

ಮಂಗಳೂರು: ಈ ಬಾರಿ ಮಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯ ಶಿಕ್ಷಣ ಸಂಸ್ಥೆಗಳಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ(ಎನ್‌ಇಪಿ) ಅನ್ವಯ ಪದವಿ ಪಠ್ಯಕ್ರಮ ಇರಲಿದೆ. ಶೈಕ್ಷಣಿಕ ವರ್ಷ ಆರಂಭದ ಹಂತದಲ್ಲಿ ಇರುವುದರಿಂದ ಸದ್ಯ ಈ ಪಠ್ಯಕ್ರಮ ಬದಲಾವಣೆ ಮಾಡುವುದಿಲ್ಲ. ರಾಜ್ಯ ಶಿಕ್ಷಣ ನೀತಿ(ಎಸ್‌ಇಪಿ) ಜಾರಿ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾಪವಾಗಿದ್ದರೂ, ಇದನ್ನು ಜಾರಿಗೊಳಿಸಲು ಹೊರಟರೆ ಮೂರು ಪದವಿ ಬ್ಯಾಚ್‌ಗಳ ವಿದ್ಯಾರ್ಥಿಗಳು ಅತಂತ್ರರಾಗುತ್ತಾರೆ. ಇದರ ತಕ್ಷಣ ಜಾರಿಗೆ ತಾಂತ್ರಿಕ ತೊಡಕು ಕೂಡ ಇದೆ ಎಂದು ವಿವಿ ಪ್ರಭಾರ ಕುಲಪತಿ ಪ್ರೊ.ಜಯರಾಜ್ ಅಮೀನ್ ಹೇಳಿದರು.
ವಿವಿ ಆಡಳಿತ ಸೌಧದಲ್ಲಿ ಮಂಗಳವಾರ ಮಂಗಳೂರು ವಿವಿ ಶೈಕ್ಷಣಿಕ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿವಿ ವ್ಯಾಪ್ತಿಯಲ್ಲಿ ಈ ಶೈಕ್ಷಣಿಕ ವರ್ಷದ ಪದವಿ ತರಗತಿಗಳು ಆ.23ರಂದು ಪುನರಾರಂಭ ಸಾಧ್ಯತೆ ಇದೆ. ಈಗಾಗಲೇ ನಿಗದಿಯಂತೆ ಆ.15ರಂದು ಪದವಿ ತರಗತಿಗಳು ಆರಂಭಗೊಳ್ಳಬೇಕಿತ್ತು. ಆದರೆ ಮಳೆಯ ಕಾರಣ ಮುಂದುವರಿದ ಪರೀಕ್ಷೆಗಳು ಆ.14, 16ರಂದು ನಡೆಯಲಿವೆ. ಆ.10ರಿಂದ 20ರವರೆಗೆ ಉತ್ತರ ಪತ್ರಿಕೆಗಳ ಮೌಲ್ಯಮಾಪನ. ಹೀಗಾಗಿ 23ರಂದು ಪದವಿ ತರಗತಿಗಳ ಪುನರಾರಂಭ. ಈ ಬಗ್ಗೆ ಅಂತಿಮ ತೀರ್ಮಾನ ಶೀಘ್ರ ಪ್ರಕಟಿಸಲಾಗುವುದು ಎಂದರು.
ಎನ್‌ಇಪಿ ಪಠ್ಯಕ್ರಮ ಕಾರ್ಯಯೋಜನೆಯ ಐದನೇ ಸೆಮಿಸ್ಟರ್‌ನಿಂದ ಜೆಂಡರ್ ಸೆನ್ಸಿಟೈಸೇಷನ್ ಕೋರ್ಸ್ ಕೈಬಿಡಲು ತೀರ್ಮಾನಿಸಲಾಯಿತು. ಈ ಕೋರ್ಸ್ ಸೇರ್ಪಡೆಗೊಳಿಸುವಂತೆ ಎನ್‌ಇಪಿ ಸೂಚಿಸಿದರೂ, ಸೆಮಿಸ್ಟರ್‌ಗಳಲ್ಲಿ ಸೇರಿಸುವುದು ಕಷ್ಟ. ಯಾವ ಕಾಲೇಜುಗಳೂ ಇದನ್ನು ಅಳವಡಿಸಿಲ್ಲ ಎಂದು ಸಭೆಗೆ ತಿಳಿಸಲಾಯಿತು.
