

ಮಂಗಳೂರು : ಶಿಕ್ಷಣ ಕ್ಷೇತ್ರದಲ್ಲಿ ಅಳವಡಿಸಲಾಗಿದ್ದ ರಾಷ್ಟ್ರೀಯ ಶಿಕ್ಷಣ ನೀತಿ- 2020ಯನ್ನು ರಾಜ್ಯದ ಕಾಂಗ್ರೆಸ್ ಸರ್ಕಾರ ಹಿಂಪಡೆಯಲು ಯತ್ನಿಸಿದ್ದು ವಿದ್ಯಾರ್ಥಿಗಳಿಗೆ ಮಾರಕವಾಗಲಿದೆ. ಸರ್ಕಾರದ ಈ ನಿಲುವು ಖಂಡಿಸಿ ಶಿಕ್ಷಣ ಕ್ಷೇತ್ರಕ್ಕೆ ಆಗಬಹುದಾದ ನಷ್ಟದ ಕುರಿತಾಗಿ ಪೀಪಲ್ಸ್ ಫೋರಂ ಫಾರ್ ಕರ್ನಾಟಕ ಎಜುಕೇಶನ್ ಸಂಘಟನೆಯು ರಾಜ್ಯದ ಜನತೆಯಲ್ಲಿ ಜಾಗೃತಿ ಮೂಡಿಸಲಿದೆ ಎಂದು ಮಾಜಿ ಎಂಎಲ್‌ಸಿ ಕ್ಯಾ.ಗಣೇಶ್ ಕಾರ್ಣಿಕ್ ಹೇಳಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರಾಜಕೀಯ ದೃಷ್ಟಿಕೋನ ಬದಲು
ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ನೋಡಬೇಕು. ಪಠ್ಯಗಳಲ್ಲೇನಿದೆ ಎನ್ನುವುದನ್ನು ಜನರಿಗೆ ಕ್ಷಿಪ್ರವಾಗಿ ಪರಿಚಯಿಸುವ ಉದ್ದೇಶದಿಂದ ಪೀಪಲ್ಸ್ ಫೋರಂ ಫಾರ್ ಕರ್ನಾಟಕ ಸಂಘಟನೆಯು ಮೀಮ್ಗಳನ್ನು ಸಿದ್ದಪಡಿಸಿದ್ದು, ಇದನ್ನು ಜನರ ಮುಂದಿಡಲಿದೆ ಎಂದರು.
ಸರ್ಕಾರ ಬದಲಾದ ತಕ್ಷಣ ಶಿಕ್ಷಣ ಪದ್ಧತಿಯನ್ನು ಬದಲಾಯಿಸುವುದು ಸರಿಯಲ್ಲ. ಕೇಂದ್ರ ಸರ್ಕಾರ ಜಾರಿಗೆ ತಂದ ಎನ್‌ಇಪಿ ಬದಲು ರಾಜ್ಯ ಶಿಕ್ಷಣ ನೀತಿ(ಎಸ್‌ಇಪಿ) ಜಾರಿಗೆ ತರಲು ಕಾಂಗ್ರೆಸ್ ಸರ್ಕಾರ ಹೊರಟಿದೆ. ಎನ್‌ಇಪಿಯನ್ನು ಏಕಾಏಕಿ ಎಸ್‌ಇಪಿಗೆ ಮಾರ್ಪಡಿಸಲು ಸಾಧ್ಯವಿಲ್ಲ. ಆಯಾ ರಾಜ್ಯಗಳು ತಮಗೆ ಬೇಕಾದ ವಿಚಾರವನ್ನು ಎಸ್‌ಇಪಿಯಲ್ಲಿ ಸೇರ್ಪಡೆಗೊಳಿಸಲು ಎನ್‌ಇಪಿಯಲ್ಲಿ ಮುಕ್ತ ಅವಕಾಶ ನೀಡಲಾಗಿದೆ. ಆದರೆ ಇದನ್ನು ಸೇರ್ಪಡೆಗೊಳಿಸಬೇಕಾದರೆ ರಾಷ್ಟ್ರೀಯ ಶಿಕ್ಷಣ ಚೌಕಟ್ಟಿಗೆ(ಎನ್‌ಸಿಎಫ್) ಒಳಪಟ್ಟು ರಾಷ್ಟ್ರೀಯ ಪಠ್ಯಕ್ರಮ ಸಮಿತಿಯ ಅನುಮತಿ ಪಡೆಯಬೇಕು. ಹಾಗಾಗಿ ಸುಲಭದಲ್ಲಿ ಎನ್‌ಇಪಿ ಬದಲು ಎಸ್‌ಇಪಿ ಜಾರಿಗೊಳಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.
