

ಮಂಗಳೂರು: ಬಜಪೆ ಸಮೀಪದ ನೆಲ್ಲಿದಡಿಗುತ್ತುವಿನ ಜುಮಾದಿ ಬಂಟ ದೈವಸ್ಥಾನದಲ್ಲಿ ದೈವಾರಾಧನೆಗೆ
ಮಂಗಳೂರು ವಿಶೇಷ ಆರ್ಥಿಕ ವಲಯ(ಎಂಎಸ್ಇಝಡ್) ಅಧಿಕಾರಿಗಳು ಅಡ್ಡಿಪಡಿಸುತ್ತಿರುವುದು
ಸರಿಯಲ್ಲ. ನೆಲ್ಲಿದಡಿಗುತ್ತುವಿನಲ್ಲಿ ಸಾಂಪ್ರದಾಯಿಕವಾಗಿ ನಡೆಯುವ ದೈವಾರಾಧನೆಗೆ
ಕೇಂದ್ರ, ರಾಜ್ಯ ಸರ್ಕಾರ ಹಾಗೂ ಎಂಎಸ್‌ಇಝಡ್ ಅವಕಾಶ ನೀಡಬೇಕು ಎಂದು ವಿಶ್ವಹಿಂದು
ಪರಿಷತ್ ಆಗ್ರಹಿಸಿದೆ.
ಇಲ್ಲಿನ ವಿಹಿಂಪ ಕಚೇರಿಯಲ್ಲಿ ಗುರುವಾರ ಪ್ರಾಂತ ಕಾರ್ಯದರ್ಶಿ ಶರಣ್ ಪಂಪ್‌ವೆಲ್
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನೆಲ್ಲಿದಡಿಗುತ್ತುವಿನ ದೈವಸ್ಥಾನಕ್ಕೆ 800 ವರ್ಷಗಳ
ಇತಿಹಾಸವಿದೆ. ಅಲ್ಲಿನ ತೀರ್ಥಬಾವಿಯ ನೀರು ದೈವಿಕ ನಂಬಿಕೆಯಂತೆ ಔಷಧವಾಗಿ
ಬಳಸಲಾಗುತ್ತಿದೆ. ಅನೇಕ ಮಂದಿ ಅನಾರೋಗ್ಯ ಪೀಡಿತರು ತೀರ್ಥಬಾವಿಯ ನೀರಿನಿಂದ
ಗುಣಮುಖರಾದ ದಾಖಲೆಯಿದೆ. ದೈವಸ್ಥಾನ ಇರುವ ಭೂಮಿಯನ್ನು ಎಸ್‌ಇಝಡ್‌ಗೆ ನೀಡಲು ಅಲ್ಲಿನ
ದೈವಾರಾಧಕರು ಒಪ್ಪಿಗೆ ನೀಡಿರಲಿಲ್ಲ. ಪರಿಹಾರದ ಹಣವನ್ನೂ ಪಡೆದಿರಲಿಲ್ಲ. ಈಗ ಏಕಾಏಕಿ
ದೈವದ ಆರಾಧನೆಗೆ ಎಸ್‌ಇಝಡ್ ಅಧಿಕಾರಿಗಳು ಅವಕಾಶ ನಿರಾಕರಣೆ ಮಾಡಿದ್ದಾರೆ. ಇಲ್ಲಿ
ಭಕ್ತರಿಗೆ ದೈವಾರಾಧನೆಗೆ ಮುಕ್ತ ಅವಕಾಶ ನೀಡುವವರೆಗೆ ವಿಹಿಂಪ ಹೋರಾಟ ನಡೆಸಲಿದೆ
ಎಂದರು.
18ರಂದು ಬೃಹತ್ ಪಾದಯಾತ್ರೆ:
ಬಜಪೆಯ ನೆಲ್ಲಿದಡಿಗುತ್ತು ಜುಮಾದಿ ಅರಸು ದೈವಸ್ಥಾನದಲ್ಲಿ ಆರಾಧನೆಗೆ ಮಂಗಳೂರು ವಿಶೇಷ
ಆರ್ಥಿಕ ವಲಯ (ಎಂಎಸ್ಇಝಡ್) ಅಧಿಕಾರಿಗಳು ಅವಕಾಶ ನಿರಾಕರಿಸಿರುವುದರ ವಿರುದ್ಧ
ನೆಲ್ಲಿದಡಿಗುತ್ತು ಸಂರಕ್ಷಣಾ ಸಮಿತಿ ನೇತೃತ್ವದಲ್ಲಿ ಮಾ.18ರಂದು ಬೃಹತ್ ಪಾದಯಾತ್ರೆ
ಹಮ್ಮಿಕೊಳ್ಳಲಾಗಿದೆ ಎಂದರು.
