಗಳನ್ನು ರಾಜ್ಯ, ಕೇಂದ್ರ ಸರ್ಕಾರ ಮತ್ತು ವಿವಿಧ ಬ್ಯಾಂಕ್‌ಗಳಲ್ಲಿ ಗುಂತಾಯಿಸುವ ಮೂಲಕ ಆರ್ಥಿಕ ಸ್ಥಿರತೆಯನ್ನು ದೃಢೀಕರಿಸಿದೆ ಎಂದಿದ್ದಾರೆ.
ಷೇರು ಬಂಡವಾಳವನ್ನು ಕಳೆದ ವರ್ಷದ 34.12 ಕೋಟಿ ರೂ.ಗಳಿಂದ ಪ್ರಸಕ್ತ ಆರ್ಥಿಕ ವರ್ಷಾಂತ್ಯಕ್ಕೆ 41.32 ಕೋಟಿ ರೂ.ಗಳಿಗೆ ಹೆಚ್ಚಿಸುವ ಮೂಲಕ ಶೇ.21.10 ರಷ್ಟು ವೃದ್ಧಿಸಿದೆ. ಸ್ವಂತ ನಿಧಿಗಳನ್ನು 132.40 ಕೋಟಿ ರೂ.ಗಳಿಗೆ, ಸ್ವಂತ ಬಂಡವಾಳವನ್ನು 173.72 ಕೋಟಿ ರೂ.ಗಳಿಗೆ ವೃದ್ಧಿಸಿಕೊಂಡಿದೆ. ಬ್ಯಾಂಕು ನಿಕ್ಕಿ ಅನುತ್ಪಾದಕ ಆಸ್ತಿಗಳ ಪ್ರಮಾಣವನ್ನು ಸತತ 14 ವರ್ಷಗಳಿಂದ ಪ್ರತಿಶತ ಸೊನ್ನೆಗೆ ಕಾಯ್ದುಕೊಂಡು ಬಂದಿರುವುದು ಹೆಮ್ಮೆಯ ವಿಷಯವಾಗಿದೆ ಎಂದಿದ್ದಾರೆ.
ಬ್ಯಾಂಕು ತನ್ನ ಗ್ರಾಹಕರಿಗೆ ಹಲವು ಠೇವಣಿ ಹಾಗೂ ಸಾಲ ಮುಂಗಡಗಳನ್ನು ಅತ್ಯಾಕರ್ಷಕ ಬಡ್ಡಿದರದಲ್ಲಿ ನೀಡುತ್ತಿದೆ. ಹಿರಿಯ ನಾಗರಿಕರಿಗೆ ಶೇ.8.50 ಬಡ್ಡಿ ದರದಲ್ಲಿ ಸಮೃದ್ಧಿ ಠೇವು ಯೋಜನೆ ಪರಿಚಯಿಸಲಾಗಿದೆ. ಗೃಹ ಸಾಲ ಶೇ. 9.25, ಕಾರು ಸಾಲ ಶೇ. 9.50, ವ್ಯವಹಾರ, ಉದ್ದಿಮೆಗಳಿಗೆ ದುಡಿಯುವ ಬಂಡವಾಳಕ್ಕಾಗಿ ಶೇ.10.25 ಸ್ಪರ್ಧಾತ್ಮಕ ದರಗಳಲ್ಲಿ ನೀಡುತ್ತಿದೆ. ಎಲ್ಲ ಶಾಖೆಗಳಲ್ಲಿ ನವೀನ ಗ್ರಾಹಕಸ್ನೇಹಿ ಸೌಲಭ್ಯಗಳನ್ನು ನೀಡುತ್ತಿದೆ ಎಂದಿದ್ದಾರೆ.
ಬ್ಯಾಂಕು ಗ್ರಾಹಕರಿಗೆ ಅತ್ಯುತ್ತಮ ಸೇವೆ, ದಾಖಲೆಯ ವ್ಯವಹಾರದೊಂದಿಗೆ ಲಾಭಗಳಿಸಿರುವುದು ಅತ್ಯಂತ ಹೆಮ್ಮೆಯ ವಿಷಯವಾಗಿದೆ. ಕಳೆದ ಸಾಲಿನಲ್ಲಿ ಬ್ಯಾಂಕು ಮಂಗಳೂರು, ಗದಗ, ಧಾರವಾಡ ಹಾಗೂ ಸಿದ್ದಾಪುರದಲ್ಲಿ ನೂತನ ಶಾಖೆಗಳನ್ನು ಪ್ರಾರಂಭಿಸಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಶಾಖೆಗಳನ್ನು ಪ್ರಾರಂಭಿಸುವ ಯೋಜನೆ ಇದೆ. ಜಯದೇವ ನಿಲೇಕಣಿ, ದಿ ಶಿರಸಿ ಅರ್ಬನ್ ಬ್ಯಾಂಕ್ ಅಧ್ಯಕ್ಷ.