ಸಿಎಂ ಆಗುವ ಅವಕಾಶ ಸಿಗಬಹುದು ; ತುಮಕೂರಿನಲ್ಲಿ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಹೇಳಿಕೆ

30Tmk_Nirani_Basaveswara
Published on

ತುಮಕೂರು : ಮಂತ್ರಿ, ಮುಖ್ಯಮಂತ್ರಿ, ಶಾಸಕ ಯಾವ ಹುದ್ದೆಗೂ ಆಸೆ ಪಟ್ಟವನಲ್ಲ. ಅವುಗಳೇ ನಮ್ಮನ್ನು ಹುಡುಕಿಕೊಂಡು ಬಂದಿವೆ. ಈಶ್ವರಪ್ಪ ಅವರು ನನ್ನ ಮೇಲಿನ ಅಭಿಮಾನದಿಂದ ಮುರುಗೇಶ್ ನಿರಾಣಿ ಮುಂದಿನ ಮುಖ್ಯಮಂತ್ರಿಯಾಗುತ್ತಾರೆ ಎಂದಿದ್ದಾರೆ ಎಂದು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಹೇಳಿದರು.

ನಗರದ ಅರಳೇಪೇಟೆಯಲ್ಲಿ ನಗರದ ವೀರಶೈವ ಸಮಾಜದ ವತಿಯಿಂದ ಜೀರ್ಣೋದ್ಧಾರಗೊಂಡಿರುವ ಶ್ರೀ ಬಸವೇಶ್ವರ ದೇವಾಲಯಕ್ಕೆ ಮಂಗಳವಾರ ಭೇಟಿ ನೀಡಿ ದೇವರ ದರ್ಶನ ಪಡೆದ ಬಳಿಕ ಮಾತನಾಡಿದ ಅವರು, ಸಿಎಂ ಬಸವರಾಜ ಬೊಮ್ಮಾಯಿ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಬಸವರಾಜ ಬೊಮ್ಮಾಯಿ ಹಾಗೂ ನನ್ನ ನಡುವೆ 30 ವರ್ಷದ ಸ್ನೇಹವಿದೆ. ಅಲ್ಲದೆ ನಾವಿಬ್ಬರು ಒಂದೇ ಕಾಲೇಜಿನಲ್ಲಿ ಓದಿದವರು ಎಂದು ನಿರಾಣಿ ಹೇಳಿದರು.

2023ರ ವಿಧಾನಸಭಾ ಚುನಾವಣೆಯಲ್ಲಿ 125ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆದು ಪಕ್ಷವನ್ನು ಅಧಿಕಾರಕ್ಕೆ ತರುವುದರ ಕಡೆಗೆ ಗಮನಹರಿಸಿದ್ದೇವೆ. 2024ರ ಲೋಕಸಭಾ ಚುನಾವಣೆಯಲ್ಲಿಯೂ 28ಕ್ಕೆ 28 ಸ್ಥಾನಗಳನ್ನು ಗೆಲ್ಲುವ ವಿಶ್ವಾಸ ಹೊಂದಿದ್ದೇವೆ. 2023, 2028 ಅಥವಾ ಮುಂದಿನ ದಿನಗಳಲ್ಲಿ ಸಿಎಂ ಆಗುವ ಅವಕಾಶ ಸಿಗಬಹುದು. ಆತುರ ಇಲ್ಲ ಎಂದು ನಿರಾಣಿ ಸ್ಪಷ್ಟಪಡಿಸಿದರು.

ನೀಡುವ ಕೈಯೇ ಹೊರತು, ಬೇಡುವ ಸಮುದಾಯವಲ್ಲ : ವೀರಶೈ-ಲಿಂಗಾಯತ ಸಮಾಜವು ನೀಡುವ ಕೈಯೇ ಹೊರತು, ಬೇಡುವ ಸಮುದಾಯವಲ್ಲ ಎಂದು ನಿರಾಣಿ ಹೇಳಿದರು. ಸಮಾಜವು ಶಕ್ತಿ ಮೀರಿ ಐದು ಗರ್ಭ ಗುಡಿಗಳಿರುವ ದೇವಾಲಯವನ್ನು ಜೀರ್ಣೋದ್ಧಾರ ಮಾಡಿರುವುದೇ ಇದಕ್ಕೆ ಸಾಕ್ಷಿ. ಇಂತಹ ಧಾರ್ಮಿಕ ಕಾರ್ಯಗಳು ನಿರಂತರವಾಗಿ ನಡೆಯುತ್ತಿರುವುದು ಸಂತೋಷದ ವಿಚಾರ ಎಂದರು.

ರಾಜ್ಯದಲ್ಲಿ 3ನೇ ಅಲೆ ಭೀತಿ ; ರಾಜ್ಯದಲ್ಲಿ 3ನೇ ಅಲೆಯ ಭೀತಿ ಇದೆ. ಆದರೆ, ಲಾಕ್‌ಡೌನ್ ಮಾಡುವ ಪ್ರಸ್ತಾಪವಿಲ್ಲ ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ. ದೇಶದಲ್ಲಿ 100 ಕೋಟಿಗೂ ಹೆಚ್ಚು ಜನ ಕರೊನಾ ಲಸಿಕೆ ಪಡೆದಿದ್ದಾರೆ. ಉಳಿದ ಜನರಿಗೂ ತ್ವರಿತಗತಿಯಲ್ಲಿ ಲಸಿಕೆ ನೀಡಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ನಿರಾಣಿ ಹೇಳಿದರು.

ಪ್ರಮುಖವಾಗಿ ಕೈಗಾರಿಕೆಗಳಲ್ಲಿ ಕೆಲಸ ಮಾಡುತ್ತಿರುವ ವಲಸೆ ಕಾರ್ಮಿಕರಿಗೆ ಆರೋಗ್ಯ ತಪಾಸಣೆ ನಡೆಸಿ ಲಸಿಕೆ ಪಡೆದುಕೊಳ್ಳುವಂತೆ ಕ್ರಮವಹಿಸಲಾಗುವುದು. ನೆರೆ-ಹೊರೆ ರಾಜ್ಯಗಳಲ್ಲಿ ಏನೇನು ಕ್ರಮಗಳಾಗುತ್ತಿವೆ, ಬೆಳವಣಿಗೆಗಳೇನು ಎಂದು ಅಧ್ಯಯನ ನಡೆಸಿ, ರಾಜ್ಯದಲ್ಲಿಯೂ ಅಗತ್ಯ ಕ್ರಮಗಳನ್ನು ಮುಖ್ಯಮಂತ್ರಿಗಳು ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net