

ಇಂಡಿ: ಸನಾತನ ಸಂಸ್ಕೃತಿ, ಹಿರಿಯರ ಕಾಲ, ಕೋಶಗಳಿಂದ ದೂರ ಹೋದಂತೆಲ್ಲ ಬದುಕು ಸತ್ವ ಕಳೆದುಕೊಳ್ಳುತ್ತ ಹೋಗುತ್ತದೆ. ಸಿದ್ಧೇಶ್ವರ ಶ್ರೀಗಳ ಪ್ರವಚನ ಆಲಿಸಿ ಹೃದಯವಂತ ಸಮಾಜಮುಖಿ ಯುವಕರ ಪಡೆಯ ವ್ಯಕ್ತಿತ್ವ ನಿರ್ಮಾಣವಾಗಿದೆ ಎಂದು ಘೋಡಗೇರಿ ಶಿವಾನಂದ ಮಠದ ಮಲ್ಲಯ್ಯ ಶ್ರೀಗಳು ಹೇಳಿದರು.
ತಾಲೂಕಿನ ಅಥರ್ಗಾ ಗ್ರಾಮದ ಗುರುದೇವಾಶ್ರಮದಲ್ಲಿ ಜ್ಞಾನಯೋಗಿ ಸಿದ್ಧೇಶ್ವರ ಶ್ರೀಗಳ ಗುರು ಆರಾಧನಾ ಮಹೋತ್ಸವದಲ್ಲಿ ಯುವಶಕ್ತಿ ಸಂಗಮ ಕಾರ್ಯಕ್ರಮದಲ್ಲಿ ಗುರುವಾರ ಅವರು ಮಾತನಾಡಿದರು.
ಯುವಕರು ಸಿದ್ಧೇಶ್ವರ ಶ್ರೀಗಳ ಪ್ರವಚನ ಆಲಿಸುವ ಮೂಲಕ ಅವರ ವಾಕ್ಯಗಳನ್ನು ಪಾಲನೆ ಮಾಡಿದರೆ ನಿಮ್ಮ ಜೀವನ ಉತ್ತುಂಗದಲ್ಲಿ ಇರುವುದಲ್ಲದೆ ನಿಮಗೆ ನೆಮ್ಮದಿಯ ಅನುಭವ ಸಿಗುತ್ತದೆ ಎಂದರು.
ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ಅರವಿಂದ ಪಾಶ್ಚಾಪುರೆ ಮಾತನಾಡಿ, ಸಿದ್ಧೇಶ್ವರ ಶ್ರೀಗಳ ಅಂತಿಮ ಅಭಿನಂದನಾಪತ್ರಕ್ಕೆ ಸಾಕ್ಷಿ ಹಾಕಿರುವುದು ನನ್ನ ಈ ಜನ್ಮದ ಸುಕೃತವಾಗಿದೆ. ಪೂಜ್ಯರ ಪ್ರವಚನದ ಲದಿಂದ ನ್ಯಾಯ ಕ್ಷೇತ್ರದಲ್ಲಿ ಹೊಸ ಅಡಿ ಇಟ್ಟು ನ್ಯಾಯ ನೀಡಿದ್ದೇನೆ. 2012 ರಲ್ಲಿ ರಾಜ್ಯಮಟ್ಟದ ನ್ಯಾಯಾಧೀಶರ ಸಮ್ಮೇಳನದಲ್ಲಿ ಸಿದ್ಧೇಶ್ವರ ಶ್ರೀಗಳು ಮಾತ್ರ ಮಾತನಾಡಿದ್ದು ಯಾವುದೇ ನ್ಯಾಯ್ಯಾಧೀಶರ ಸಮ್ಮೇಳನದಲ್ಲಿ ಯಾವುದೇ ಪೂಜ್ಯರು ಮಾತನಾಡಿಲ್ಲ. ಅದರಂತೆ ಅನೇಕ ನ್ಯಾಯಾಧೀಶರು ಅವರ ಪ್ರವಚನದಿಂದ ಪರಿವರ್ತನೆಯಾಗಿ ಇಂದಿಗೂ ಸ್ಮರಿಸುತ್ತಾರೆ ಎಂದರು.
ಕರ್ನಾಟಕ ಸರ್ಕಾರದ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಮಾತನಾಡಿ, ಮಕ್ಕಳೆಂದರೆ ಸಿದ್ಧೇಶ್ವರ ಶ್ರೀಗಳಿಗೆ ಪ್ರೀತಿ, ಅವರ ಆಶೀರ್ವಾದದಿಂದ ಕರ್ನಾಟಕದ ಎರಡೂವರೆ ಕೋಟಿ ಮಕ್ಕಳನ್ನು ಪ್ರತಿನಿಧಿಸುವ ಅಧ್ಯಕ್ಷನಾಗಿರುವುದು ಪೂಜ್ಯರ ಆಶೀರ್ವಾದವಾಗಿದೆ. ಮಕ್ಕಳ ಸೇವೆ ಮಾಡುವುದರ ಮೂಲಕ ಪೂಜ್ಯರು ಹಾಗೂ ನಿಮ್ಮೆಲ್ಲರ ಋಣ ತೀರಿಸುವ ಪ್ರಯತ್ನ ಮಾಡುತ್ತೇನೆ ಎಂದರು.
ದಕ್ಷಿಣ ಭಾರತ ಮುಖ್ಯ ಪತಂಜಲಿ ಪ್ರಭಾರಿಗಳಾದ ಭವರಲಾಲ ಮೀನಾ ಮಾತನಾಡಿದರು. ಶಿರಕನಹಳ್ಳಿಯ ಅಡವಿಲಿಂಗ ಮಹಾರಾಜರು ಆಶೀರ್ವಚನ ನೀಡಿದರು.
ಗೋಳಸಾರದ ಅಭಿನವ ಪುಂಡಲಿಂಗ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಅಥರ್ಗಾ ಗುರುದೇವಾಶ್ರಮದ ಈಶ ಪ್ರಸಾದ ಶ್ರೀಗಳು, ತಾಳಿಕೋಟೆಯ ಅಶೋಕ ಹಂಚಲಿ, ಎಕ್ಸಲಂಟ್ ಸಮೂಹ ಸಂಸ್ಥೆ ಮುಖ್ಯಸ್ಥ ಬಸವರಾಜ ಕವಲಗಿ, ಸಿದ್ಧೇಶ್ವರ ಸಂಸ್ಥೆಯ ಉಪಾಧ್ಯಕ್ಷ ಸಂ.ಗು.ಸಜ್ಜನ ಮಾತನಾಡಿದರು.
ಸಮಾರಂಭದಲ್ಲಿ ಗಣಪತಿ ಬಾಣಿಕೋಲ, ಶಿವು ನಿಂಬಾಳ, ಮಲಕಣ್ಣ ಬೊಳೆಗಾಂವ, ಬಸವರಾಜ ಹೊನ್ನಳ್ಳಿ, ರೇವಣಸಿದ್ದ ಅಂಕಲಗಿ, ರಾಹುತಪ್ಪ ಹುಲ್ಲೂರ, ಗುರಪ್ಪ ರೂಳಿ, ಧರೆಪ್ಪ ಬ್ಯಾಳಿ ಮತ್ತಿತರರಿದ್ದರು.