

ವಿಜಯವಾಣಿ ಸುದ್ದಿಜಾಲ ಸಿದ್ದಾಪುರ
ರಾಜ್ಯದಾದ್ಯಂತ ಸುದ್ದಿಯಾಗುತ್ತಿರುವ ೪೦ ಪರ್ಸೆಂಟ್ ಕಮಿಷನ್ ವಿಚಾರ ನೆಲ್ಲಿಹುದಿಕೇರಿ ಗ್ರಾಮಸಭೆಯಲ್ಲೂ ಸದ್ದು ಮಾಡಿದೆ. ನಲ್ವತ್ತೇಕರೆ ಕಾಂಕ್ರಿಟ್ ರಸ್ತೆ ಸಂಪೂರ್ಣ ಕಳಪೆಯಾಗಿದೆ. ಕೇವಲ ೬ ತಿಂಗಳಲ್ಲಿ ರಸ್ತೆ ಹಾಳಾಗಿದೆ. ಅತ್ಯಂತ ಕೀಳು ಮಟ್ಟದ ಕಾಮಗಾರಿ ಮಾಡಲು ೪೦ ಪರ್ಸೆಂಟ್ ಕಮಿಷನ್ ಕಾರಣ ಎಂದು ಗ್ರಾಮಸ್ಥ ಪಿ.ಆರ್. ಭರತ್ ಗಂಭೀರ ಆರೋಪ ಮಾಡಿದರು.
ಮಂಗಳವಾರ ನೆಲ್ಲಿಹುದಿಕೇರಿ ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ಆಯೋಜಿಸಿದ್ದ ಗ್ರಾಮಸಭೆಯಲ್ಲಿ ರಸ್ತೆ ಕಾಮಗಾರಿ ಕಳಪೆಯಾಗಿರುವ ಬಗ್ಗೆ ನೇರ ಆರೋಪ ಮಾಡಿದರು. ಕಾಫಿ ಮಾರಾಟ ಮಾಡಿದ ಹಣದಿಂದ ರಸ್ತೆ ಮಾಡಿಲ್ಲ. ಸರ್ಕಾರದ ಹಣದಿಂದ ರಸ್ತೆ ಮಾಡಿದ್ದು, ಕಳಪೆ ಕಾಮಗಾರಿ ಮಾಡಲಾಗಿದೆ ಎಂದು ಅಸಮಾಧಾನ ವ್ಯಕ್ತ ಪಡಿಸಿದರು.
ಸಭೆ ಪ್ರಾರಂಭ ಆಗುತ್ತಿದ್ದಂತೆ ನೆಲ್ಲಿಹುದಿಕೇರಿಯಲ್ಲಿ ಸಾರ್ವಜನಿಕ ಶೌಚಾಲಯ ಇಲ್ಲದೆ ಜನ ಪರದಾಡುತ್ತಿದ್ದಾರೆಂದು ಸಿಪಿಎಂ ಕಾರ್ಯ ಕರ್ತರು ಆಡಳಿತ ಮಂಡಳಿ ವಿರುದ್ಧ ಘೋಷಣೆ ಕೂಗಿದರು. ತಕ್ಷಣ ಸಾರ್ವಜನಿಕ ಶೌಚಾಲಯ ನಿರ್ಣಯ ಮಾಡಬೇಕೆಂದು ಒತ್ತಾಯಿಸಿ ದರು. ೨ ತಿಂಗಳೊಳಗೆ ಸಮಸ್ಯೆ ಬಗೆಹರಿಸುವುದಾಗಿ ಅಧ್ಯಕ್ಷ ಎ.ಕೆ. ಹಕೀಂ ಭರವಸೆ ನೀಡಿದ ಬಳಿಕ ಪ್ರತಿಭಟನಾಕಾರರು ಶಾಂತರಾದರು. ಗ್ರಾಪಂ ಕಚೇರಿ ಎದುರು ಸಾರ್ವಜನಿಕ ಶೌಚಾಲಯದ ಮಾದರಿ ನಿರ್ಮಿಸಿ ಕಾರ್ಯಕರ್ತರು ಪ್ರತಿಭಟಿಸಿದರು.