ಎನ್‌ಇಪಿ ಬದಲು ಎಸ್‌ಇಪಿ ಜಾರಿಗೊಳಿಸುವುದಾಗಿ ಹೇಳುತ್ತಿರುವ ಸಿಎಂ ಸಿದ್ದರಾಮಯ್ಯ ಹಾಗೂ ಇಬ್ಬರು ಶಿಕ್ಷಣ ಸಚಿವರು ಮೊದಲು ಎನ್‌ಇಪಿಯಲ್ಲಿ ಏನೇನು ಇದೆ ಎಂಬುದನ್ನು ಓದಿಕೊಳ್ಳಬೇಕು. ಅದರಲ್ಲಿ ಯಾವುದೇ ಒಂದು ಬಲಪಂಥೀಯ ವಿಚಾರಧಾರೆ ಇದ್ದರೆ ತೋರಿಸಲಿ. ವ್ಯಕ್ತಿತ್ವ ವಿಕಸನ ಬಗ್ಗೆ ಬರೆದ ಆರ್‌ಎಸ್‌ಎಸ್ ಸಂಸ್ಥಾಪಕ ಡಾ.ಹೆಡಗೇವಾರ್, ಚಕ್ರವರ್ತಿ ಸೂಲಿಬೆಲೆ, ಕೆ.ಟಿ.ಗಟ್ಟಿ ಮುಂತಾದವರ ಪಠ್ಯವನ್ನು ಪೂರ್ವಾಗ್ರಹಪೀಡಿತವಾಗಿ ತೆಗೆದು ಹಾಕುವುದು ಸರಿಯಲ್ಲ. ಎನ್‌ಇಪಿ ಬಗ್ಗೆ ಕಾಂಗ್ರೆಸ್ ನಾಯಕ ಶಶಿ ತರೂರ್ ಅಂಥವರೇ ಶ್ಲಾಘಿಸಿದ್ದಾರೆ. ಹಾಗಿರುವಾಗ ರಾಜ್ಯದ ಕಾಂಗ್ರೆಸ್ ಸರ್ಕಾರ ಯಾಕಾಗಿ ತಪ್ಪು ಅಭಿಪ್ರಾಯ ಹೊಂದಬೇಕು ಎಂದು ಕ್ಯಾ.ಗಣೇಶ್ ಕಾರ್ಣಿಕ್ ಪ್ರಶ್ನಿಸಿದರು.
ಎನ್‌ಇಪಿಯಲ್ಲಿ ಮಕ್ಕಳ ವ್ಯಕ್ತಿತ್ವ ವಿಕಸನ ಜತೆಗೆ ಸ್ವಉದ್ಯೋಗಕ್ಕೆ ಪ್ರೇರೇಪಿಸುವ ಅನೇಕ ಅಂಶಗಳಿವೆ. ಇವುಗಳನ್ನೇ ತೆಗೆದುಹಾಕಿದರೆ, ಇಂದಿನ ಪೀಳಿಗೆ ಭವಿಷ್ಯದಲ್ಲಿ ಕೌಶಲ ಇಲ್ಲದೆ ಶಿಕ್ಷಣ ಪೂರ್ಣಗೊಳಿಸಬೇಕಾಗುತ್ತದೆ. ಇದು ಉದ್ಯೋಗ ಕ್ಷೇತ್ರಕ್ಕೂ ನುರಿತ, ತಜ್ಞತೆಯನ್ನು ಕಳೆದುಕೊಳ್ಳುವಂತಾಗುತ್ತದೆ. ವಿದ್ಯಾರ್ಥಿಗಳ ಭವಿಷ್ಯಕ್ಕೂ ಮಾರಕವಾಗುತ್ತದೆ ಎಂದರು.
*ಅಂಗನವಾಡಿಗೆ ಎನ್‌ಇಪಿ ಅನುಕೂಲ ಎನ್‌ಇಪಿ ಜಾರಿಯಿಂದ ಅಂಗನವಾಡಿ ಕಾರ್ಯಕರ್ತೆಯರಿಗೆ ಉದ್ಯೋಗ ರಕ್ಷಣೆ ಸಿಗಲಿದೆ. ಎನ್‌ಇಪಿ ಪ್ರಕಾರ ನರ್ಸರಿ, ಎಲ್‌ಕೆಜಿ, ಯುಕೆಜಿ ಮುಂತಾದ ಪೂರ್ವ ಪ್ರಾಥಮಿಕ ಹಂತಗಳು ಮಹಿಳಾ ಮತ್ತು ಮಕ್ಕಳ ಕಲ್ಯಾ ಣ ಇಲಾಖೆ ಬದಲು ಶಿಕ್ಷಣ ಇಲಾಖೆ ವ್ಯಾಪ್ತಿಗೆ ಬರಬೇಕು. ಆಗ ಅಂಗನವಾಡಿಯ ಶಿಕ್ಷಕಿಯರನ್ನು ಒಳಗೊಂಡ ಕಾರ್ಯಕರ್ತೆಯರು ಕಾಯಂ ಆಗಿ ನೇಮಕಗೊಳ್ಳಬೇಕಾಗುತ್ತದೆ. ಇದು ಉದ್ಯೋಗ ಭದ್ರತೆ ದೃಷ್ಟಿಯಿಂದ ಉತ್ತಮ ಕ್ರಮವಾಗಿದೆ ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದರು.
ಎಂಎಲ್‌ಸಿ ಪ್ರತಾಪ್‌ಸಿಂಹ ನಾಯಕ್, ಡಾ.ರವಿಶಂಕರ್, ರಾಜಶೇಖರ್ ಹೆಬ್ಬಾರ್, ವಿಕಾಸ್ ಪುತ್ತೂರು ಉಪಸ್ಥಿತರಿದ್ದರು.