ಕಳೆದ ವರ್ಷ ನೆರೆ-ಈಗ ಬರಬರೆ

Rnr bara
Published on

ಕರಿಯಪ್ಪ ಅರಳಿಕಟ್ಟಿ ರಾಣೆಬೆನ್ನೂರ
ಮಳೆ ಕೊರತೆಯಿಂದ ತಾಲೂಕಿನಲ್ಲಿ ಮೆಕ್ಕೆಜೋಳ, ಶೇಂಗಾ, ಹತ್ತಿ, ಸೋಯಾಬೀನ್ ಮತ್ತಿತರ ಬೆಳೆಗಳು ಒಣಗುತ್ತಿವೆ. ಅಲ್ಲದೆ 900 ಹೆಕ್ಟೇರ್ ತೋಟಗಾರಿಕೆ ಬೆಳೆಯಲ್ಲಿ 700 ಹೆಕ್ಟೇರ್‌ನಷ್ಟು ಉಳ್ಳಾಗಡ್ಡಿ ಹಾಗೂ ಬೆಳ್ಳುಳ್ಳಿ ಬೆಳೆ ಹಾನಿಗೀಡಾಗಿವೆ.

ತಾಲೂಕಿನಲ್ಲಿ ಪ್ರಸಕ್ತ ಸಾಲಿನಲ್ಲಿ 54,920 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಪ್ರಮುಖ ವಾಣಿಜ್ಯ ಬೆಳೆ ಮೆಕ್ಕೆಜೋಳವನ್ನು 42 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಮಳೆ ಕೊರತೆಯಿಂದ ಸದ್ಯ ಶೇ. 40ರಷ್ಟು ಬೆಳೆಗಳು ಹಾನಿಯಾಗಿದೆ ಎಂದು ತಾಲೂಕು ಅಧಿಕಾರಿಗಳು ಅಂದಾಜಿಸಿದ್ದಾರೆ.

ತಾಲೂಕಿನಲ್ಲಿ ಜುಲೈ ತಿಂಗಳಲ್ಲಿ 97ಮಿಮೀ ಹಾಗೂ ಆಗಸ್ಟ್ ತಿಂಗಳಲ್ಲಿ 62ಮಿಮೀ ವಾಡಿಕೆ ಮಳೆಯಿದೆ. ಆದರೆ, ಬಿದ್ದ ಮಳೆ ಪ್ರಮಾಣ ಶೇ. 20ರಷ್ಟು ಮಾತ್ರ. ಹೀಗಾಗಿ ಬೆಳೆಗಳು ಒಣಗುತ್ತಿವೆ. ತಾಲೂಕಿನಲ್ಲಿ ಕೃಷಿ, ತೋಟಗಾರಿಕೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಬೆಳೆ ಸಮೀಕ್ಷೆ ನಡೆಸಿದ್ದಾರೆ.
ತಾಲೂಕಿನಲ್ಲಿ ಕಳೆದ ವರ್ಷ ನೆರೆ ಹಾವಳಿಯಿಂದ ತತ್ತರಿಸಿ ಹೋಗಿದ್ದ ಅನ್ನದಾತರು ಈ ಬಾರಿಯಾದರೂ ಉತ್ತಮ ಮಳೆಯಾಗಿ ಬೆಳೆ ಚನ್ನಾಗಿ ಬರಲಿ ಎಂದು ದೇವರಲ್ಲಿ ಪ್ರಾರ್ಥಿಸಿದರೂ ಪ್ರಯೋಜನವಾಗಲಿಲ್ಲ. ಈಗ ಮಳೆ ಬಂದರೂ ಪ್ರಯೋಜನವಿಲ್ಲ ಎನ್ನುವ ಸ್ಥಿತಿಗೆ ಬೆಳೆಗಳು ತಲುಪಿವೆ. ಅನ್ನದಾತರು ಕಣ್ಣೀರು ಹಾಕುವ ದುಸ್ಥಿತಿಗೆ ತಲುಪಿದ್ದಾರೆ.

