

ವಿಜಯವಾಣಿ ಸುದ್ದಿಜಾಲ ಕಾಸರಗೋಡು
ನಿರಂತರ ಪರಿಶ್ರಮ, ಸಮಯ ನಿರ್ವಹಣೆ ಮೂಲಕ ಮಾತ್ರ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯಶಸ್ವಿಯಾಗಲು ಸಾಧ್ಯ ಎಂದು 2023ರಲ್ಲಿ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಅಮೃತ ಸೀತಾಪನ್ ತಿಳಿಸಿದರು.
ಕೇರಳ ಕೇಂದ್ರೀಯ ವಿಶ್ವವಿದ್ಯಾಲಯ ಕಾಸರಗೋಡು ಪೆರಿಯ ಕ್ಯಾಂಪಸ್‌ನ ಕನ್ನಡ ವಿಭಾಗ ಆಯೋಜಿಸಿದ್ದ ನೆಟ್-ಜೆಆರ್‌ಎಫ್ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕನಸುಗಳ ಜೊತೆಗೆ ನಡೆದಾಡಲು ಅಪಾರ ಇಚ್ಛಾಶಕ್ತಿ ಅಗತ್ಯ. ಮಾನಸಿಕ ಆರೋಗ್ಯದೊಂದಿಗೆ ಸ್ಪರ್ಧಾರ್ಥಿಗಳು ತಮ್ಮ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಅರಿಯುವುದೂ ಕೂಡ ಮುಖ್ಯವಾಗಿದ್ದು, ಇದು ತಮ್ಮಲ್ಲಿರುವ ಕೊರತೆಗಳನ್ನು ಸರಿಪಡಿಸಿಕೊಳ್ಳಲು ನೆರವಾಗುವುದಾಗಿ ತಿಳಿಸಿದರು. ಕನ್ನಡ ವಿಭಾಗದ ಪ್ರಭಾರ ಮುಖ್ಯಸ್ಥೆ ಡಾ.ಸೌಮ್ಯ ಅಧ್ಯಕ್ಷತೆ ವಹಿಸಿದ್ದರು. ಪ್ಲೇಸ್ಮೆಂಟ್ ಸೆಲ್‌ನ ಸಂಯೋಜಕ ಡಾ.ಗೋವಿಂದರಾಜು ಕೆ.ಎಂ.ಕಾರ್ಯಕ್ರಮ ಸಂಯೋಜಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರಾಧ್ಯಾಪಕರಾದ ಡಾ. ಪ್ರವೀಣ್ ಪದ್ಯಾಣ, ಚೇತನ್ ಎಂ.ಉಪಸ್ಥಿತರಿದ್ದರು. ಅಮೃತ ಸೀತಾಪನ್ ಕನ್ನಡ ವಿಭಾಗದ ಸಂಶೋಧನಾ ವಿದ್ಯಾರ್ಥಿಗಳು ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ವಿದ್ಯಾರ್ಥಿ ವಿನಯ ಎಂ.ಸ್ವಾಗತಿಸಿದರು. ವಿದ್ಯಾರ್ಥಿ ಪ್ರತಿನಿಧಿ ಸಚಿನ್ ನಿರೂಪಿಸಿದರು. ಜ್ಯೋತಿಲಕ್ಷ್ಮೀ ವಂದಿಸಿದರು.