೨೦೧೯ರ ಬಳಿಕ ಗ್ರಾಮಸಭೆ ನಡೆಸದೆ ಇದ್ದ ಆಡಳಿತ ಮಂಡಳಿ ವಿರುದ್ಧ ಹೊಸಮನೆ ವಸಂತ್ ಆಕ್ಷೇಪ ವ್ಯಕ್ತ ಪಡಿಸಿದರು. ಕಳೆದ ಗ್ರಾಮಸಭೆ ವರದಿಯಲ್ಲಿ ಸಭೆಯಲ್ಲಿ ಚರ್ಚೆಯಾದ ಹಲವು ವಿಚಾರಗಳು ಪ್ರಸ್ತಾಪವಾಗದೆ ಇದ್ದಿದ್ದಕ್ಕೆ ಎಂ.ಎ. ಅಜೀಜ್ ಆಕ್ಷೇಪ ವ್ಯಕ್ತ ಪಡಿಸಿ, ಕಾಟಾಚಾರಕ್ಕೆ ಸಭೆ ಮಾಡಿ ಗ್ರಾಮಸ್ಥರ ಸಮಯ ವ್ಯರ್ಥ ಮಾಡ ಬೇಡಿ ಎಂದರು.
ಬರಡಿ ಗ್ರಾಮದಲ್ಲಿ ಕೆಲವು ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಲು ವಿದ್ಯುತ್ ಕಂಬ ಅಳವಡಿಸಿ ವರ್ಷ ಕಳೆದಿದ್ದು, ವಿದ್ಯುತ್ ಸಂಪರ್ಕ ಕಲ್ಪಿಸದಿರುವ ಸೆಸ್ಕ್ ಅಧಿಕಾರಿಯನ್ನು ಅಕ್ಷಯ್ ತರಾಟೆಗೆ ತೆಗೆದುಕೊಂಡರು. ಎಂಜಿ ಕಾಲನಿಯಲ್ಲಿ ೧೧ಕೆವಿ ವಿದ್ಯುತ್ ತಂತಿಗಳು ಕೆಲವು ಮನೆ ಮೇಲೆ ಕೆಳಮಟ್ಟದಲ್ಲಿ ಹಾದುಹೋಗಿದ್ದು ಅಪಾಯಕಾರಿ ಸ್ಥಿತಿಯಲ್ಲಿದೆ ಎಂದು ಗ್ರಾಮಸ್ಥರು ಎಚ್ಚರಿಸಿದರು. ಇದೇ ತಂತಿಯಿಂದ ೨ ಜನ ಜೀಬ ಕಳೆದುಕೊಂಡಿದ್ದು, ೨ ಕಾಡಾನೆಗಳ ಸಾವು ಕೂಡಾ ಆಗಿದೆ. ಇನ್ನು ಹೆಚ್ಚಿನ ಅಪಘಾತ ಆಗುವ ಮೊದಲು ಸಮಸ್ಯೆ ಬಗೆಹರಿಸಬೇಕೆಂದು ಒತ್ತಾಯಿಸಿದರು.
ಗ್ರಾಮದಲ್ಲಿ ಕಸದ ಸಮಸ್ಯೆ ಮಿತಿ ಮೀರಿದ್ದು ಸಾಂಕ್ರಾಮಿಕ ರೋಗ ಹರಡುವ ಭೀತಿಯಿದೆ ಸಮರ್ಪಕ ತ್ಯಾಜ್ಯ ವಿಲೇವಾರಿ ಮಾಡಬೇಕೆಂದು ಒತ್ತಾಯಿಸಲಾಯಿತು. ಜಲಜೀವನ್ ಮಿಷನ್ ಕಾಮಗಾರಿಯಲ್ಲಿ ಬಾರೀ ಅವ್ಯವಹಾರ ಆಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದರು. ಈ ಹಿನ್ನೆಲೆಯಲ್ಲಿ ಕಾಮಗಾರಿ ಪ್ರಾರಂಭ ಮಾಡುವ ಮುನ್ನ ಟೆಂಡರುದಾರರು ಮತ್ತು ಗ್ರಾಮಸ್ಥರ ಸಭೆ ಕರೆಯಲು ತೀರ್ಮಾನಿಸಲಾಯಿತು.
ಸಭೆಯಲ್ಲಿ ನೋಡಲ್ ಅಧಿಕಾರಿ ಕೆ.ಪಿ. ಅನಿಲ್ ಕುಮಾರ್, ಪಿಡಿಒ ಎಚ್.ಎಸ್. ಅನಿಲ್ಕುಮಾರ್, ಪಿಡಬ್ಯುಡಿ ಇಂಜಿನಿಯರ್ ಫಯಾಜ್ ಅಹಮ್ಮದ್, ಗ್ರಾಮ ಲೆಕ್ಕಿಗ ಸಚಿನ್ ಕುಲಕರ್ಣಿ ಮತ್ತಿತರರು ಇದ್ದರು.