

ವಿಜಯವಾಣಿ ಸುದ್ದಿಜಾಲ ನೆಲಮಂಗಲ
ಸರ್ಕಾರಿ ಶಾಲೆಗಳಿಗೆ ಮೂಲಸೌಕರ್ಯ ಹಾಗೂ ಮಕ್ಕಳ ಶೈಕ್ಷಣಿಕ ಪ್ರಗತಿಗೆ ರೋಟರಿ ಸಂಸ್ಥೆ ಸದಾ ನೆರವು ನೀಡಲು ಸಿದ್ಧವಿದೆ ಎಂದು ರೋಟರಿ ಅಧ್ಯಕ್ಷ ಎಂ.ಟಿ.ನವೀನ್‌ಕುಮಾರ್ ಭರವಸೆ ನೀಡಿದರು.
ತಾಲೂಕಿನ ಬೂದಿಹಾಲ್ ಗ್ರಾಪಂನ ಯರಮಂಚನಹಳ್ಳಿಯ ಸರ್ಕಾರಿ ಶಾಲೆಯಲ್ಲಿ ರೋಟರಿ ಸಂಸ್ಥೆಯಿಂ ಆಯೋಜಿಸಿದ್ದ ಸಮವಸ್ತ್ರ ಉಚಿತ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ತಾಲೂಕಿನಾದ್ಯಂತ ಹಲವು ವರ್ಷಗಳಿಂದ ರೋಟರಿ ಸಂಸ್ಥೆ ಶೈಕ್ಷಣಿಕ ಪ್ರಗತಿಗೆ ಸಾಕಷ್ಟು ಕಾರ್ಯಕ್ರಮ ಹಮ್ಮಿಕೊಂಡಿದೆ. ವಿದ್ಯಾರ್ಥಿಗಳು ಶ್ರದ್ಧೆಯಿಂದ ಕಲಿಯುವ ಮೂಲಕ ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ರೂಪುಗೊಳ್ಳಬೇಕು. ನಿರಂತರ ಅಭ್ಯಾಸದಿಂದ ಮಾತ್ರ ಸಾಧನೆ ಮಾಡಲು ಸಾಧ್ಯ ಎಂದರು.
ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ಸಾಕಷ್ಟು ಮಂದಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದು, ವಿದ್ಯಾರ್ಥಿಗಳು ಅಂತಹ ಮಹನೀಯರ ತತ್ವಾದರ್ಶ ಬೆಳೆಸಿಕೊಳ್ಳಬೇಕು. ಶೈಕ್ಷಣಿಕ ವಿಚಾರವಾಗಿ ಯಾವುದೇ ಸಮಸ್ಯೆ ಇದ್ದರೂ ರೋಟರಿ ಸಂಸ್ಥೆ ಗಮನಕ್ಕೆ ತಂದರೆ ಪರಿಹರಿಸಲಾಗುವುದು ಎಂದರು.
ರೋಟರಿ ಟ್ರಸ್ಟ್ ಅಧ್ಯಕ್ಷ ಎಂ.ಎನ್.ಹರೀಶ್‌ಕುಮಾರ್ ಮಾತನಾಡಿ, ದಶಕದಿಂದ ತಾಲೂಕಿನಾದ್ಯಂತ ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ರೋಟರಿ ಸಂಸ್ಥೆಯಿಂದ ಸಹಾಯ ಪಡೆದುಕೊಂಡ ಸಾಕಷ್ಟು ಮಂದಿ ಉನ್ನತ ಶಿಕ್ಷಣ ಪಡೆದು ಸಾಧಕರಾಗಿದ್ದಾರೆ ಎಂದರು.
ಖಾಸಗಿ ಶಾಲೆಗಳಿಗೆ ಹೊಲಿಕೆ ಮಾಡಿದರೆ ಸರ್ಕಾರಿ ಶಾಲೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿದ್ದಾರೆ. ನುರಿತ ಶಿಕ್ಷಕರಿದ್ದಾರೆ. ಆದ್ದರಿಂದ ವಿದ್ಯಾರ್ಥಿಗಳು ಸರ್ಕಾರಿ ಶಾಲೆ ಎಂಬ ಕೀಳರಿಮೆ ಬಿಟ್ಟು ಅಭ್ಯಾಸಕ್ಕೆ ಆದ್ಯತೆ ನೀಡಬೇಕು ಎಂದರು.
ರೋಟರಿ ಸಂಸ್ಥೆ ಹಾಗೂ ರೋಟರಿ ಟ್ರಸ್ಟ್ ಅಧ್ಯಕ್ಷ ಎಂ.ಎನ್.ಹರೀಶ್‌ಕುಮಾರ್ ಅವರ ಸಹಕಾರದಲ್ಲಿ ಶಾಲೆಯ 20ಕ್ಕೂ ಹೆಚ್ಚು ಮಕ್ಕಳಿಗೆ ಉಚಿತವಾಗಿ ಸಮವಸ್ತ್ರ ವಿತರಣೆ ಮಾಡಲಾಗಿದೆ ಎಂದು ರೋಟರಿ ಕಾರ್ಯದರ್ಶಿ ಶಿವರಾಮಯ್ಯ ತಿಳಿಸಿದರು.
ರೋಟರಿ ನಿರ್ದೇಶಕ ಹನುಮಂತರಾಜು, ಸದಸ್ಯರಾದ ಹರೀಶ್, ಮಂಜಣ್ಣ, ಇನ್ನರ್‌ವ್ಹೀಲ್ ಮಾಜಿ ಅಧ್ಯಕ್ಷರಾದ ಕುಸುಮಾ, ಕೋಮಲಾ, ಮತ್ತಿತರರು ಉಪಸ್ಥಿತರಿದ್ದರು.