ಬಜಪೆ ಶಾರದಾ ಮಂಟಪದಿಂದ ನೆಲ್ಲಿದಡಿಗುತ್ತು ದೈವಸ್ಥಾನ ವರೆಗೆ ಈ ಪಾದಯಾತ್ರೆ
ನಡೆಯಲಿದೆ. ಈ ಪಾದಯಾತ್ರೆಗೆ ವಿಹಿಂಪ ಸೇರಿದಂತೆ ಹಿಂದು ಸಂಘಟನೆಗಳು ಬೆಂಬಲ
ವ್ಯಕ್ತಪಡಿಸಿವೆ. ದೈವಾರಾಧನೆ ವಿಚಾರದಲ್ಲಿ ತುಳುನಾಡಿನಲ್ಲಿ ಸಂಘರ್ಷಕ್ಕೆ ಅವಕಾಶ
ನೀಡಬೇಡಿ. ಈ ಹಿಂದೆ ಇಂತಹುದೇ ಪರಿಸ್ಥಿತಿ ಸೃಷ್ಟಿಯಾದಾಗ ಬಾಳ ಕಳವಾರು
ಬೆಂಕಿನಾಥೇಶ್ವರ ದೇವಸ್ಥಾನ, ಪೆರ್ಮುದೆ ಚಾವಡಿಯಲ್ಲಿ ದೈವಾರಾಧನೆಯನ್ನು ವಿಹಿಂಪ
ಹೋರಾಟದ ಮೂಲಕ ಉಳಿಸಿಕೊಂಡಿದೆ ಎಂದರು.
ದಿಗಂತ್ ನಾಪತ್ತೆ ಕೇಸ್ ಉನ್ನತ ತನಿಖೆಗೆ ಒಳಪಡಿಸಿ:
ಫರಂಗಿಪೇಟೆಯ ವಿದ್ಯಾರ್ಥಿ ದಿಗಂತ್ ನಾಪತ್ತೆಯಾಗಿ 10 ದಿನ ಕಳೆದರೂ ಪತ್ತೆಯಾಗಿಲ್ಲ.
ಸ್ಥಳೀಯ ಪೊಲೀಸರಿಂದ ಪತ್ತೆಕಾರ್ಯ ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಪ್ರಕರಣದ
ತನಿಖೆಯನ್ನು ಸಿಐಡಿ ಅಥವಾ ಸಿಬಿಐಗೆ ವಹಿಸಬೇಕು ಎಂದು ಶರಣ್ ಪಂಪ್‌ವೆಲ್
ಆಗ್ರಹಿಸಿದರು.
ದಿಗಂತ್ ಪತ್ತೆಯಾಗದಿರಲು ಪೊಲೀಸರ ವೈಫಲ್ಯ ಅಥವಾ ಬೇರೆ ಕಾರಣ ಇರಬಹುದು. ಮೂಡುಬಿದಿರೆ
ಸಮೀಪವೂ ನಿತೇಶ್ ಎಂಬ ಹುಡುಗ ನಾಪತ್ತೆಯಾಗಿದ್ದು, 20 ದಿನ ಕಳೆದರೂ ಪತ್ತೆಯಾಗಿಲ್ಲ.
ಈ ಹಿನ್ನೆಲೆಯಲ್ಲಿ ಮುಂದಿನ ಹೋರಾಟದ ಬಗ್ಗೆ ನಿರ್ಧರಿಸಿ ಶುಕ್ರವಾರ ತಿಳಿಸಲಾಗುವುದು
ಎಂದರು.
ವಿಹಿಂಪ ಜಿಲ್ಲಾಧ್ಯಕ್ಷ ಪುರುಷೋತ್ತಮ ಕೆ.ಎಚ್., ಕಾರ್ಯದರ್ಶಿ ಶಿವಾನಂದ ಮೆಂಡನ್,
ಪ್ರವೀಣ್ ಕುತ್ತಾರ್ ಇದ್ದರು.