156 ವರ್ಷ ಇತಿಹಾಸ ಹೊಂದಿದ್ದ ಐತಿಹಾಸಿಕ ನೆಲ್ಲಿಕಟ್ಟೆ ಶಾಲೆ ನೆಲಸಮ

Nellikatte School demolished
Published on

ಪುತ್ತೂರು: 1865ರಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಆರಂಭಿಸಿದ, ಲಂಡನ್ ಥಿಯೇಟರ್ ಮಾದರಿಯ 156 ವರ್ಷ ಇತಿಹಾಸ ಹೊಂದಿದ್ದ ನೆಲ್ಲಿಕಟ್ಟೆ ಸರ್ಕಾರಿ ಶಾಲಾ ಕಟ್ಟಡವನ್ನು ಅಪಾಯಕಾರಿ ಎಂಬ ನೆಲೆಯಲ್ಲಿ ಭಾನುವಾರ ರಾತ್ರಿ ಕೆಡವಲಾಗಿದೆ.

ಪುತ್ತೂರು ಮತ್ತು ಅಕ್ಕಪಕ್ಕದ 2, 3 ತಾಲೂಕುಗಳಲ್ಲಿ ಶಾಲೆಯೇ ಇಲ್ಲದ ಸಂದರ್ಭ 1865ರಲ್ಲಿ ಬ್ರಿಟಿಷ್ ಸರ್ಕಾರ ಮೊತ್ತ ಮೊದಲು ಪುತ್ತೂರಿನ ಹೃದಯಭಾಗದಲ್ಲಿ ಸರ್ಕಾರಿ ಶಾಲೆ ಆರಂಭಿಸಿತ್ತು. ಇದಕ್ಕಾಗಿ ಭವ್ಯ ಕಟ್ಟಡ ನಿರ್ಮಿಸಿತ್ತು. ವೇದಿಕೆ ಮಾದರಿಯ ಎತ್ತರದ ಪಂಚಾಂಗ, ಪಡಸಾಲೆಯುದ್ದಕ್ಕೂ ಬೃಹತ್ ಕಂಬಗಳು, ಮಾಡಿಗೆ ದಪ್ಪನೆಯ ಮರದ ಪಕ್ಕಾಸುಗಳಿದ್ದವು. 3.25 ಎಕರೆ ಜಮೀನು ಶಾಲೆಗಿದೆ. ಜಿಲ್ಲೆಯ ಬೆರಳೆಣಿಕೆಯ ಪ್ರಾಚೀನ ಪಾರಂಪರಿಕ ಕಟ್ಟಡಗಳ ಸಾಲಿನಲ್ಲಿ ಗುರುತಿಸಿಕೊಂಡಿದ್ದ ಈ ಕಟ್ಟಡದ ಪುನರುತ್ಥಾನಕ್ಕಾಗಿ ದಶಕದಿಂದೀಚೆಗೆ ನಿರಂತರ ಹೋರಾಟ, ಮನವಿಗಳನ್ನು ಕಡೆಗಣಿಸಿ ನೆಲಸಮ ಮಾಡಲಾಗಿದೆ.

ಕಟ್ಟಡದಲ್ಲಿ ಪುಟ್ಟ ಸಭಾಂಗಣವಿದ್ದು, ಮಧ್ಯದಲ್ಲಿ ಗ್ರೀಕ್ ಮಾದರಿಯ ರಂಗಮಂಟಪವಿತ್ತು. ನೆಲಮಟ್ಟದಿಂದ ತಗ್ಗಿನಲ್ಲಿ ಚೌಕಾಕಾರದ ತಳವೇದಿಕೆಯಿದ್ದು, ಇಳಿಯಲು 2 ಭಾಗದಿಂದ ಮೆಟ್ಟಿಲುಗಳಿದ್ದವು. ಅದರಲ್ಲಿ ನಾಟಕ ಮತ್ತಿತರ ರಂಗ ಪ್ರದರ್ಶನ ನಡೆಯುತ್ತಿದ್ದು, ಸುತ್ತಲಿನ ಎತ್ತರದ ಗ್ಯಾಲರಿಯಲ್ಲಿ ಕುಳಿತು ನೋಡಬಹುದಾಗಿತ್ತು. ಹಿರಿಯರ ಪ್ರಕಾರ ಹಿಂದೆ ಈ ಶಾಲೆಯಲ್ಲಿ 750ಕ್ಕೂ ಅಧಿಕ ವಿದ್ಯಾರ್ಥಿಗಳು ಏಕಕಾಲದಲ್ಲಿ ಕಲಿಯುತ್ತಿದ್ದರಂತೆ.
 
