ನೇಮಿಸಾಗರ ಮುನಿಗಳಿಂದ ನಿಯಮ ಸಲ್ಲೇಖನ ವ್ರತ

h2-Nemisagar 1
Published on

ಹುಬ್ಬಳ್ಳಿ: ತಾಲೂಕಿನ ವರೂರು ನವಗ್ರಹ ತೀರ್ಥಕ್ಷೇತ್ರದಲ್ಲಿ ಜೈನ ಮುನಿ ಚಂಪಕರಾಜ ನೇಮಿಸಾಗರ ಮಹಾರಾಜರು ಕಳೆದ ಗುರುವಾರದಿಂದ ನಿಯಮ ಸಲ್ಲೇಖನ ವ್ರತ ಕೈಗೊಂಡಿದ್ದಾರೆ.

85 ವರ್ಷದ ಶ್ರೀ ನೇಮಿಸಾಗರ ಮುನಿಗಳು, 12 ವರ್ಷದ ಹಿಂದೆಯೇ ಸಲ್ಲೇಖನ ವ್ರತ ಪ್ರಾರಂಭಿಸಿದ್ದರು. ಆಗಾಗ್ಗೆ 6 ದಿನ, 8 ದಿನ, 10 ದಿನಗಳ ಉಪವಾಸ ಕೈಗೊಂಡಿದ್ದರು. ಕಳೆದ ಗುರುವಾರದಿಂದ ಕಠಿಣವಾದ ನಿಯಮ ಸಲ್ಲೇಖನ ವ್ರತ ಕೈಗೊಂಡಿರುವುದರಿಂದ ಸ್ವಲ್ಪ ಪ್ರಮಾಣದ ನೀರು ಹಾಗೂ ಇತರ ದ್ರವ ಪದಾರ್ಥಗಳನ್ನು ಮಾತ್ರ ಸೇವಿಸುತ್ತಿದ್ದಾರೆ. ಅನ್ನವನ್ನು ಸಂಪೂರ್ಣ ತ್ಯಾಗ ಮಾಡಿದ್ದಾರೆ. ಮಾ. 3ರಿಂದ ವಿಹಾರ(ಸಂಚಾರ)ವನ್ನು ಸಂಪೂರ್ಣ ತ್ಯಾಗ ಮಾಡಲಿದ್ದಾರೆ. 7 ದಿನಗಳ ನಂತರ ನೀರು ಸೇರಿದಂತೆ ಎಲ್ಲ ರೀತಿಯ ದ್ರವ ಪದಾರ್ಥ ಸೇವಿಸುವುದನ್ನು ಸಂಪೂರ್ಣ ಸ್ಥಗಿತಗೊಳಿಸಲಿದ್ದಾರೆ.

ನಂತರ ಮುನಿಗಳ ಆರೋಗ್ಯ ಸ್ಥಿತಿಯನ್ನು ಆಧರಿಸಿ ರಾಷ್ಟ್ರಸಂತ ಯುವಾಚಾರ್ಯ ಶ್ರೀ ಗುಣಧರನಂದಿ ಮಹಾರಾಜರು ಯಮ ಸಲ್ಲೇಖನ ವ್ರತ ಬೋಧಿಸಲಿದ್ದಾರೆ.ಮೂಲತಃ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಕಲ್ಲೋಳ ಗ್ರಾಮದವರಾದ ನೇಮಿಸಾಗರ ಮುನಿಗಳ ಪೂರ್ವಾಶ್ರಮದ ಹೆಸರು ನೇಮಿನಾಥ. ಇವರಿಗೆ ಪತ್ನಿ, ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರಿದ್ದಾರೆ. ಸಂಸಾರದಲ್ಲಿ ಇದ್ದುಕೊಂಡೇ ಸುಮಾರು 20 ವರ್ಷಗಳ ವೈರಾಗ್ಯ ಜೀವನ ನಡೆಸಿದ್ದರು. 1990ರಲ್ಲಿ ತಮ್ಮ 55ನೇ ವರ್ಷದಲ್ಲಿ ಶ್ರೀ ಗುಣಧರನಂದಿ ಮಹಾರಾಜರಿಂದ ದೀಕ್ಷೆ ಪಡೆದುಕೊಂಡಿದ್ದರು. ಅಂದಿನಿಂದ ಗುಣಧರನಂದಿ ಮಹಾರಾಜರ ಸಂಘದಲ್ಲಿ ಗುರುತಿಸಿಕೊಂಡಿದ್ದರು. ಜೈನರ ಪರಮ ಪವಿತ್ರ ಕ್ಷೇತ್ರ ಶಿಖರ್ಜಿಗೆ ಪಾದಯಾತ್ರೆ ಕೈಗೊಂಡಿದ್ದರು.

ದರ್ಶನ ಪಡೆಯಬಹುದು: ನಿತ್ಯ ಬೆಳಗ್ಗೆ 7ರಿಂದ ಸಂಜೆ 7ರವರೆಗೆ ಶ್ರಾವಕ- ಶ್ರಾವಕಿಯರು ಶ್ರೀ ನೇಮಿಸಾಗರ ಮುನಿಗಳ ದರ್ಶನವನ್ನು ಜೂಮ್ ಆಪ್ ಮುಖಾಂತರ ಮಾಡಬಹುದು. ಇದೇ ಅವಧಿಯಲ್ಲಿ ವಿವಿಧ ಆಚಾರ್ಯ ಮುನಿಗಳ ಉಪದೇಶವನ್ನೂ ಆಲಿಸಬಹುದು.

ಆನ್​ಲೈನ್ ವೀಕ್ಷಣೆ

ನವಗ್ರಹ ತೀರ್ಥ ಚಾನೆಲ್ ಜೂಮ್ ಆಪ್ ವಿಳಾಸ : ಮೀಟಿಂಗ್ ಐಡಿ : 57098 87799. ಪಾಸ್​ವರ್ಡ್ : 1008

ಮುನಿಗಳ ಈಗಿನ ದಿನಚರಿ

ನಿಯಮ ಸಲ್ಲೇಖನ ವ್ರತದಲ್ಲಿರುವ ಶ್ರೀ ನೇಮಿಸಾಗರ ಮುನಿಗಳು ಬೆಳಗಿನಜಾವ 4ರಿಂದ 5 ಗಂಟೆಯವರೆಗೆ ಧ್ಯಾನ ಮಾಡುತ್ತಾರೆ. 7ರಿಂದ 8ರವರೆಗೆ ತೀರ್ಥಂಕರರ ಅಭಿಷೇಕ ವೀಕ್ಷಣೆ ಮಾಡುತ್ತಾರೆ. 8 ಗಂಟೆಯಿಂದ ಜೂಮ್ ಆಪ್ ಮೂಲಕ ವಿವಿಧ ಆಚಾರ್ಯರಿಂದ ಉಪದೇಶ ಪಡೆಯುತ್ತಾರೆ.

ಶ್ರೀ ನೇಮಿಸಾಗರ ಮುನಿಗಳಿಗೆ ಭಾನುವಾರದಂದು ಶ್ರೀ ಕುಂಥುಸಾಗರ ಮಹಾರಾಜರು, ಸೋಮವಾರದಂದು ಶ್ರೀ ಪದ್ಮನಂದಿ ಮಹಾರಾಜರು ಹಾಗೂ ಮಂಗಳವಾರದಂದು ಶ್ರೀ ದೇವಿನಂದಿ ಮಹಾರಾಜರು ಉಪದೇಶ ಬೋಧಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net