ರಾಣೆಬೆನ್ನೂರ ತಾಲೂಕಿನಲ್ಲಿ ಈ ಬಾರಿ ಬೆಲೆ ಕುಸಿತ ಹಾಗೂ ಮಳೆ ಕೊರತೆ ಹಿನ್ನೆಲೆಯಲ್ಲಿ ಕೇವಲ 900 ಹೆಕ್ಟೇರ್ ಪ್ರದೇಶದಲ್ಲಿ ಉಳ್ಳಾಗಡ್ಡಿ ಹಾಗೂ ಬೆಳ್ಳುಳ್ಳಿ ಬೆಳೆಯಲಾಗಿತ್ತು. ಎರಡೂ ಬೆಳೆಗಳಿಗೆ ಜೂನ್‌ನಲ್ಲಿ ಮಳೆಯ ಅವಶ್ಯಕತೆ ಅಧಿಕವಾಗಿತ್ತು. ಆದರೆ, ಜೂನ್ ತಿಂಗಳಲ್ಲಿ ಮಳೆಯಾಗದ ಕಾರಣ ಬೆಳೆಗಳು ಒಣಗಿ ಹೋಗಿವೆ. ತಾಲೂಕಿನಾದ್ಯಂತ 700 ಹೆಕ್ಟೇರ್‌ನಷ್ಟು ತೋಟಗಾರಿಕೆ ಬೆಳೆ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಸಮೀಕ್ಷೆ ಮುಂದುವರಿದಿದೆ.

ತಡವಾಗಿಯಾದರೂ ಮಳೆ ಚನ್ನಾಗಿ ಬಂದಿದೆ ಎಂದುಕೊಂಡು ಜುಲೈ ತಿಂಗಳಲ್ಲಿ ಬಿತ್ತನೆ ಮಾಡಿದ್ದ ಉಳ್ಳಾಗಡ್ಡಿ, ಮೆಕ್ಕೆಜೋಳ, ಶೇಂಗಾ ಬೆಳೆ ಇದೀಗ ಸಂಪೂರ್ಣ ಒಣಗಿ ಹೋಗಿದೆ. ಇನ್ಮುಂದೆ ಮಳೆ ಬಂದರೂ ಅವುಗಳು ಚಿಗುರುವುದಿಲ್ಲ. ಅಂತಹ ಸ್ಥಿತಿಗೆ ಬೆಳೆಗಳು ತಲುಪಿವೆ. ಆದ್ದರಿಂದ ಸರ್ಕಾರ ಕೂಡಲೇ ಬರ ಘೋಷಣೆ ಮಾಡಿ ಸೂಕ್ತ ಪರಿಹಾರ ನೀಡಬೇಕು.I ದಿಳ್ಳೆಪ್ಪ ಕಂಬಳಿ, ರಾಹುನತಕಟ್ಟಿ ರೈತ ತಾಲೂಕಿನಲ್ಲಿ ಮಳೆ ಕೊರತೆ ಹಾಗೂ ಬೆಳೆಗಳ ಸ್ಥಿತಿಗತಿ ಕುರಿತು ಸರ್ಕಾರಕ್ಕೆ ವರದಿ ನೀಡಲಾಗಿದೆ. ಸದ್ಯ ತಾಲೂಕು ಆಡಳಿತದ ಖಾತೆಯಲ್ಲಿ ತುರ್ತು ಸಂದರ್ಭದಲ್ಲಿ ಪರಿಹಾರ ನೀಡಲು ಹಣವಿದೆ. ಅದನ್ನು ಸರ್ಕಾರ ಯಾವ ರೀತಿ ಮಾರ್ಗಸೂಚಿ ಹೊರಡಿಸುತ್ತದೆ ನೋಡಿಕೊಂಡು ಬಳಸಬೇಕು.I ಎಚ್.ಎನ್. ಶಿರಹಟ್ಟಿ, ತಹಸೀಲ್ದಾರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net