ವಿಜಯವಾಣಿ ಸತತ ವರದಿ: ಪ್ರಾಚೀನ ಕಟ್ಟಡದ ಪುನರುತ್ಥಾನಕ್ಕೆ ಅನುದಾನ ನೀಡುವಂತೆ ಎಸ್‌ಡಿಎಂಸಿಯಿಂದ ಈ ಹಿಂದಿನ ಶಾಸಕರಾಗಿದ್ದ ಶಕುಂತಳಾ ಟಿ. ಶೆಟ್ಟಿ, ಮಲ್ಲಿಕಾ ಪ್ರಸಾದ್ ಅವರಿಗೆ ಸತತ ಮನವಿ ಮಾಡಲಾಗಿತ್ತು. ಕಟ್ಟಡದ ದುಸ್ಥಿತಿ ಬಗ್ಗೆ ವಿಜಯವಾಣಿ ಸತತ ವರದಿ ಪ್ರಕಟಿಸಿತ್ತು. 1930ರ ದಶಕದಲ್ಲಿ ಪುತ್ತೂರಿಗೆ ಬಂದ ಡಾ.ಕೆ.ಶಿವರಾಮ ಕಾರಂತರು ಈ ಶಾಲೆಯಲ್ಲಿ ಅನೇಕ ರಂಗ ಚಟುವಟಿಕೆ, ನಾಟಕ ತರಬೇತಿ ಇತ್ಯಾದಿ ನಡೆಸತ್ತಿದ್ದರು. ಪುತ್ತೂರಿನ ಮೊದಲ ನಾಡಹಬ್ಬ ದಸರಾವನ್ನೂ ಇದೇ ಶಾಲೆಯ ವಠಾರದಲ್ಲಿ ಕಾರಂತರು ಆರಂಭಿಸಿದ್ದರು. ಪುತ್ತೂರಿನ ಮೊದಲ ಗಣೇಶೋತ್ಸವವೂ ಇಲ್ಲೇ ಆರಂಭಗೊಂಡಿತ್ತು. ಕೆಲವು ದಶಕಗಳಿಂದ ಈ ಕಟ್ಟಡದಲ್ಲಿ ತರಗತಿಗಳು ನಡೆಯುವುದು ನಿಂತಿತ್ತು. ಪಕ್ಕದ ಕಟ್ಟಡಗಳಿಗೆ ಸ್ಥಳಾಂತರಗೊಂಡಿತ್ತು. ಪ್ರಸ್ತುತ 80 ಮಕ್ಕಳು ಮಾತ್ರ ಕಲಿಯುತ್ತಿದ್ದಾರೆ. ದಶಕದ ಹಿಂದೆ ಪುತ್ತೂರಿಗೆ ಸರ್ಕಾರಿ ಪ್ರಥಮದರ್ಜೆ ಕಾಲೇಜು ಮಂಜೂರಾದಾಗ ಕೆಲ ಸಮಯ ಇದೇ ಪ್ರಾಚೀನ ಕಟ್ಟಡದಲ್ಲಿ ಕಾಲೇಜು ತರಗತಿಗಳು ನಡೆದಿದ್ದವು. ಬಳಿಕ ಅದು ಜಿಡೆಕಲ್ಲಿನ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಂಡಿತ್ತು. ಬಳಿಕ ಪುತ್ತೂರಿಗೆ ಮಹಿಳಾ ಸರ್ಕಾರಿ ಕಾಲೇಜು ಮಂಜೂರಾದಾಗ 2013ರಿಂದ 2015ರವರೆಗೆ ಇದರ ಪಕ್ಕದಲ್ಲೇ ತರಗತಿ ನಡೆದಿತ್ತು.
 
ಕೆಲವು ದಿನಗಳ ಹಿಂದೆ ಕಟ್ಟಡ ಹೆಂಚುಗಳು ಬಿದ್ದು ಒಂದಿಬ್ಬರಿಗೆ ಗಾಯವಾಗಿತ್ತು. ಹೀಗಾಗಿ ಕಟ್ಟಡದ ಹೆಂಚುಗಳನ್ನು ಪೂರ್ತಿಯಾಗಿ ತೆಗೆಯುವ ನಿರ್ಧಾರೊಂದಿಗೆ ಭಾನುವಾರ ಹಗಲು ಕೆಲಸ ಮಾಡಲಾಯಿತು. ಆಗ ಕಂಬವೊಂದು ಕುಸಿಯಿತು. ಇನ್ನು ಅಪಾಯ ಖಚಿತ ಎಂದು ಭಾವಿಸಿ ತುರ್ತು ಎಸ್‌ಡಿಎಂಸಿ ಸಭೆ ಕರೆದು ನಿರ್ಣಯಿಸಿ ಭಾನುವಾರ ರಾತ್ರಿ ನೆಲಸಮ ಮಾಡಲಾಯಿತು.
- ಪಂಚಾಕ್ಷರಿ, ಎಸ್‌ಡಿಎಂಸಿ ಅಧ್ಯಕ್ಷೆ
 
ನೆಲ್ಲಿಕಟ್ಟೆ ಸರ್ಕಾರಿ ಶಾಲಾ ಕಟ್ಟಡವನ್ನು ಅಪಾಯಕಾರಿ ಎಂಬ ನೆಲೆಯಲ್ಲಿ ಕೆಡವಲಾಗಿದೆ. ಮುಂದಿನ ಬಗ್ಗೆ ಇನ್ನೂ ನಿರ್ಧಾರ ಕೈಗೊಂಡಿಲ್ಲ. ಈ ಬಗ್ಗೆ ಶಾಸಕರ ಮುಂದಾಳುತ್ವದಲ್ಲಿ ಚರ್ಚಿಸಲಾಗುವುದು.
-ಲೋಕೇಶ್, ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net