ಸ್ನಾತಕೋತ್ತರ ತುಳು ವಿಭಾಗ ಸ್ಥಾಪನೆ
ತುಳು ಭಾಷೆಗೆ ಪ್ರತ್ಯೇಕ ಸ್ನಾತಕೋತ್ತರ ವಿಭಾಗ ಸ್ಥಾಪಿಸುವ ಬಗ್ಗೆ ಶೈಕ್ಷಣಿಕ ಸಭೆಯಲ್ಲಿ ಅನುಮೋದನೆ ಪಡೆಯಲಾಯಿತು. ವಿವಿ ವ್ಯಾಪ್ತಿಯ ಕಾಲೇಜುಗಳ ಅಭಿವೃದ್ಧಿ ಮಂಡಳಿಯಲ್ಲಿ ಸ್ಥಳೀಯ ಶಾಸಕರ ಅಧ್ಯಕ್ಷತೆಗೆ ಕತ್ತರಿ ಹಾಕುವ ನಿರ್ಣಯ ಕೈಗೊಳ್ಳಲಾಗಿದೆ. ಹೊಸ ಪ್ರಸ್ತಾಪದಂತೆ ವಿವಿ ಕುಲಪತಿಗಳೇ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರು ಆಗಿರುತ್ತಾರೆ. ಶಾಸಕರು ಸದಸ್ಯರು ಅಷ್ಟೇ ಎಂದು ಪ್ರಭಾರ ಕುಲಪತಿ ಪ್ರೊ.ಜಯರಾಜ್ ಅಮೀನ್ ಸ್ಪಷ್ಟಪಡಿಸಿದರು.
ಅನುಮೋದನೆಗೊಂಡ ವಿಷಯಗಳು
ವಿವಿ ಬೋಧಕೇತರ ಹುದ್ದೆಗಳ ವೃಂದ ಮತ್ತು ನೇಮಕಾತಿ ನಿಯಮಗಳ ಪರಿಷ್ಕರಣೆ, ವಿವಿ ಸ್ನಾತಕೋತ್ತರ ವಾಣಿಜ್ಯ ಕಾರ್ಯಕ್ರಮದ ದ್ವಿತೀಯ ಸೆಮಿಸ್ಟರ್‌ನ ಪರಿಷ್ಕೃತ ಪಠ್ಯಕ್ರಮಕ್ಕೆ ಅನುಮೋದನೆ ನೀಡಲಾಯಿತು. ಮಂಗಳೂರಿನ ಸಂತ ಅಲೋಶಿಯಸ್ ಸ್ವಾಯತ್ತ ಕಾಲೇಜಿನಲ್ಲಿ ಈ ಶೈಕ್ಷಣಿಕ ಸಾಲಿನಿಂದ ಎಂ.ಎ.ಪಬ್ಲಿಕ್ ಪಾಲಿಸಿ ಆ್ಯಂಡ್ ಗವರ್ನೆನ್ಸ್ ಹೊಸ ಸ್ನಾತಕೋತ್ತರ ಕಾರ್ಯಕ್ರಮ ಆರಂಭಿಸಲು ಒಪ್ಪಿಗೆ ನೀಡಲಾಯಿತು. 2023-24ನೇ ಸಾಲಿಗೆ ವಿವಿ ವ್ಯಾಪ್ತಿಗೆ ಸಂಬಂಧಿಸಿ ಶೈಕ್ಷಣಿಕ ಮಂಡಳಿ ಸಮಿತಿ ರಚನೆ. ಕೊಡಗು ಪ್ರತ್ಯೇಕ ವಿವಿ ರಚನೆ ಹಿನ್ನೆಲೆಯಲ್ಲಿ ಮಡಿಕೇರಿ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ಹಲವು ಪೀಠಗಳ ಸ್ಥಾಪನೆ, ಜೀವರಸಾಯಶಾಸ್ತ್ರ ಹಾಗೂ ಸೂಕ್ಷ್ಮಾಣು ಜೀವವಿಜ್ಞಾನಗಳ ವಿಭಾಗ ಮಂಗಳೂರು ವಿವಿಯಲ್ಲಿ ಸ್ಥಾಪನೆಗೆ ಅನುಮೋದನೆ ನೀಡಲಾಯಿತು.
ಈ ಬಾರಿಯೂ ಕೊರತೆ ಬಜೆಟ್
ವಿವಿ 2022-23ನೇ ಶೈಕ್ಷಣಿಕ ಸಾಲಿನಂತೆ ಈ ಬಾರಿಯೂ ವಿವಿಯದ್ದು ಕೊರತೆ ಬಜೆಟ್. ಮಂಗಳೂರು ವಿವಿ 2023-24ನೇ ಶೈಕ್ಷಣಿಕ ಸಾಲಿನ ಬಜೆಟನ್ನು ಹಣಕಾಸು ಅಧಿಕಾರಿ ಪ್ರೊ.ಸಂಗಪ್ಪ ಮಂಡಿಸಿದರು. 1.75 ಕೋಟಿ ರೂ. ಕೊರತೆ ಬಜೆಟ್ ತೋರಿಸಲಾಗಿದೆ. ಈ ಸಾಲಿನಲ್ಲಿ ಒಟ್ಟು 198.12 ಕೋಟಿ ರೂ. ಸ್ವೀಕೃತಿ ಹಾಗೂ 199.87 ಕೋಟಿ ರೂ. ಖರ್ಚು ಅಂದಾಜಿಸಲಾಗಿದ್ದು, 1.75 ಕೋಟಿ ರೂ. ಕೊರತೆಯಾಗಲಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ 1.11 ಕೋಟಿ ರೂ.ಕೊರತೆ ಹೆಚ್ಚಾಗಿದೆ.